Karnataka news paper

ವಿಧಾನ ಪರಿಷತ್ ಪ್ರತಿಷ್ಠೆಯ ಕಣ ರಾಮನಗರದಲ್ಲಿ ‘ಕೈ’ ಮೇಲು, ಜೆಡಿಎಸ್‌ಗೆ ಮುಖಭಂಗ..!


ಹೈಲೈಟ್ಸ್‌:

  • 8 ವಿಧಾನಸಭಾ ಕ್ಷೇತ್ರಗಳ ಪೈಕಿ 5ರಲ್ಲಿ ಜೆಡಿಎಸ್‌ ಶಾಸಕರೇ ಇದ್ದರೂ ಅಭ್ಯರ್ಥಿ ಸೋಲುಂಡಿದ್ದಾರೆ
  • ಸತತ 2ನೇ ಬಾರಿಗೆ ಕಾಂಗ್ರೆಸ್‌ನ ಎಸ್‌. ರವಿ ಗೆಲುವು ಸಾಧಿಸಿದ್ದಾರೆ
  • 722 ಮತಗಳ ಭಾರೀ ಅಂತರದಿಂದ ಗೆಲುವು ರವಿ ಅವರಿಗೆ ಗೆಲುವು

ವಿಕ ವಿಶ್ಲೇಷಣೆ
ಆರ್‌. ಶ್ರೀಧರ್‌
ರಾಮನಗರ:
ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಾಲಿಗೆ ಪ್ರತಿಷ್ಠೆಯ ಕಣವಾಗಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆಯಲ್ಲಿ ‘ಕೈ’ ಪಕ್ಷ ಭರ್ಜರಿ ಗೆಲುವು ಸಾಧಿಸಿದ್ದರೆ, ಜೆಡಿಎಸ್‌ ಹಿಡಿತ ಕಳೆದುಕೊಳ್ಳುತ್ತಿದೆ ಎಂದು ಫಲಿತಾಂಶದ ನಂತರ ವಿಶ್ಲೇಷಿಸಲಾಗುತ್ತಿದೆ.

8 ವಿಧಾನಸಭಾ ಕ್ಷೇತ್ರಗಳ ಪೈಕಿ 5ರಲ್ಲಿ ಜೆಡಿಎಸ್‌ ಶಾಸಕರೇ ಇದ್ದರೂ, ಅಭ್ಯರ್ಥಿ ಸೋಲುಂಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಮತ್ತೊಂದೆಡೆ ಸತತ 2ನೇ ಬಾರಿಗೆ ಎಸ್‌. ರವಿ ಗೆಲುವು ಸಾಧಿಸಿರುವುದು ವಿಶೇಷ. 2015ರಲ್ಲಿ ಜೆಡಿಎಸ್‌ ವಿರುದ್ಧ ಕೇವಲ 278 ಮತಗಳ ಅಂತರದಿಂದ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಆದರೆ ಈ ಭಾರಿ 722 ಮತಗಳ ಅಂತರದಿಂದ ಗೆಲುವು ಪಡೆದುಕೊಂಡಿರುವುದು ಕಾಂಗ್ರೆಸ್‌ ಪ್ರಭಾವ ಹೆಚ್ಚಿಸಿದರೆ, ಜೆಡಿಎಸ್‌ಗೆ ಮುಖಭಂಗವಾಗಿರುವುದಂತೂ ಸುಳ್ಳಲ್ಲ.

2004ರಿಂದ ಈವರೆಗೂ 3 ಬಾರಿ ಗೆಲುವು ದಾಖಲಿಸಿರುವುದು ಕಾಂಗ್ರೆಸ್‌ಗೆ ಆನೆ ಬಲ ಬಂದಂತಾಗಿದೆ. ಆದರೆ, ಈ ನಡುವೆ ಜೆಡಿಎಸ್‌ ಬಲ ಕಳೆದುಕೊಳ್ಳುತ್ತಿರುವುದು ಎಚ್‌. ಡಿ. ಕುಮಾರಸ್ವಾಮಿ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇನ್ನು ಬಿಜೆಪಿ ಪಕ್ಷ ಕೇವಲ 54 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿರುವುದು ಮುಖಭಂಗ ಅನುಭವಿಸುವಂತಾಗಿದೆ.

