Karnataka news paper

‘ಆದಷ್ಟು ಬೇಗ ಈ ತಪ್ಪು ತಿದ್ದಿಕೊಳ್ಳಿ’ ಕೊಹ್ಲಿಗೆ ಗವಾಸ್ಕರ್‌ ವಾರ್ನಿಂಗ್!


ಅಹಮದಾಬಾದ್‌: ದಕ್ಷಿಣ ಆಫ್ರಿಕಾ ವಿರುದ್ಧ ಓಡಿಐ ಸರಣಿಯಲ್ಲಿ ಎಸಗಿದ್ದ ತಪ್ಪನ್ನೇ ವಿರಾಟ್‌ ಕೊಹ್ಲಿ ವೆಸ್ಟ್ ಇಂಡೀಸ್‌ ವಿರುದ್ಧ ಮೊದಲನೇ ಏಕದಿನ ಪಂದ್ಯದಲ್ಲಿ ಮಾಡಿದ್ದಾರೆಂದು ಬ್ಯಾಟಿಂಗ್ ದಿಗ್ಗಜ ಸುನೀಲ್‌ ಗವಾಸ್ಕರ್‌ ಮಾಜಿ ನಾಯಕನ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಭಾನುವಾರ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ವೆಸ್ಟ್‌ ಇಂಡೀಸ್‌ ನೀಡಿದ್ದ 177 ರನ್‌ ಗುರಿ ಹಿಂಬಾಲಿಸಿದ್ದ ಭಾರತ ತಂಡಕ್ಕೆ ರೋಹಿತ್‌ ಶರ್ಮಾ ಹಾಗೂ ಇಶಾನ್‌ ಕಿಶನ್ ಜೋಡಿ 84 ರನ್‌ ಜೊತೆಯಾಟವಾಡುವ ಮೂಲಕ ಭರ್ಜರಿ ಆರಂಭ ತಂದುಕೊಟ್ಟಿದ್ದರು. ಆದರೆ ಅರ್ಧಶತಕ ಸಿಡಿಸಿ ರೋಹಿತ್‌ ಶರ್ಮಾ ವಿಕೆಟ್‌ ಒಪ್ಪಿಸಿದರು.

ಬಳಿಕ ಕ್ರೀಸ್‌ಗೆ ಬಂದ ವಿರಾಟ್‌ ಕೊಹ್ಲಿ ವೇಗಿ ಅಲ್ಝಾರಿ ಜೋಸೆಫ್‌ ಎದುರು ಆಡಿದ ಮೊದಲ ಎಸೆತದಲ್ಲೇ ಔಟ್‌ ಸೈಡ್‌ ಎಡ್ಜ್‌ ಮಾಡಿಕೊಂಡರು. ನಂತರದ ಎಸೆತದಲ್ಲೂ ಅಪ್ಪರ್‌ ಕಟ್‌ ಮೂಲಕ ಫೋರ್‌ ಬಾರಿಸಿದ್ದರು. ಆ ಮೂಲಕ ತವರು ಮಣ್ಣಿಯಲ್ಲಿ ವೇಗವಾಗಿ 5000 ಓಡಿಐ ರನ್‌ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್‌ ಎನಿಸಿಕೊಂಡರು. ಆದರೆ ಎದುರಿಸಿದ ನಾಲ್ಕನೇ ಎಸೆತದಲ್ಲಿ ಅನಗತ್ಯ ಪುಲ್‌ ಶಾಟ್‌ಗೆ ಕೈ ಹಾಕಿ ಡೀಪ್‌ ಫೈನ್‌ಲೆಗ್‌ ಫೀಲ್ಡರ್‌ಗೆ ಕ್ಯಾಚಿತ್ತು ಹೊರನಡೆದರು. ಆ ಮೂಲಕ ಕೇವಲ 8 ರನ್‌ಗಳಿಗೆ ಸೀಮಿತಾದರು.

ವಿಂಡೀಸ್‌ ಎದುರು 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದ ಭಾರತ!

ವಿರಾಟ್‌ ಕೊಹ್ಲಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದ ಹೊರತಾಗಿಯೂ ಭಾರತ ತಂಡ ಅಂತಿಮವಾಗಿ 6 ವಿಕೆಟ್‌ಗಳಿಂದ ಗೆಲುವು ದಾಖಲಿಸಿತು. ಆ ಮೂಲಕ ಮೂರು ಪಂದ್ಯಗಳ ಓಡಿಐ ಸರಣಿಯಲ್ಲಿ ರೋಹಿತ್‌ ಶರ್ಮಾ ನಾಯಕತ್ವದ ಭಾರತ ತಂಡ 1-0 ಮುನ್ನಡೆ ಪಡೆದುಕೊಂಡಿದೆ.

