Karnataka news paper

ತೆರೆಯ ಪ್ರೇಮಿಗಳ ಸಾರ್ವಕಾಲಿಕ ಪ್ರೇಮ ಧ್ವನಿ ಲತಾ ಮಂಗೇಶ್ಕರ್


ಬಬಿತಾ.ಎಸ್
ಸುಮಾರು 1949ರಲ್ಲಿ’ಆಯೇಗಾ…ಆಯೇಗಾ…ಆನೇವಾಲಾ…’ ಎಂದ ನಟಿ ಮಧುಬಾಲಾ ಮತ್ತು 2004ರಲ್ಲಿ’ಹಮ್‌ ತೋ ಜೈಸೇ ಹೇ ವೈಸೇ ರಹೇಂಗೆ…’ ಎಂದ ಪ್ರೀತಿ ಝಿಂಟಾ ಮಧ್ಯೆ ಐದೂವರೆ ದಶಕಗಳ ಅಂತರವಿದೆ. ಎಲ್ಲಿಯ ಮಧುಬಾಲಾ? ಎಲ್ಲಿಯ ಪ್ರೀತಿ ಝಿಂಟಾ? ಕಂಗಳಲ್ಲೇ ಪ್ರೇಮ ಭಾವವನ್ನು ಕಲಾತ್ಮಕವಾಗಿ ಅರುಹಿದ ಮಧುಬಾಲಾ ಅವರ ಪ್ರೇಮದ ಪರಿಗೂ, ಕುಣಿದಾಡುತ್ತಲೇ ಮನದಾಳದ ಮಾತುಗಳನ್ನು ಹೇಳಿದ ಪ್ರೀತಿ ಝಿಂಟಾ ಅವರ ಚಿನಕುರಳಿಯಂಥ ಪ್ರೇಮಕ್ಕೂ ಧ್ವನಿಯಾದ ಹೆಗ್ಗಳಿಕೆ ಗಾನಕೋಗಿಲೆ ಲತಾ ಮಂಗೇಶ್ಕರ್‌ ಅವರದ್ದು. ಸತತ 55 ವರ್ಷ ಕಾಲ ಸಿನಿ ಪ್ರೇಮಿಕೆಯರ ಎಲ್ಲಾ ಪ್ರೇಮ ಭಾವಗಳಿಗೂ ‘ಯುವ ಧ್ವನಿ’ಯಾಗಿದ್ದ ಲತಾ ದೀದಿ, ತೆರೆಮರೆಯಲ್ಲಿ ಹಾಡಿಕೊಂಡೇ ಅನೇಕ ನಟಿಯರನ್ನು ಬೆಳ್ಳಿ ತೆರೆಯಲ್ಲಿ ಪ್ರೇಮದೇವತೆಯರನ್ನಾಗಿಸಿದ್ದರು.

ಮಧುಬಾಲಾ ಮೂಲಕ ‘ಪ್ಯಾರ್‌ ಕಿಯಾ ತೋ ಢರ್ನಾ ಕ್ಯಾ’ ಎಂದು ನಿರ್ಭಿಡೆಯಿಂದ ಕೇಳಿದ್ದ ಅವರು, ಆ ನಂತರ ‘ಪ್ಯಾರ್‌ ಹುವಾ ಇಕ್‌ರಾರ್‌ ಹುವಾ’ ಎಂದು ನಟಿ ನರ್ಗೀಸ್‌ಗಾಗಿ ಹಾಡಿ ಪ್ರೇಯಸಿಯ ತಲ್ಲಣಕ್ಕೆ ಧ್ವನಿಯಾಗಿದ್ದರು. ಕಣ್ಣೋಟದಲ್ಲೇ ಪ್ರೇಮಿಗಳ ಮನಸ್ಸಿಗೆ ಲಗ್ಗೆ ಇಡುವ ವಹೀದಾ ರೆಹಮಾನ್‌ಗೆ ಲತಾ ದೀದಿ ಹಾಡಿದ ‘ಆಜ್‌ ಫಿರ್‌ ಜೀನೆ ಕಿ ತಮನ್ನಾ ಹೇ’ ಹಾಡು ಈಗಲೂ ಹಿತ. ಪ್ರೇಮ ನಾಯಕಿ ಮೀನಾ ಕುಮಾರಿಗೆ ಲತಾ ಹಾಡಿದ ಪ್ರತಿ ಹಾಡು ಈಗಲೂ ಅವರಂತೆಯೇ ಅಜರಾಮರ. ಅದು ‘ಪಕೀಜಾ’ ಚಿತ್ರದ ‘ಇನ್ಹಿ ಲೋಗೋನೆ…’ ಆಗಿರಬಹುದು ಅಥವಾ ‘ದಿಲ್‌ ಅಪ್ನಾ ಔರ್‌ ಪ್ರೀತ್‌ ಪರಾಯ’ ಚಿತ್ರದ ‘ಅಜೀಬ್‌ ದಾಸ್ತಾ ಹೇ ಯೇ…ಕಹಾ ಶುರು ಕಹಾ ಖತಂ’ ಹಾಡುಗಳು ಈಗಲೂ ತೆರೆಯ ಮೇಲಿನ ಮೀನಾಕುಮಾರಿಯ ಅಪೂರ್ವ ಪ್ರೇಮಭಾವಗಳ ರೂಪಕವಾಗಿ ಗಮನ ಸೆಳೆಯುತ್ತವೆ.

