Karnataka news paper

ಚಿಕಿತ್ಸೆಗೆ ಎಚ್‌ಐವಿ ಸೋಂಕಿತರ ಹಿಂಜರಿಕೆ: ಕೊಪ್ಪಳದಲ್ಲಿ 3 ವರ್ಷಗಳಿಂದ ಆರೈಕೆ ಕೇಂದ್ರ ಬಂದ್‌


ಹೈಲೈಟ್ಸ್‌:

  • 2012 ರವರೆಗೆ ನಾನಾ ನೆಟ್‌ ವರ್ಕ್ ಸಂಸ್ಥೆಗಳು ಆರೈಕೆ ಕೇಂದ್ರದ ಕಾರ್ಯನಿರ್ವಹಿಸಿದ್ದವು
  • ಎಚ್‌ಐವಿ ಪೀಡಿತರಲ್ಲಿ ಆತ್ಮವಿಶ್ವಾಸ ಹಾಗೂ ಇಮ್ಯುನಿಟಿ ಪವರ್‌ ಹೆಚ್ಚಿಸುವ ಕೆಲಸ ಮಾಡಿದ್ದವು
  • 2012ರಲ್ಲಿ ಸಮುದಾಯ ಆರೈಕೆ ಕೇಂದ್ರಗಳಿಗೆ ಹೊಸ ರೂಪ ನೀಡಲಾಗಿತ್ತು

ಗಂಗಾಧರ ಬಂಡಿಹಾಳ
ಕೊಪ್ಪಳ:
ಜಿಲ್ಲೆಯಲ್ಲಿ ಎಚ್‌ಐವಿ ಸೋಂಕಿತರ ಆರೈಕೆಯಲ್ಲಿ ತೊಡಗಿದ್ದ ಸಮುದಾಯ ಆರೈಕೆ ಕೇಂದ್ರ ಬಾಗಿಲು ಬಂದ್‌ ಮಾಡಿ ಮೂರು ವರ್ಷಗಳೇ ಗತಿಸಿವೆ.

ಕೇಂದ್ರ ಹಾಗೂ ರಾಜ್ಯ ಸರಕಾರ ಎಚ್‌ಐವಿ ನಿಯಂತ್ರಣಕ್ಕಾಗಿ ಕೋಟ್ಯಂತರ ರೂ. ವ್ಯಯಿಸುತ್ತಿದ್ದು, ಎಚ್‌ಐವಿ ಪೀಡಿತರಿಗೆ ನಾನಾ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಆದರೆ ಕೆಲವರು ಹೆದರಿ ಔಷಧೋಪಚಾರ ಪಡೆಯುವಲ್ಲಿ ಹಿಂಜರಿಯುತ್ತಿದ್ದಾರೆ. ಎಚ್‌ಐವಿ ಸೋಂಕಿಗೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆದರೆ ಉಳಿದವರು ತಮ್ಮನ್ನು ಕೀಳಾಗಿ ಕಾಣುತ್ತಾರೆ ಎನ್ನುವ ಉದ್ದೇಶದಿಂದ ಸೋಂಕಿತರು ಚಿಕಿತ್ಸೆ ಪಡೆಯುತ್ತಿಲ್ಲ.

ಎಚ್‌ಐವಿ ತೀವ್ರತೆ ಆರಂಭವಾದ ವೇಳೆ ಕೇಂದ್ರ ಸರಕಾರ ಸರಕಾರೇತರ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಎಚ್‌ಐವಿ ಪೀಡಿತರಲ್ಲಿ ಆತ್ಮಸ್ಥೈರ್ಯ ತುಂಬಲು ಹಾಗೂ ಅವರಲ್ಲಿ ಇಮ್ಯುನಿಟಿ ಪವರ್‌ ಹೆಚ್ಚಿಸಲು ಕೊಪ್ಪಳ ಜಿಲ್ಲೆಯಲ್ಲಿ ಸಮುದಾಯ ಆರೈಕೆ ಕೇಂದ್ರವನ್ನು 2005ರಲ್ಲಿಆರಂಭಿಸಲಾಯಿತು.

2012 ರವರೆಗೆ ನಾನಾ ನೆಟ್‌ ವರ್ಕ್ ಸಂಸ್ಥೆಗಳು ಆರೈಕೆ ಕೇಂದ್ರದ ಮೂಲಕ ಎಚ್‌ಐವಿ ಪೀಡಿತರಲ್ಲಿ ಆತ್ಮವಿಶ್ವಾಸ ಹಾಗೂ ಇಮ್ಯುನಿಟಿ ಪವರ್‌ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದವು. 2012ರಲ್ಲಿ ಸಮುದಾಯ ಆರೈಕೆ ಕೇಂದ್ರಗಳಿಗೆ ಹೊಸ ರೂಪ ನೀಡಲಾಯಿತು. ವೈದ್ಯರು, ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿ ನಿಯೋಜಿಸಿ ಎಚ್‌ಐವಿ ಪೀಡಿತರ ಆರೈಕೆಯಲ್ಲಿ ತೊಡಗಿಸಿಕೊಳ್ಳಲಾಯಿತು.