ಕುಮಾರಸ್ವಾಮಿ ಅವರಿಂದಲೇ ಸುಳ್ಳು ಹುಟ್ಟಿದೆ! ನೂತನ ಕಾಂಗ್ರೆಸ್‌ MLC ಎಸ್‌ ರವಿ ವಾಗ್ದಾಳಿ
ಜಿಲ್ಲೆಯಲ್ಲಿ ಏನೆಲ್ಲ ಪರಿಣಾಮ..!

ಕಾಂಗ್ರೆಸ್‌ – ಜೆಡಿಎಸ್‌ನ ಜಿದ್ದಾಜಿದ್ದಿನ ಅಖಾಡವಾಗಿರುವ ರಾಮನಗರದಲ್ಲಿ ಡಿ. ಕೆ. ಶಿವಕುಮಾರ್‌ ಹಾಗೂ ಎಚ್‌. ಡಿ. ಕುಮಾರಸ್ವಾಮಿ ತಮ್ಮ ಅಧಿಕಾರ ಮತ್ತು ವರ್ಚಸ್ಸು ಸ್ಥಾಪಿಸಿಕೊಳ್ಳಲು ಹವಣಿಸುತ್ತಲೇ ಇದ್ದಾರೆ. ಅವಕಾಶ ಸಿಕ್ಕಾಗೆಲ್ಲ ತಮ್ಮ ಪ್ರಾಬಲ್ಯ ಮೆರೆಯಲು ಇನ್ನಿಲ್ಲದ ಕಸರತ್ತು ನಡೆಸುವುದು, ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳುವುದು ವಾಡಿಕೆ. ಅದೇ ಮಾದರಿಯಲ್ಲಿ ವಿಧಾನ ಪರಿಷತ್‌ ಚುನಾವಣೆಯೂ ನಡೆದಿತ್ತು.

ಈಗ ಕಾಂಗ್ರೆಸ್‌ ಗೆಲುವು ಸಾಧಿಸಿರುವುದು ಒಂದೆಡೆ ಡಿ. ಕೆ. ಶಿವಕುಮಾರ್‌ಗೆ ಪ್ಲಸ್‌ ಪಾಯಿಂಟ್‌ ಆಗಿದೆ. ಆದರೆ, ಎಚ್‌. ಡಿ. ಕುಮಾರಸ್ವಾಮಿ ಅವರಿಗೆ ಹಿನ್ನಡೆಯಾಗಿದೆ. ಈ ಹಿಂದೆಯೂ ರವಿ ಅವರೇ ಗೆಲುವು ಸಾಧಿಸಿದ್ದರಿಂದ ಈ ಬಾರಿ ಜೆಡಿಎಸ್‌ ಹೊಸ ಮುಖವನ್ನು ಪರಿಚಯಿಸಿತು. ಬೆಂಗಳೂರಿನಲ್ಲಿ ಎಂಎಲ್‌ಸಿ ಆಗಿದ್ದ ರಮೇಶ್‌ ಗೌಡರನ್ನು ಬೆಂಗಳೂರು ಗ್ರಾಮಾಂತರಕ್ಕೆ ಪರಿಚಯಿಸಿತ್ತು. ಶಾಸಕರ ಸ್ಥಾನಗಳು ಹೆಚ್ಚಾಗಿದ್ದರೂ, ಜೆಡಿಎಸ್‌ ಸೋಲು ಕಂಡಿರುವುದು ಪಕ್ಷಕ್ಕೆ ದೊಡ್ಡ ಹೊಡೆತವನ್ನೇ ನೀಡಿದೆ.

ಚಿಂತಕರ ಚಾವಡಿ ಶ್ರೀಮಂತರ ಚಾವಡಿ ಆಗುತ್ತಿದೆ – ಕೆ.ಎಸ್ ಈಶ್ವರಪ್ಪ ಬೇಸರ
ಗೆಲುವು – ಸೋಲಿಗೆ ಕಾರಣಗಳೇನು?