ಲತಾಜೀ ನನ್ನ ಧ್ವನಿ ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಸಾಕ್ಷಾತ್‌ ಸರಸ್ವತಿಯೇ ಆಶೀರ್ವಾದ ಮಾಡಿದ ಹಾಗಾಯಿತು – ಅರ್ಚನಾ ಉಡುಪ
ನಟಿ ನೂತನ್‌ಗೆ ಹಾಡಿದ ‘ದಿಲ್‌ ಕಿ ನಝರ್‌ ಸೇ’ ಮತ್ತು ‘ಪಡೋಸನ್‌’ ಚಿತ್ರದಲ್ಲಿ ಆಧುನಿಕ ಯುವತಿಯಾಗಿ ನಟಿಸಿದ ಸಾಯಿರಾಬಾನು ಅವರ ಮಲ್ಲಿಗೆಯಂಥ ಮನಸ್ಸಿಗೂ ‘ಮೇ ಚಲೀ ಮೇ ಚಲೀ’ ಹಾಡಿನ ಮೂಲಕ ಧ್ವನಿಯಾದ ದೀದಿ, ಅದರ ನಂತರ ಕೃಷ್ಣಸುಂದರಿ ರೇಖಾಗೆ ‘ಯೇ ಕಹಾ ಆ ಗಯೇ ಹಮ್‌’ ‘ತೇರೆ ಬಿನಾ ಜಿಯಾ ಜಾಯೇ ನಾ’ ಎಂಬ ಕ್ಲಾಸಿಕ್‌ ಹಾಡುಗಳ ಜತೆಗೆ ‘ಪರ್‌ದೇಸಿಯಾ…’ ಮುಂತಾದ ಹಾಡುಗಳ ಮೂಲಕ ಪ್ರೀತಿಯ ಉತ್ಕಟತೆಯನ್ನೂ ಅರುಹಿದವರು ಲತಾ. ಅವರ ಈ ಪ್ರೇಮ ಧ್ವನಿ 80ರ ದಶಕದಲ್ಲೂ ಭಾವಪರಶರನ್ನಾಗಿಸಿತು. ಆಗ ಅವರು ಡ್ರೀಮ್‌ ಗರ್ಲ್ ಹೇಮಾಮಾಲಿನಿಗೆ ಹಾಡಿದ ‘ತೂನೆ ಓ..ರಂಗೀಲೇ ಕೈಸೆ ಜಾದು ಕಿಯಾ’ ಹಾಡಿನಿಂದ ಹಿಡಿದು ಸೂಪರ್‌ಸ್ಟಾರ್‌ ಶ್ರೀದೇವಿಗೆ ಹಾಡಿದ ‘ತೇರೆ ಮೇರೆ ಹೋಂಟೊ ಪೇ’, ‘ಮೇರೆ ಹಾತೋ ಪೆ ನೌ ನೌ ಚೂಡಿಯಾ ಹೇ’, ಅಮೃತಾ ಸಿಂಗ್‌ಗೆ ಹಾಡಿದ ‘ಜಬ್‌ ಹಮ್‌ ಜವಾ ಹೋಂಗೆ’, ಟೀನಾ ಮುನೀಂಗೆ ಹಾಡಿದ ‘ಮೇ ಸೋಲಾ ಬರಸ್‌ ಕಿ…’ ಹಾಡುಗಳು ಈಗಲೂ ಹದಿಹರೆಯದ ಪ್ರೇಮಿಗಳ ಮನವನ್ನು ಬೆಚ್ಚಗಾಗಿಸುತ್ತವೆ. ‘ಹೀರೊ’ ಸಿನಿಮಾದಲ್ಲಿ ಮೀನಾಕ್ಷಿ ಶೇಷಾದ್ರಿಗೆ ಹಾಡಿದ ‘ಪ್ಯಾರ್‌ ಕರ್ನೆವಾಲೆ’ ಹಾಡಿನಲ್ಲೂ ಅದೇ ನಿರ್ಭಿಡೆಯ ಯುವ ಧ್ವನಿ.