ವಿಶ್ವ ಏಡ್ಸ್‌ ದಿನಾಚರಣೆ
ಹಿಂಜರಿಕೆ: ಎಚ್‌ಐವಿ ಪೀಡಿತರಿಗೆ ಚಿಕಿತ್ಸೆ ನೀಡುವುದಲ್ಲದೆ ಅನಾಥ ಸೋಂಕಿತರಿಗೆ ಹಾಗೂ ಮನೆಯಲ್ಲಿ ಸರಿಯಾಗಿ ನೋಡಿಕೊಳ್ಳದವರನ್ನು ಸಮುದಾಯ ಆರೈಕೆ ಕೇಂದ್ರಗಳಿಗೆ ದಾಖಲಿಸಲಾಯಿತು. ಆರೈಕೆ ಕೇಂದ್ರಗಳಲ್ಲಿಯೇ ಎಚ್‌ಐವಿ ಪೀಡಿತರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ದಾಖಲಾದ ಸೋಂಕಿತರಿಗೆ ದಿನದ 24 ಗಂಟೆ ಚಿಕಿತ್ಸೆ ಸೌಲಭ್ಯ ಒದಗಿಸಲಾಯಿತು. ಸಮುದಾಯ ಆರೈಕೆ ಕೇಂದ್ರಗಳಿಂದ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದರ ಜತೆಗೆ ಎಚ್‌ಐವಿ ಪೀಡಿತರಲ್ಲಿ ಆತ್ಮ ವಿಶ್ವಾಸ ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ ಮರಣ ಪ್ರಮಾಣ ಕಡಿಮೆಯಾಗುತ್ತಿತ್ತು.

ಆದರೆ ಸರಕಾರ 2018 ರಲ್ಲಿ ರಾಜ್ಯಾದ್ಯಂತ ಸಮುದಾಯ ಆರೈಕೆ ಕೇಂದ್ರಗಳನ್ನು ಸಂಪೂರ್ಣ ಬಂದ್‌ಗೊಳಿಸಿದ್ದು, ಇನ್ನೂ ಆರಂಭಿಸಿಲ್ಲ. ಇದರಿಂದಾಗಿ ಎಚ್‌ಐವಿ ಸೋಂಕಿತರು ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಆರೋಗ್ಯ ಕೇಂದ್ರಗಳಿಗೆ ತೆರಳಿ ತಾವೊಬ್ಬ ಎಚ್‌ಐವಿ ಸೋಂಕಿತ ಎಂದು ಚಿಕಿತ್ಸೆ ಪಡೆಯಲು ಬರುವವರ ಸಂಖ್ಯೆ ತೀರ ಕಡಿಮೆಯಾಗುತ್ತಿದೆ ಎನ್ನುತ್ತವೆ ಮೂಲಗಳು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 3628 ಎಚ್‌ಐವಿ ಸೋಂಕಿತರು, ಎಲ್ಲೆಡೆ ಜನಜಾಗೃತಿ!
ದೊರೆಯದ ಚಿಕಿತ್ಸೆ: ಜಿಲ್ಲೆಯಲ್ಲಿ ಈವರೆಗೆ 12,914 ಎಚ್‌ಐವಿ ಸೋಂಕಿತರು ಎಆರ್‌ಟಿ ಕೇಂದ್ರದಲ್ಲಿ ನೋಂದಣಿ ಮಾಡಿಸಿದ್ದಾರೆ. ಈ ಪೈಕಿ 5,733 ಸೋಂಕಿತರು ಇನ್ನೂ ಜೀವಂತವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಈಗಾಗಲೇ 4,076 ಸೋಂಕಿತರು ಸಾವನ್ನಪ್ಪಿದ್ದಾರೆ. 742 ಸೋಂಕಿತರು ಚಿಕಿತ್ಸೆ ಪಡೆಯಲು ಮುಂದೆ ಬರುತ್ತಿಲ್ಲ. ಒಂದು ವೇಳೆ ಸಮುದಾಯ ಆರೋಗ್ಯ ಕೇಂದ್ರ ಆರಂಭವಾಗಿದ್ದರೆ ಸೋಂಕಿತರಿಗೆ ಉತ್ತಮ ಚಿಕಿತ್ಸೆಯ ಜತೆಗೆ ಅವರಿಗೆ ಪೌಷ್ಟಿಕ ಆಹಾರ ಪೂರೈಸಿ ಜೀವಿತಾವಧಿ ಹೆಚ್ಚಿಸಬಹುದಾಗಿತ್ತು ಎನ್ನುತ್ತಾರೆ ಸಿಬ್ಬಂದಿ.

‘ಜಿಲ್ಲೆಯಲ್ಲಿ 5,733 ಎಚ್‌ಐವಿ ಸೋಂಕಿತರು ಎಆರ್‌ಟಿ ಕೇಂದ್ರದಲ್ಲಿ ಚಿಕಿತ್ಸೆಗೆ ನೋಂದಣಿ ಮಾಡಿಸಿದ್ದಾರೆ. ಎಚ್‌ಐವಿ ಸೋಂಕಿತರ ಆರೈಕೆಯ ಸಮುದಾಯ ಆರೋಗ್ಯ ಕೇಂದ್ರವನ್ನು 2018 ರಲ್ಲಿ ಮುಚ್ಚಲಾಗಿದೆ. ಪ್ರಸ್ತುತ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಚಿಕಿತ್ಸೆ ನೀಡಲಾಗುತ್ತದೆ’ ಎಂದು ಕೊಪ್ಪಳ ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ ಡಾ. ಮಹೇಶ್‌ ಎಂ.ಜಿ. ಹೇಳಿದ್ದಾರೆ.

ಕೊಪ್ಪಳ: ವಲಸಿಗರಲ್ಲಿ ಎಚ್‌ಐವಿ ಸೋಂಕು ಅಧಿಕ, ಜಿಲ್ಲೆಯಲ್ಲಿ ತೀವ್ರ ಆತಂಕ



Read more