Karnataka news paper

ಮುಖ್ಯಮಂತ್ರಿ ಬೊಮ್ಮಾಯಿ ನಾಳೆ ದೆಹಲಿಗೆ ಪ್ರಯಾಣ: ಸಂಪುಟ ಪುನಾರಚನೆ, ವರಿಷ್ಠರೊಂದಿಗೆ ಸಭೆ


Online Desk

ಬೆಂಗಳೂರು: ರಾಜ್ಯ ಬಜೆಟ್ ಗೂ ಮುನ್ನ ಸಂಸದರ ಜೊತೆ ಪೂರ್ವಭಾವಿ ಸಭೆ ಹಾಗೂ ವಿವಿಧ ವಿದ್ಯಮಾನಗಳ ಬಗ್ಗೆ ಕೇಂದ್ರ ಸಚಿವರುಗಳ ಜೊತೆಗೆ ಚರ್ಚಿಸಲು  ನಾಳೆ  ದೆಹಲಿಗೆ ತೆರಳಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವರಿಷ್ಠರ ಭೇಟಿಗೆ ಕಾಲಾವಕಾಶ ದೊರೆತರೆ ಸಂಪುಟ ಪುನಾರಚನೆಯ ಬಗ್ಗೆ ಮಾತುಕತೆ ನಡೆಸಿ, ಮುಹೂರ್ತ ನಿಗದಿ ಮಾಡಲಿದ್ದಾರೆ.

 ಮುಖ್ಯಮಂತ್ರಿಗಳು ತಮ್ಮ ದೆಹಲಿ ಭೇಟಿ ಸಂದರ್ಭದಲ್ಲಿ ಸಚಿವಾಕಾಂಕ್ಷಿ ಶಾಸಕರುಗಳ ಒತ್ತಡದ ಹಿನ್ನೆಲೆಯಲ್ಲಿ ವರಿಷ್ಠರ ಜೊತೆಗೆ ಸಂಪುಟ ಪುನಾರಚನೆ ಸಂಬಂಧವೂ ಚರ್ಚಿಸುವ ಸಾಧ್ಯತೆಯಿದೆ. ವರಿಷ್ಠರ ಭೇಟಿಗಾಗಿ ಮುಖ್ಯಮಂತ್ರಿ ಸಮಯ ಕೋರಿದ್ದು, ಇನ್ನೂ ಸಮಯ ನಿಗದಿಯಾಗಿಲ್ಲ. ಇಂದು ಸಂಜೆ ಸಮಯ ನಿಗದಿಯಾಗುವ ಸಾಧ್ಯತೆಯಿದೆ ಎಂದು ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿಂದು ಸುದ್ದಿಗಾರರಿಗೆ ತಿಳಿಸಿದರು. 

ಪಕ್ಷದ ವರಿಷ್ಠರು ಅನುಮತಿ ನೀಡಿದರೆ ವಿಧಾನಮಂಡಲದ ಜಂಟಿ ಅಧಿವೇಶನ ಆರಂಭವಾಗುವ ಮುನ್ನ ಫೆಬ್ರವರಿ 14ರೊಳಗೆ ಸಂಪುಟ ಪುನಾರಚನೆಗೂ ಮುಹೂರ್ತ ನಿಗದಿಯಾಗುವ ಸಾಧ್ಯತೆಯಿದೆ. 

ಬಜೆಟ್ ಗೂ ಮುನ್ನ ಮುಖ್ಯಮಂತ್ರಿಗಳು ರಾಜ್ಯದ ಸಂಸದರ ಜೊತೆಗೆ ಸಭೆ ನಡೆಸಿ, ಬಜೆಟ್ ಗೆ ಸಂಬಂಧಿಸಿದಂತೆ ಸಂಸದರ ಅಹವಾಲುಗಳು, ಸಲಹೆಗಳನ್ನು ಕೇಳುವುದು ವಾಡಿಕೆ. ಅದರಂತೆ ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡಿಸಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಸದರ ಜೊತೆಗೆ ಚರ್ಚಿಸಲು ನಾಳೆ ಬೆಳಗ್ಗೆ ದೆಹಲಿಗೆ ತೆರಳಲಿದ್ದಾರೆ. 



Read more

[wpas_products keywords=”deal of the day”]