Karnataka news paper

ಪಂಜಾಬ್‌ನಲ್ಲಿ ಸಂಪ್ರದಾಯ ಮುರಿದು ಸಿಎಂ ಅಭ್ಯರ್ಥಿಯನ್ನು ಘೋಷಿಸಿದ ಕಾಂಗ್ರೆಸ್‌! ಸಿಧುಗೆ ಮತ್ತೆ ನಿರಾಸೆ!


ಚಂಡೀಗಢ: ಚುನಾವಣೆಗೆ ಮೊದಲೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ಸಂಪ್ರದಾಯವನ್ನು ಮುರಿದ ಕಾಂಗ್ರೆಸ್‌, ಪಂಜಾಬ್‌ನಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಹಾಲಿ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರೇ ಮುಂದಿನ ಸರಕಾರದ ನೇತೃತ್ವ ವಹಿಸಲಿದ್ದಾರೆ ಎಂದು ಘೋಷಿಸಿದೆ.

ಲುಧಿಯಾನದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಚನ್ನಿ ಹೆಸರು ಘೋಷಿಸಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು, ”ಈ ಚುನಾವಣೆಯಲ್ಲಿ ಚನ್ನಿ ಅವರೇ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ. ಇದು ನನ್ನ ತೀರ್ಮಾನವಲ್ಲ, ಇದು ಪಂಜಾಬ್‌ ಜನರ ತೀರ್ಮಾನ. ವರಿಷ್ಠರು ಏಕಾಏಕಿಯಾಗಿ ಈ ನಿರ್ಧಾರ ತೆಗೆದುಕೊಂಡಿಲ್ಲ. ಪಕ್ಷದ ಮುಖಂಡರು, ಶಾಸಕರು, ಕಾರ್ಯಕರ್ತರು, ಜನತೆಯ ಅಭಿಪ್ರಾಯ ಪಡೆದ ಬಳಿಕ ಚನ್ನಿ ಅವರೇ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಬೇಕು ಎನ್ನುವ ನಿರ್ಧಾರ ಕೈಗೊಳ್ಳಲಾಯಿತು,” ಎಂದು ವಿವರಿಸಿದರು. ಸತತ ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ಚನ್ನಿ ಅವರು ಪಂಜಾಬ್‌ನ ಮೊದಲ ದಲಿತ ಮುಖ್ಯಮಂತ್ರಿಯಾಗಿದ್ದಾರೆ.

ರಾಹುಲ್‌ ಗಾಂಧಿಯವರು ಚನ್ನಿ ಹೆಸರು ಘೋಷಿಸುವುದಕ್ಕೆ ಮುನ್ನ ಪಕ್ಷದ ನಾಯಕರು ‘ಅಪರೂಪದ ಒಗ್ಗಟ್ಟು’ ಪ್ರದರ್ಶಿಸಿದರು. ಪಕ್ಷದ ಹಿರಿಯ ನಾಯಕ ಸುನೀಲ್‌ ಜಾಖಡ್‌ ಚಲಾಯಿಸುತ್ತಿದ್ದ ಕಾರಿನಲ್ಲಿ ವಿಮಾನ ನಿಲ್ದಾಣದಿಂದ ರಾಹುಲ್‌ ಗಾಂಧಿ ಆಗಮಿಸಿದರು. ಜಾಖಡ್‌ ಪಕ್ಕದ ಸೀಟಿನಲ್ಲಿ ರಾಹುಲ್‌ ಆಸೀನರಾದರೆ, ಹಿಂದುಗಡೆ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಮತ್ತು ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ಕುಳಿತಿದ್ದರು.

ಪಂಜಾಬ್‌ ವಿಧಾನಸಭಾ ಚುನಾವಣೆ: ಕಾಂಗ್ರೆಸ್‌ನ ಸಿಎಂ ಅಭ್ಯರ್ಥಿಯಾಗಿ ಹಾಲಿ ಸಿಎಂ ಚರಂಜಿತ್ ಸಿಂಗ್‌ ಚನ್ನಿ ಆಯ್ಕೆ

