ಮುಳ್ಳಿಕಟ್ಟೆ (ಉಡುಪಿ): ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹಾತ್ವಕಾಂಕ್ಷಿ ಯೋಜನೆ ಪಿಎಂ ಕಿಸಾನ್ ಸನ್ಮಾನ್ ಯೋಜನೆಯಡಿ ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ರೈತರ ಖಾತೆಗೆ ವಾರ್ಷಿಕ 6,000 ರೂ.ಗಳ ಸಹಾಯ ಧನವನ್ನು ನೀಡಲಾಗುತ್ತಿದೆ. ಆದರೆ ಜನವರಿ ತಿಂಗಳ ಹಣ ಇನ್ನೂ ಖಾತೆಗೆ ಬಂದಿಲ್ಲ.
ಕೃಷಿ ಕ್ಷೇತ್ರಕ್ಕೆ ಉತ್ತೇಜಿಸಲು ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಖಾತೆಗಳಿಗೆ ಪಿಎಂ ಕಿಸಾನ್ ಸನ್ಮಾನ್ ನಿಧಿ ಯೋಜನೆಯಡಿ 2,000 ರೂ ಕಂತಿನ ರೂಪದಲ್ಲಿ ವರ್ಷಕ್ಕೆ 6,000 ರೂ. ಸಹಾಯ ಧನ ನೀಡಲಾಗುತ್ತಿದೆ. ಸಾವಿರಾರು ಕೋಟಿ ರೂ. ಅನ್ನು ಕೇಂದ್ರ ಸರಕಾರವು ಈ ಯೋಜನೆಗೆ ವಾರ್ಷಿಕವಾಗಿ ಖರ್ಚು ಮಾಡುತ್ತಿದೆ.
ಜನವರಿ ತಿಂಗಳ ಮೊದಲ ವಾರದಲ್ಲಿ ಬಿಡುಗಡೆ ಮಾಡಿದ ಪಿಎಂ ಕಿಸಾನ್ ಸನ್ಮಾನ್ ನಿಧಿಯ ಕಂತಿನ ಹಣವು ತಾಂತ್ರಿಕ ಕಾರಣದಿಂದ ಕುಂದಾಪುರ ಮತ್ತು ಬೈಂದೂರು ತಾಲೂಕಿನ ಬಹಳಷ್ಟು ರೈತರ ಖಾತೆಗೆ ಹಣ ಜಮೆ ಆಗಿಲ್ಲ. ಸರಕಾರವು ನೀಡುವ ಪ್ರೋತ್ಸಾಹ ಧನವನ್ನು ಪಡೆದುಕೊಳ್ಳಲು ರೈತರು ಬ್ಯಾಂಕ್ ಬಾಗಿಲಿಗೆ ಅಲೆಯುವಂತೆ ಆಗಿದೆ.
‘ಕೆಲವೊಂದು ತಾಂತ್ರಿಕ ಕಾರಣಗಳಿಂದ ರೈತರ ಖಾತೆಗೆ ಪಿಎಂ ಕಿಸಾನ್ ಸನ್ಮಾನ್ ನಿಧಿ ಯೋಜನೆಯ ಕಂತಿನ ಹಣ ಜಮೆ ಆಗಿಲ್ಲ. ಖಾತೆದಾರರು ರೈತ ಸಂಪರ್ಕ ಕೇಂದ್ರಗಳನ್ನು ಭೇಟಿ ಮಾಡಿ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿಗಳನ್ನು ನೀಡಿದರೆ ಅಪ್ಡೇಟ್ ಮಾಡಲಾಗುವುದು ಎಂದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೇಸಾಯಕ್ಕೆ ನರೆವು: ಕೇಂದ್ರ ಸರಕಾರವು ಕೃಷಿ ಉದ್ದೇಶಕ್ಕೆ ನೀಡಲಾಗುತ್ತಿರುವ ಪಿಎಂ ಕಿಸಾನ್ ಸನ್ಮಾನ್ ಯೋಜನೆ ನಿಧಿಯ ಪ್ರೋತ್ಸಾಹ ಧನವು ಕೊರೊನಾದಂಥಾ ಕಷ್ಟದ ಸಮಯದಲ್ಲಿ ರೈತರ ಕೈ ಹಿಡಿದಿದೆ. ಸಹಾಯ ಧನವನ್ನು ಬಳಸಿಕೊಂಡು ಲಕ್ಷಾಂತರ ರೈತರು ಬಿತ್ತನೆ ಬೀಜ, ರಸಗೊಬ್ಬರವನ್ನು ಖರೀದಿಸಿಕೊಂಡು ಬೇಸಾಯವನ್ನು ಮಾಡಿದ್ದಾರೆ.
‘ಜನವರಿ ತಿಂಗಳಿನಲ್ಲಿ ಕೇಂದ್ರ ಸರಕಾರವು ಬಿಡುಗಡೆ ಮಾಡಿದ ಪ್ರಧಾನ ಮಂತ್ರಿ ಪಿಎಂ ಕಿಸಾನ್ ಸನ್ಮಾನ್ ನಿಧಿಯ ಪ್ರೋತ್ಸಾಹ ಹಣ 2,000 ರೂ ಬ್ಯಾಂಕ್ ಖಾತೆಗೆ ಬಂದಿಲ್ಲ. ವಿಚಾರಿಸಿದರೆ ಯಾರ ಬಳಿಯು ಸರಿಯಾದ ಮಾಹಿತಿ ದೊರೆಯುತ್ತಿಲ್ಲ. ತಾಂತ್ರಿಕ ಕಾರಣ ಎಂದು ಹೇಳುತ್ತಾರೆ. ಕೊರೊನಾದ ಕಷ್ಟದ ಪರಿಸ್ಥಿಯಲ್ಲಿ ಕೇಂದ್ರ ಸರಕಾರವು ಕೃಷಿ ಉದ್ದೇಶಕ್ಕೆ ನೀಡುತ್ತಿರುವ ಪ್ರೋತ್ಸಾಹ ಧನವು ತುಂಬಾ ಸಹಾಯಕವಾಗಿದೆ’ ಎಂದು ಕೃಷಿಕ ಗೋವಿಂದ ಪೂಜಾರಿ ಗಂಗೊಳ್ಳಿ ಹೇಳಿದ್ದಾರೆ.
Read more
[wpas_products keywords=”deal of the day sale today offer all”]