ಈ ಹಿಂದೆಯು ಎಸ್‌. ರವಿ ಕಾಂಗ್ರೆಸ್‌ನಿಂದ ಎಂಎಲ್‌ಸಿ ಆಗಿದ್ದರು. ಡಿ. ಕೆ. ಶಿವಕುಮಾರ್‌ಗೆ ಸಂಬಂಧಿಯೂ ಆಗಿದ್ದರಿಂದ ಕಾಂಗ್ರೆಸ್‌ನ ಇಡೀ ಪಕ್ಷವೇ ಇವರೊಟ್ಟಿಗೆ ಪ್ರಚಾರಕ್ಕಿಳಿದಿತ್ತು. ಗ್ರಾಪಂನಲ್ಲಿಯೂ ಕಾಂಗ್ರೆಸ್‌ನ ಬೆಂಬಲಿತರ ಬಲ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಎಸ್‌. ರವಿ ಗೆಲುವು ನಿರಾಯಾಸವಾಗಿತ್ತು. ಮತ್ತೊಂದೆಡೆ ಚನ್ನಪಟ್ಟಣದಲ್ಲಿ ಸಿ. ಪಿ. ಯೋಗೇಶ್ವರ್‌ ಒಳ ರಾಜಕೀಯ ಮಾಡಿ, ಬಿಜೆಪಿಯ ಮತಗಳನ್ನು ಕಾಂಗ್ರೆಸ್‌ಗೆ ಒತ್ತಿಸಿದ್ದರು ಎನ್ನಲಾಗಿದೆ.

ಆದರೆ, ಜೆಡಿಎಸ್‌ನಿಂದ ಕಳೆದ ಬಾರಿ ಇ. ಕೃಷ್ಣಪ್ಪ ಸ್ಪರ್ಧಿಸಿ, ಕಾಂಗ್ರೆಸ್‌ಗೆ ಪೈಪೋಟಿ ನೀಡಿದ್ದರು. ಈ ಬಾರಿ ರಮೇಶ್‌ಗೌಡ ಸ್ಪರ್ಧಿಸಿದ್ದರು. ಆದರೆ, ಮುಂದಿನ ವಿಧಾನ ಸಭೆ ಚುನಾವಣೆಗೆ ‘ಮಿಷನ್‌ 123’ ಎಂದು ಟಾರ್ಗೆಟ್‌ ಮಾಡಿಕೊಂಡು ಓಡಾಡುತ್ತಿರುವ ಕುಮಾರಸ್ವಾಮಿಗೆ ಈ ಸೋಲು ದೊಡ್ಡ ಆಘಾತ ತಂದಿದೆ. ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ಆರೋಪಗಳೂ ಜೆಡಿಎಸ್‌ ವಿರುದ್ಧ ಕೇಳಿ ಬಂದವು. ಆದರೆ ಅಂತಿಮವಾಗಿ ರಮೇಶ್‌ಗೌಡರ ವರ್ಚಸ್ಸು ಎಸ್‌. ರವಿಗಿಂತ ಕಡಿಮೆ ಇತ್ತು ಎಂಬ ಆರೋಪಗಳು ಈ ಸೋಲು – ಗೆಲುವಿಗೆ ಕಾರಣವಾಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮುಂದಿನ ಭವಿಷ್ಯಕ್ಕೂ ದಾರಿ..

ಈ ಚುನಾವಣೆ ಫಲಿತಾಂಶವನ್ನೇ ಇಟ್ಟುಕೊಂಡು ಕಾಂಗ್ರೆಸ್‌ ಮುಂದಿನ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದರೆ, ಇದು ಮುಂದಿನ ಚುನಾವಣೆಯ ದಿಕ್ಸೂಚಿಯಲ್ಲ. ಇದು ಜನಪ್ರತಿನಿಧಿಗಳ ಚುನಾವಣೆ. ಸಾರ್ವಜನಿಕರ ಮತಗಳೇ ಬೇರೆ ಇದೆ. ನಮ್ಮ ಶಕ್ತಿಯನ್ನು ವಿಧಾನಸಭೆ ಚುನಾವಣೆಯಲ್ಲಿ ತೋರಿಸುತ್ತೇವೆ ಎನ್ನುತ್ತಾರೆ ಎಚ್‌. ಡಿ. ಕುಮಾರಸ್ವಾಮಿ. ಒಟ್ಟಿನಲ್ಲಿ ಈ ಚುನಾವಣೆಯಿಂದ ಕಾಂಗ್ರೆಸ್‌ ಕಾರ‍್ಯಕರ್ತರಲ್ಲಿ ಹೊಸ ಹುರುಪು ಮೂಡಿದೆ. ಮುಂದಿನ ದಿನಗಳಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಡುವೆ ಇನ್ನಷ್ಟು ಬಿಗಿ ಹೋರಾಟ ನಡೆಯಲಿದೆ ಎಂದೇ ವಿಶ್ಲೇಷಿಸಬಹುದು.

ಬೆಳಗಾವಿ ವಿಧಾನ ಪರಿಷತ್‌ ಫಲಿತಾಂಶ ಅನಿರೀಕ್ಷಿತ: ವಿ ಸೋಮಣ್ಣ



Read more