ಹೈಲೈಟ್ಸ್:
- ಮತ್ತೆ ತೆರೆಹಂಚಿಕೊಂಡ ‘ಆ ದಿನಗಳು’ ಜೋಡಿ
- ಡಿಟಿಎಸ್ ಚಿತ್ರಕ್ಕಾಗಿ ಒಂದಾದ ಚೇತನ್ – ಅರ್ಚನಾ ಶಾಸ್ತ್ರಿ
- ಆಕ್ಷನ್-ಥ್ರಿಲ್ಲರ್ ಸಿನಿಮಾ ‘ಡಿಟಿಎಸ್’
‘ಆ ದಿನಗಳು’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ನಟ ಚೇತನ್ (Chethan) ಮತ್ತು ನಟಿ ಅರ್ಚನಾ ಶಾಸ್ತ್ರಿ (Archana Shastri) ಈಗ ಮತ್ತೆ ಒಟ್ಟಿಗೆ ನಟಿಸುತ್ತಿದ್ದಾರೆ. ‘ಡಿಟಿಎಸ್’ (DTS) ಎಂಬ ಈ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ.
‘ಮೈನಾ’ ಮತ್ತು ‘ಆ ದಿನಗಳು’ ಖ್ಯಾತಿಯ ನಟ ಚೇತನ್ ಈಗ ಸಿಕ್ಕಾಪಟ್ಟೆ ಸೋಂಬೇರಿಯಾಗಿದ್ದಾರೆ! ನಿಜ, ಆದರೆ ಅದು ಸಿನಿಮಾಗಾಗಿ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ‘ಡಿಟಿಎಸ್’ ಅಂದರೆ, ‘ಡೇರ್ ಟು ಸ್ಲೀಪ್’ (Dare To Sleep) ಎಂಬ ಸಿನಿಮಾದಲ್ಲಿ ಅತ್ಯಂತ ಸೋಮಾರಿತನ ಇರುವ ಹುಡುಗನಾಗಿ ನಟ ಚೇತನ್ ನಟಿಸುತ್ತಿದ್ದಾರೆ.
ಹೈದರಾಬಾದ್‌ನಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ. ಇದು ಆಕ್ಷನ್, ಥ್ರಿಲ್ಲರ್ ಸಿನಿಮಾ ಆಗಿದೆ. ಈ ಮೂಲಕ ಅವರು ಟಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಜನಪ್ರಿಯ ವೆಬ್ ಸೀರಿಸ್ ನಿರ್ದೇಶನ ಮಾಡಿರುವ ಅಭಿರಾಮ್ ಪಿಲ್ಲ ‘ಡೇರ್ ಟು ಸ್ಲೀಪ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.
ವಿಶೇಷ ಎಂದರೆ ‘ಆ ದಿನಗಳು’ ಸಿನಿಮಾದಲ್ಲಿ ನಟ ಚೇತನ್‌ಗೆ ಜೋಡಿಯಾಗಿದ್ದ ನಟಿ ಅರ್ಚನಾ ಶಾಸ್ತ್ರಿ ಈ ಸಿನಿಮಾದಲ್ಲೂ ನಟ ಚೇತನ್ ಅವರ ಜತೆ ನಟಿಸುತ್ತಿದ್ದಾರೆ. 15 ವರ್ಷಗಳ ನಂತರ ಮತ್ತೆ ಇವರಿಬ್ಬರೂ ಒಟ್ಟಿಗೆ ನಟಿಸುತ್ತಿದ್ದಾರೆ. ‘15 ವರ್ಷಗಳ ನಂತರ ಮತ್ತೆ ನಾವು ಭೇಟಿಯಾಗಿದ್ದೇವೆ. ನಾವಿಬ್ಬರೂ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸುತ್ತಿರೋದು ನಿಜಕ್ಕೂ ವಿಶೇಷ ಎನ್ನಿಸಿತು. ‘ಆ ದಿನಗಳು’ ಚಿತ್ರ ನಟಿ ಅರ್ಚನಾ ಅವರಿಗೆ ಮೊದಲ ಸಿನಿಮಾ ಆಗಿತ್ತು. ಆ ನಂತರ ನಾನು ಅವರನ್ನು ಭೇಟಿಯಾಗಿರಲಿಲ್ಲ. ಆದರೂ ಅಂದಿನ ಸ್ನೇಹ ಹಾಗೇ ಇತ್ತು. ಅವರಿಗೂ ಬಹಳ ಖುಷಿಯಾಯಿತು. ನಟಿ ಅರ್ಚನಾ ಅಂದಿನಿಂದಲೂ ನನ್ನ ಕೆಲಸಗಳನ್ನು ಫಾಲೋ ಮಾಡುತ್ತಿರುವುದಾಗಿ ಹೇಳಿದರು. ನನ್ನ ಕೆಲಸಗಳನ್ನು ಮೆಚ್ಚಿ ಮಾತನಾಡಿದ್ದು ಖುಷಿ ಕೊಟ್ಟಿತು. ಡಿಟಿಎಸ್ (ಡೇರ್ ಟು ಸ್ಲೀಪ್) ಸಿನಿಮಾದಲ್ಲಿ ಅವರ ಮತ್ತು ನನ್ನ ಕಾಂಬಿನೇಷನ್ ಬೇರೆ ಥರ ಇದೆ. ಬಹಳ ಸ್ಟ್ರಾಂಗ್ ಆದ ಪಾತ್ರದಲ್ಲಿ ನಟಿ ಅರ್ಚನಾ ಶಾಸ್ತ್ರಿ ನಟಿಸುತ್ತಿದ್ದಾರೆ’ ಎಂದಿದ್ದಾರೆ ನಟ ಚೇತನ್.
ಅಂದ್ಹಾಗೆ, ನಟಿ ಅರ್ಚನಾ ಶಾಸ್ತ್ರಿ ‘ಆ ದಿನಗಳು’ ಸಿನಿಮಾ ನಂತರ ತೆಲುಗು ಸಿನಿ ಅಂಗಳದಲ್ಲಿ ಬಿಝಿಯಾಗಿದ್ದರು. ಈಗ ವೆಬ್ ಸೀರಿಸ್‌ನಲ್ಲೂ ನಟಿ ಅರ್ಚನಾ ಶಾಸ್ತ್ರಿ ನಟಿಸುತ್ತಿದ್ದಾರೆ.
ಗೋವಾ ಮತ್ತು ಹೈದರಾಬಾದ್‌ನಲ್ಲಿ ‘ಡಿಟಿಎಸ್’ (ಡೇರ್ ಟು ಸ್ಲೀಪ್) ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿದೆ. ಈಗಾಗಲೇ 30 ದಿನಗಳ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಇನ್ನು 10 ದಿನಗಳ ಶೂಟಿಂಗ್ ಬಾಕಿ ಇದೆಯಂತೆ. ‘ಡೇರ್ ಟು ಸ್ಲೀಪ್’ ಚಿತ್ರದಲ್ಲಿ ಟಾಲಿವುಡ್‌ನ ಸುನಿಲ್, ಕಬೀರ್ ದುಹಾನ್ ಸಿಂಗ್ ನಟಿಸುತ್ತಿದ್ದಾರೆ. ‘ಅತಿರಥ’ ಸಿನಿಮಾದಲ್ಲಿ ನಟ ಚೇತನ್ ಜತೆ ಇವರು ನಟಿಸಿದ್ದರು.