ಕ್ರಿಕೆಟ್ ಪ್ರೇಮಿ ಲತಾ ಮಂಗೇಶ್ಕರ್ ‘ಟೀಮ್ ಇಂಡಿಯಾ’ಗೆ ನೀಡಿದ್ದು ಮರೆಯಲಾರದ ಕೊಡುಗೆ..!
ಇನ್ನೇನು ಲತಾ ದೀದಿಯ ಧ್ವನಿ ತುಂಬಾ ಮಾಗಿದೆ. ಅವರಿನ್ನು ಪ್ರೇಮಗೀತೆ ಹಾಡಲಾರರು ಎಂಬೊಂದು ಅಭಿಪ್ರಾಯ ವ್ಯಕ್ತವಾಗುತ್ತಿದ್ದಾಗಲೇ 1989ರಲ್ಲಿ ಬಂದ ‘ಮೈನೆ ಪ್ಯಾರ್‌ ಕಿಯಾ’ ಸಿನಿಮಾದ ಎಲ್ಲಾ ಹಾಡುಗಳ ಮೂಲಕ ನವ ನಟಿ ಭಾಗ್ಯಶ್ರೀಯ ಪ್ರೇಮದ ಪಿಸುಮಾತುಗಳಿಗೆ ಅಷ್ಟೇ ಯಂಗ್‌ ಆಗಿ ಧ್ವನಿ ನೀಡಿದ ಅವರು ಆ ನಂತರ ‘ಹಮ್‌ ಆಪ್ಕೆ ಹೇ ಕೌನ್‌’ ಸಿನಿಮಾದಲ್ಲಿಯೂ ಮಾಧುರಿ ದೀಕ್ಷಿತ್‌ರ ಪ್ರೇಮದ ಚೆಲ್ಲಾಟಗಳನ್ನು ಹಾಡಾಗಿಸಿ, ‘ದಿಲ್‌ ತೊ ಪಾಗಲ್‌ ಹೇ’ ಸಿನಿಮಾದಲ್ಲಿಆಕೆಯ ಅವ್ಯಕ್ತ ಪ್ರೀತಿಯನ್ನು ಹಾಡಿನ ಮೂಲಕವೇ ಪ್ರೇಮಕಾವ್ಯವನ್ನಾಗಿಸಿದ್ದರು. ಆ 90ರ ದಶಕದಲ್ಲಿಆಗಲೇ ಇತರ ಹಿನ್ನೆಲೆ ಗಾಯಕಿಯರು ಪ್ರವರ್ಧಮಾನಕ್ಕೆ ಬಂದಿದ್ದರು. ಆದರೂ ಆಗ ಉದಯೋನ್ಮುಖ ನಟಿಯರ ಸಿನಿಮಾಗಳಿಗೆ ಹಾಡುವ ಮೊದಲ ಅವಕಾಶ ಲತಾ ದೀದಿಗೇ ಹೋಗುತ್ತಿತ್ತು! ಓರ್ವ ಗಾಯಕಿ ಹೀಗೆ ಅಖಂಡ ಅರ್ಧ ಶತಮಾನ ಯುವನಟಿಯರಿಗೆ ಹಾಡುವುದು ಲತಾಗೆ ಮಾತ್ರ ಸಾಧ್ಯವೇನೋ.



Read more

[wpas_products keywords=”deal of the day party wear dress for women stylish indian”]