ಮೈಸೂರು ನಗರದ ಪುರಭವನದಲ್ಲಿ ಮೈಸೂರು ಬಂದ್ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ, ‘ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿರುವ ಜಿಲ್ಲಾ ನ್ಯಾಯಾಧೀಶರ ವಿರುದ್ಧ ಕ್ರಮ ವಹಿಸದ ರಾಜ್ಯ ಸರಕಾರದ ನಿರ್ಲಕ್ಷ್ಯ ಖಂಡನೀಯ. ಬಂದ್ ಮೂಲಕ ಸರಕಾರದ ಗಮನ ಸೆಳೆಯುವುದರೊಂದಿಗೆ, ನ್ಯಾಯಾಂಗದಲ್ಲಿ ಮೀಸಲು ವ್ಯವಸ್ಥೆಯನ್ನು ಕಲ್ಪಿಸುವಂತೆ ಆಗ್ರಹಿಸಿ ನಡೆಸಲಿರುವ ಬಂದ್‌ಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. ಇದಕ್ಕೆ ಸಾರ್ವಜನಿಕರೂ ಬೆಂಬಲ ನೀಡಬೇಕು’ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ. ಎಸ್. ಶಿವರಾಮು ಮನವಿ ಮಾಡಿದರು.
‘ಸರಕಾರದ ಧೋರಣೆಯನ್ನು ಖಂಡಿಸಿ ಫೆಬ್ರುವರಿ 7 ರಂದು ಬೆಳಗ್ಗೆ 6 ರಿಂದ ಸಂಜೆ 5 ರವರೆಗೆ ಮೈಸೂರು ನಗರ ಬಂದ್‌ಗೆ ತೀರ್ಮಾನಿಸಲಾಗಿದೆ. ಅಂದು ಬೆಳಗ್ಗೆ 7 ಗಂಟೆಗೆ ಪುರ ಭವನದ ಆವರಣದಲ್ಲಿ ಎಲ್ಲಾ ಸಂಘಟನೆಗಳ ಸದಸ್ಯರು ಸೇರಲಿದ್ದು, ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿ ಮನವಿ ಸಲ್ಲಿಸಲಾಗುವುದು. ಇದರೊಂದಿಗೆ ನಗರ ಪ್ರವೇಶ ಮಾಡುವ ರಿಂಗ್ ರಸ್ತೆಯ ಜಂಕ್ಷನ್‌ಗಳಲ್ಲಿ ನಾನಾ ಸಂಘಟನೆಗಳ ಸದಸ್ಯರು, ರಸ್ತೆ ತಡೆ ಮೂಲಕ ಪ್ರತಿಭಟನೆ ನಡೆಸಲಿದ್ದಾರೆ’ ಎಂದು ಹೇಳಿದರು.
‘ಬಂದ್‌ಗೆ ಎಲ್ಲಾ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ವ್ಯಾಪಾರೋದ್ಯಮಿಗಳು, ನಾನಾ ಸಂಘಟನೆಗಳು, ಸಾಹಿತಿಗಳು, ಸೇರಿದಂತೆ ಮೈಸೂರಿನ ನಾಗರಿಕರು ಬೆಂಬಲವನ್ನು ಸೂಚಿಸಬೇಕು’ ಎಂದು ಮನವಿ ಮಾಡಿದರು.
ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಡಿ. ತಿಮ್ಮಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಬಿ. ಜೆ. ವಿಜಯ್ ಕುಮಾರ್, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಎನ್. ಆರ್. ನಾಗೇಶ್, ದಲಿತ ವೇಲ್‌ಫೇರ್ ಟ್ರಸ್ಟ್‌ನ ಅಧ್ಯಕ್ಷ ಶಾಂತರಾಜು, ವಕೀಲ ತಿಮ್ಮಯ್ಯ, ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ಎನ್. ಭಾಸ್ಕರ್, ನಾಯಕ ಹಿತ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ, ಪ್ರೊ. ಮಹೇಶ್, ಹಂಸರಾಜು, ಎ. ಆರ್. ಕಾಂತರಾಜು, ರೇವಣ್ಣ ನಾಗನಹಳ್ಳಿ, ಹೆಡತಲೆ ಮಂಜುನಾಥ್, ಲೋಕೇಶ್ ಮಾದಾಪುರ, ಚಿಕ್ಕಾಂದಾನಿ, ಮಹದೇವಸ್ವಾಮಿ ಇತರರು ಇದ್ದರು.
Read more
[wpas_products keywords=”deal of the day sale today offer all”]