ಸಭೆಯಲ್ಲಿ ಮೊದಲು ಮಾತನಾಡಿದ ಜಾಖಡ್‌, ”ಕ್ಯಾ.ಅಮರಿಂದರ್‌ ಸಿಂಗ್‌ ರಾಜೀನಾಮೆ ಬಳಿಕ ಚನ್ನಿ ಅವರನ್ನು ಮುಖ್ಯಮಂತ್ರಿ ಪದವಿಗೆ ಆಯ್ಕೆ ಮಾಡಿದ್ದು ರಾಹುಲ್‌ ಗಾಂಧಿಯವರ ಅತ್ಯಂತ ದೊಡ್ಡ ನಿರ್ಧಾರ,” ಎಂದು ಬಣ್ಣಿಸಿದರು. ನಂತರ ಮಾತನಾಡಿದ ಸಿಧು, ”ಯಾರೇ ಮುಖ್ಯಮಂತ್ರಿ ಅಭ್ಯರ್ಥಿಯಾದರೂ ನಾನು ಪಕ್ಷದ ಕಾರ್ಯಕರ್ತನಾಗಿ ಮುಂದುವರಿಯುವೆ. ಮಂತ್ರಿ ಅಥವಾ ಮುಖ್ಯಮಂತ್ರಿ ಮಾಜಿಯಾಗಬಹುದು, ಆದರೆ ಕಾರ್ಯಕರ್ತ ಎಂದಿಗೂ ಮಾಜಿಯಾಗಲಾರ,” ಎಂದರು. ಆಗ ಭಾವುಕರಾದ ಚನ್ನಿ ಎದ್ದು ಹೋಗಿ ಸಿಧು ಅವರನ್ನು ಆಲಂಗಿಸಿಕೊಂಡರು. ನಂತರ ಮಾತನಾಡಿದ ಚನ್ನಿ, ”ಯಾರೇ ಮುಖ್ಯಮಂತ್ರಿ ಅಭ್ಯರ್ಥಿಯಾದರೂ ಸಂಪೂರ್ಣ ಸಹಕಾರ ನೀಡುತ್ತೇನೆ,” ಎಂದು ಹೇಳಿದರು. ಈ ಮೂವರು ಮಾತನಾಡಿದ ಬಳಿಕ ರಾಹುಲ್‌ ಗಾಂಧಿಯವರು 58 ವರ್ಷದಚ ಚನ್ನಿ ಅವರ ಹೆಸರು ಘೋಷಿಸಿದರು.

”ಚನ್ನಿ ಬಡ ಕುಟುಂಬದಲ್ಲಿ ಜನಿಸಿದವರು, ಬಡವರ ನೋವು ಅರ್ಥ ಮಾಡಿಕೊಳ್ಳಬಲ್ಲವರು. ಅವರಲ್ಲಿ ಯಾವುದೇ ಒರಟುತನ ನೋಡಲು ಸಾಧ್ಯವಿಲ್ಲ. ಅವರು ಜನರ ಮುಖ,” ಎಂದ ರಾಹುಲ್‌, ”ರಾಜಕಾರಣ ಸುಲಭದ ಸಂಗತಿ ಎಂದು ಯಾರಾದರೂ ಭಾವಿಸಿಕೊಂಡಿದ್ದರೆ ಅದು ತಪ್ಪು. ನಾನು 2004ರಲ್ಲಿಯೇ ರಾಜಕಾರಣಕ್ಕೆ ಬಂದರೂ ರಾಜಕೀಯದ ಒಳಸುಳಿಗಳನ್ನು ಅರ್ಥ ಮಾಡಿಕೊಳ್ಳಲು ಆರೇಳು ವರ್ಷ ಬೇಕಾಯಿತು. ಯಾವುದೇ ನಾಯಕ ಏಕಾಏಕಿ ಆವಿರ್ಭವಿಸುವುದಿಲ್ಲ,” ಎನ್ನುವ ಮೂಲಕ ಸಿಧು ಅವರನ್ನು ಏಕೆ ಸಿಎಂ ಅಭ್ಯರ್ಥಿಯಾಗಿ ಘೋಷಿಸಲಿಲ್ಲ ಎನ್ನುವುದಕ್ಕೆ ಪರೋಕ್ಷವಾಗಿ ಕಾರಣ ನೀಡಿದರು. 13 ವರ್ಷ ಬಿಜೆಪಿಯಲ್ಲಿದ್ದ ಸಿಧು, 2017ರಲ್ಲಿ ಕಾಂಗ್ರೆಸ್‌ ಸೇರಿದ್ದಾರೆ.

ಹೈಕಮಾಂಡ್‌ಗೆ ತಾಳಕ್ಕೆ ತಕ್ಕಂತೆ ಕುಣಿಯುವ ಸಿಎಂ ಬೇಕು ಎಂದ ಸಿಧು: ಪಂಜಾಬ್‌ನಲ್ಲಿ ಬಂಡಾಯ ಖಚಿತ?