ಕಳೆದ ತಿಂಗಳು ದಕ್ಷಿಣ ಅಫ್ರಿಕಾ ಬೌಲರ್‌ಗಳು ಕೂಡ ಇದೇ ತಂತ್ರವನ್ನು ವಿರಾಟ್‌ ಕೊಹ್ಲಿ ಮೇಲೆ ಪ್ರಯೋಗ ಮಾಡಿದ್ದರು ಎಂದು ಸ್ಟಾರ್‌ ಸ್ಪೋರ್ಟ್ಸ್ ಚರ್ಚೆಯ ವೇಳೆ ಸುನೀಲ್ ಗವಾಸ್ಕರ್‌ ಹೇಳಿದರು.

ವಿರಾಟ್‌ ಕೊಹ್ಲಿಗೆ ಡಕ್‌ಔಟ್‌ ಆಗಲು ಇಷ್ಟವಿಲ್ಲ ಅಥವಾ ಶಾರ್ಟ್‌ ಎಸೆತಗಳನ್ನು ಸ್ಟಂಪ್ಸ್‌ ಹಿಂದೆ ಬಿಡಲು ಕೂಡ ಇಷ್ಟವಿಲ್ಲ. ಶಾರ್ಟ್‌ ಎಸೆತಗಳಿಗೆ ಹುಕ್‌ ಶಾಟ್‌ಗೆ ಕೈ ಹಾಕುತ್ತಾರೆ. ಹಾಗಾಗಿ ಭಾರತದ ಮಾಜಿ ನಾಯಕನನ್ನು ಔಟ್‌ ಆಡಲು ಬೌಲರ್‌ಗಳಿಗೆ ಇದು ಅದ್ಭುತ ತಂತ್ರ. ಇನ್ನುಳಿದ ಎರಡು ಪಂದ್ಯಗಳಲ್ಲಿ ಕೊಹ್ಲಿ ಎಚ್ಚರದಿಂದ ಆಡಬೇಕಾದ ಅಗತ್ಯವಿದೆ ಎಂದು ಗವಾಸ್ಕರ್‌ ಸಲಹೆ ನೀಡಿದ್ದಾರೆ.

ಕೇವಲ 8 ರನ್‌ ಗಳಿಸಿ ಔಟಾದರೂ ಇತಿಹಾಸ ಬರೆದ ವಿರಾಟ್‌ ಕೊಹ್ಲಿ!

“ಕಳೆದ ಓಡಿಐ ಸರಣಿಯಲ್ಲಿಯೂ ದಕ್ಷಿಣ ಆಫ್ರಿಕಾ ವೇಗಿಗಳು ಕೂಡ ವಿರಾಟ್‌ ಕೊಹ್ಲಿಗೆ ಬೌನ್ಸರ್‌ ಹಾಕುವ ಮೂಲಕ ಇದೇ ತಂತ್ರವನ್ನು ರೂಪಿಸಿದ್ದರು. ಏಕೆಂದರೆ ವಿರಾಟ್‌ ಕೊಹ್ಲಿ ಹುಕ್‌ ಶಾಟ್‌ ಹೊಡೆಯುವುದನ್ನು ತುಂಬಾ ಇಷ್ಟಪಡುವ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ,” ಎಂದು ಬ್ಯಾಟಿಂಗ್‌ ದಿಗ್ಗಜ ಹೇಳಿದರು.

“ವಿರಾಟ್‌ ಪುಲ್‌ ಮಾಡುವ ವೇಳೆ ಚೆಂಡು ಇನ್ನಷ್ಟು ಬೌನ್ಸ್‌ ಆಯಿತು. ಈ ಕಾರಣದಿಂದಾಗಿ ಚೆಂಡು ಬ್ಯಾಟ್‌ನ ಮಧ್ಯ ಭಾಗಕ್ಕೆ ಸಿಗಲಿಲ್ಲ. ಚೆಂಡು ಟಾಪ್ ಎಡ್ಜ್‌ ಆದ ಕಾರಣ ಕ್ಯಾಚ್‌ ಆಯಿತು. ಹಾಗಾಗಿ ವಿರಾಟ್‌ ಕೊಹ್ಲಿ ಮುಂದಿನ ಎರಡು ಪಂದ್ಯಗಳಲ್ಲಿ ಈ ಶಾಟ್‌ ಆಡುವಾಗ ಇನ್ನಷ್ಟು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ,” ಎಂದು ಸುನೀಲ್‌ ಗವಾಸ್ಕರ್‌ ತಿಳಿಸಿದರು.

ವೆಸ್ಟ್‌ ಇಂಡೀಸ್‌ Vs ಭಾರತ ಮೊದಲನೇ ಏಕದಿನ ಪಂದ್ಯದ ಸ್ಕೋರ್‌ಕಾರ್ಡ್

ಭಾರತ ಹಾಗೂ ವೆಸ್ಟ್‌ ಇಂಡೀಸ್‌ ತಂಡಗಳು ಫೆ. 9 ರಂದು ಇದೇ ಮೈದಾನದಲ್ಲಿ ಎರಡನೇ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.



Read more

[wpas_products keywords=”deal of the day sale today offer all”]