ಕಾಲೇಜುಗಳಲ್ಲಿ ಸಮವಸ್ತ್ರ ಪಾಲನೆಗೆ ಕುರಿತಾಗಿ ಸರ್ಕಾರದ ಸುತ್ತೋಲೆಗೆ ಸಂಬಂಧಿಸಿದಂತೆ ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಈ ನೆಲದ ಕಾನೂನು ಗೌರವಿಸಬೇಕಾಗಿರುವುದು ಎಲ್ಲರ ಕರ್ತವ್ಯ. ಕಾನೂನನ್ನು ಯಾರು ಗೌರವಿಸುವುದಿಲ್ಲವೋ ಅವರು ಈ ನೆಲದಲ್ಲಿ ಇರಲು ಅನರ್ಹರು. ಸುತ್ತೋಲೆ, ಕಾನೂನು ಎನ್ನುವುದಕ್ಕಿಂತ ಸಮವಸ್ತ್ರದಲ್ಲಿ ಹೋಗುವುದು ಸಂಪ್ರದಾಯ. ಶಾಲೆಗಳಲ್ಲಿ ಎಲ್ಲರೂ ಒಟ್ಟಾಗಿ ಸಮಾನತೆಯಿಂದ ಶಿಕ್ಷಣವನ್ನು ಪಡೆಯುವುದು ಪರಂಪರೆಯಿಂದ ಬಂದಿದೆ. ಇದರಲ್ಲಿ ಯಾವುದೋ ಮತೀಯ ಸಂಗತಿಯನ್ನು ವೈಭವೀಕರಿಸುವುದು ಸರಿಯಲ್ಲ. ಇದನ್ನು ಸರಕಾರ ಸಹಿಸುವುದಿಲ್ಲ ಎಂದರು.
ನಮಗೆ ವ್ಯಕ್ತಿ ಸ್ವಾತಂತ್ರ್ಯ ವಿದೆ. ಸುತ್ತೋಲೆ, ಕಾನೂನು ಇಲ್ಲ ಎನ್ನುವವರಿಗೆ ನಾವೂ ಕಾನೂನು ಕೂಡಾ ಜಾರಿ ಮಾಡುತ್ತೇವೆ. ಈ ಕಾನೂನು ಗೌರವಿಸಬೇಕು. ಆ ಕಾನೂನು ಗೌರವಿಸುವುದಿಲ್ಲ ಎಂದಾದರೆ ಇದರ ಹಿಂದಿನ ಹಿಡನ್ ಅಜೆಂಡಾ ಇದೆ ಎನ್ನುವುದು ನಮಗೆ ಅರ್ಥವಾಗುತ್ತದೆ. ಕರ್ನಾಟಕವನ್ನು ಹಿಡನ್ ಅಜೆಂಡಾದ ಮೂಲಕ ಏನೋ ಮಾಡುತ್ತೇವೆ. ಕಾಂಗ್ರೆಸ್‌ನ ಟೂಲ್ ಕಿಟ್‌ನ ಮುಂದುವರಿದ ಭಾಗವಾಗಿ ಇನ್ನೇನೋ ಮಾಡುತ್ತೇವೆ ಎನ್ನುವುದನ್ನು ಸಹಿಸುವುದಕ್ಕೆ ಸಾಧ್ಯವಿಲ್ಲ. ಪೋಷಕರು ಕೂಡಾ ಅರ್ಥ ಮಾಡಿಕೊಳ್ಳಬೇಕು ಎಂದರು.
ಮುಸುಕಿನಿಂದ ಹೊರ ಬನ್ನಿ: ನಾನು ಮುಸ್ಲಿಂ ಮಹಿಳೆಯರಿಗೆ ಕರೆ ಕೊಡುತ್ತೇನೆ. ಈ ಸಮಾಜದ ಮುಖ್ಯ ವಾಹಿನಿಗೆ ನೀವು ಬನ್ನಿ. ಇಲ್ಲಿನ ತನಕ ನಿಮ್ಮ ಸಮುದಾಯದಲ್ಲಿನ ವ್ಯವಸ್ಥೆ ನಿಮ್ಮನ್ನು ಬಗ್ಗು ಬಡಿಯುವ, ಮುಸುಕಿನಲ್ಲಿ ಇಡುವ ಪ್ರಯತ್ನ ಮಾಡಿದೆ. ಆದರೆ ಬಿಜೆಪಿ ಸರಕಾರ ತ್ರಿವಳಿ ತಲಾಕ್ ರದ್ದು ಮಾಡುವ ಮೂಲಕ ಭದ್ರತೆ ಕೊಟ್ಟಿದೆ. ಮುಖ್ಯವಾಹಿನಿಗೆ ಬರುವಂತೆ ಮಾಡಿದೆ. ಜಗತ್ತಿನ ಯಾವ ರಾಷ್ಟ್ರದಲ್ಲೂ ಇಲ್ಲದ ಅನಿಷ್ಠ ಪದ್ಧತಿ ಇವತ್ತಿಗೆ ನಮ್ಮಲ್ಲಿ ಮುಂದುವರಿಯುತ್ತಿದೆ. ಅದನ್ನು ಬಿಟ್ಟು ಹೊರಗೆ ಬರುವ ಪ್ರಯತ್ನ ಮಾಡಿದರೆ ಈ ಸಮಾಜದಲ್ಲಿ ಗೌರವದಿಂದ ನಡೆಯುವುದಕ್ಕೆ ಸಾಧ್ಯ. ಈ ರೀತಿಯ ಜಾಗೃತಿ ನಿಮ್ಮ ಮನೆಯಲ್ಲಿ ಆಗಬೇಕು. ನಿಮ್ಮಲ್ಲಿ ಮಕ್ಕಳಿಗೂ ಕಲಿಸಬೇಕೆಂದರು.
ಕಾಲೇಜಿಗೆ ಬಂದ ಮೇಲೆ ಮೇಲೆ ನಮಗೆ ಕನ್ನಡ ಅರ್ಥ ಆಗಲ್ಲ, ಉರ್ದುವಿನಲ್ಲಿ ಪಾಠ ಮಾಡಿ ಎಂದಾಕ್ಷಣ ಆ ರೀತಿ ಮಾಡುವುದಕ್ಕೆ ಸಾಧ್ಯವೇ? ಹಾಗೆ ಆಗಲ್ಲ. ವ್ಯವಸ್ಥೆಯಂತೆ ನಡೆಯಬೇಕು. ಕಾಲೇಜಿಗೆ ಸಮವಸ್ತ್ರ ಹಾಕಿಕೊಂಡು ಬರುವುದು ಎಲ್ಲರಿಗೂ ಅನ್ವಯವಾಗುತ್ತದೆ. ಇದು ಯಾವುದೋ ಒಂದು ಗುಂಪಿಗೆ, ಸಮುದಾಯದ ಸಂಘಟನೆಗೆ ಸೀಮಿತ ಎನ್ನುವ ಮಾತನ್ನು ನಾನು ಎಲ್ಲಿಯೂ ಹೇಳಲ್ಲ. ಎಲ್ಲರೂ ಸಮವಸ್ತ್ರ ಪಾಲನೆ ಮಾಡಬೇಕೆಂದು ಸಚಿವ ಸುನಿಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
Read more
[wpas_products keywords=”deal of the day sale today offer all”]