ಸಕ್ರಿಯ ರಾಜಕಾರಣದಿಂದ ಜಾಖಡ್‌ ನಿವೃತ್ತಿ
ಪಂಜಾಬ್‌ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಕಾಂಗ್ರೆಸ್‌ ಘೋಷಿಸಿದ ಬೆನ್ನಿಗೇ ಪಕ್ಷದ ಹಿರಿಯ ನಾಯಕ ಸುನೀಲ್‌ ಜಾಖಡ್‌ ಅವರು ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದಾರೆ. ”ಸಕ್ರಿಯ ರಾಜಕಾರಣಕ್ಕೆ ನಾನು ಅಪ್ರಸ್ತುತ ವ್ಯಕ್ತಿಯಾಗಿದ್ದೇನೆ. ಆದರೆ ಕೊನೆಯವರೆಗೂ ಕಾಂಗ್ರೆಸ್‌ ಕಾರ್ಯಕರ್ತನಾಗಿ ಇರುವೆ,” ಎಂದು ತಿಳಿಸಿದ್ದಾರೆ. ಅಮರಿಂದರ್‌ ಸಿಂಗ್‌ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗುವ ಕನಸನ್ನು ಹೊತ್ತಿದ್ದ ಜಾಖಡ್‌, ”ನನಗೆ ಅಂದು 42 ಶಾಸಕರ ಬೆಂಬಲ ಇತ್ತು. ಪಕ್ಷದ ಬಹುತೇಕ ನಾಯಕರ ಮೊದಲ ಆಯ್ಕೆ ನಾನೇ ಆಗಿದ್ದೆ,” ಎಂದು ಹೇಳಿಕೊಂಡಿದ್ದರು. ಆದರೆ ಅನಿರೀಕ್ಷಿತವಾಗಿ ಚನ್ನಿ ಮುಖ್ಯಮಂತ್ರಿಯಾದ ಬಳಿಕ, ”ಈ ಸಲದ ಚುನಾವಣೆಯಲ್ಲಿ ನಾನು ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ,” ಎಂದು ಹೇಳಿಕೊಳ್ಳುತ್ತ ಬಂದಿದ್ದರು.

ಹತಾಶ ಸಿಧು ಮುಂದೇನು ಮಾಡುವರು?

ನಿರೀಕ್ಷೆಯಂತೆಯೇ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪಕ್ಷ ಘೋಷಿಸಿರುವುದರಿಂದ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ಮುಂದಿನ ನಡೆ ಬಗ್ಗೆ ಕುತೂಹಲ ಮೂಡಿದೆ. ಅಮರಿಂದರ್‌ ರಾಜೀನಾಮೆ ನೀಡಿದ ಸಂದರ್ಭದಲ್ಲಿಯೂ ಸಿಧು ಮುಖ್ಯಮಂತ್ರಿ ಹುದ್ದೆಗೆ ಕಸರತ್ತು ನಡೆಸಿ ಸೋತಿದ್ದರು. ನಂತರ ಹಲವು ಸಲ ತಾವೇ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಇಂಗಿತ ವ್ಯಕ್ತಪಡಿಸಿದ್ದರು. ಪಕ್ಷ ನಡೆಸಿದ ಸಮೀಕ್ಷೆಯಲ್ಲಿ ಚನ್ನಿ ಪರ ಒಲವು ವ್ಯಕ್ತವಾಗಿದೆ ಎಂಬ ಸುಳಿವು ಸಿಗುತ್ತಲೇ, ”ವರಿಷ್ಠರಿಗೆ ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ದುರ್ಬಲ ಮುಖ್ಯಮಂತ್ರಿ ಬೇಕಾಗಿದ್ದಾರೆ,” ಎಂದು ಹೈಕಮಾಂಡ್‌ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದರು.

“ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ನಲ್ಲಿಯಾವುದೇ ಹುದ್ದೆಯನ್ನು ಹೊಂದಿಲ್ಲ. ಹೀಗಿರುವಾಗ ಅವರು ಯಾವ ಆಧಾರದ ಮೇಲೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದ್ದಾರೆ?”
– ಗಜೇಂದ್ರ ಸಿಂಗ್‌ ಶೇಖಾವತ್‌, ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ



Read more

[wpas_products keywords=”deal of the day sale today offer all”]