Karnataka news paper

ನನ್ನ ಮನೆ ಕೋವಿಡ್ ಹಾಟ್‌ಸ್ಪಾಟ್ ಅಲ್ಲ: ಮಾಧ್ಯಮಗಳ ವಿರುದ್ಧ ಕರಣ್ ಜೋಹರ್ ಕಿಡಿ


ಮುಂಬೈ: ತಮ್ಮ ಮನೆಯ ಪಾರ್ಟಿಯಲ್ಲಿ ಕೊರೊನಾ ಹರಡಿದೆ ಎಂಬ ಮಾಧ್ಯಮಗಳ ವರದಿಯನ್ನು ಚಿತ್ರ ನಿರ್ದೇಶಕ ಕರಣ್ ಜೋಹರ್ ಅಲ್ಲಗಳೆದಿದ್ದಾರೆ. ನನ್ನ ಮನೆ ‘ಕೋವಿಡ್ ಹಾಟ್‌ಸ್ಪಾಟ್ ಅಲ್ಲ’ಎಂದು ಅವರು ಹೇಳಿದ್ದಾರೆ.

ನನ್ನ ಮನೆಯಲ್ಲಿ ಯಾರಿಗೂ ಕೋವಿಡ್ ದೃಢಪಟ್ಟಿಲ್ಲ ಎಂದು ಅವರು ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

‘ನಾನು ಮತ್ತು ನನ್ನ ಮನೆಯ ಸದಸ್ಯರೆಲ್ಲರೂ ಮನೆಯಲ್ಲಿಯೇ ಇದ್ದು, ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಂಡಿದ್ದೇವೆ. ದೇವರ ದಯೆಯಿಂದ ಎಲ್ಲರಿಗೂ ಕೋವಿಡ್ ನೆಗೆಟಿವ್ ವರದಿ ಬಂದಿದೆ. ಸುರಕ್ಷತಾ ದೃಷ್ಟಿಯಿಂದ ನಾನು ಎರಡು ಭಾರಿ ಪರೀಕ್ಷೆ ಮಾಡಿಸಿಕೊಂಡೆ. ನನಗೆ ನೆಗೆಟಿವ್ ಬಂದಿದೆ. ನಮ್ಮ ನಗರದ ಭದ್ರತೆಗಾಗಿ ದುಡಿಯುತ್ತಿರುವ ಪಾಲಿಕೆ ಸಿಬ್ಬಂದಿಯನ್ನು ನಾನು ಅಭಿನಂದಿಸುತ್ತೇನೆ’ಎಂದು ಬರೆದುಕೊಂಡಿದ್ದಾರೆ.

ನಟಿಯರಾದ ಕರೀನಾ ಕಪೂರ್, ಅಮೃತಾ ಅರೋರಾ ಮತ್ತು ಮಹೀಪ್ ಕಪೂರ್ ಅವರಿಗೆ ಸೋಮವಾರ ಕೋವಿಡ್ ದೃಢಪಟ್ಟಿತ್ತು. ಈ ನಟಿಯರೆಲ್ಲರೂ ಕರಣ್ ಜೋಹರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು, ಕರಣ್ ಅವರ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎಂದು ಕೆಲ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು.

49 ವರ್ಷದ ಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ ಬಾಂದ್ರಾದಲ್ಲಿರುವ ನಿವಾಸ ಕೋವಿಡ್ ಹಾಟ್‌ಸ್ಪಾಟ್ ಆಗಿದೆ ಎಂದು ವರದಿ ಆಗಿತ್ತು.

‘‌8 ಮಂದಿ ಸೇರಿದ್ದು ಪಾಟಿಗಾಗಿ ಅಲ್ಲ ಮತ್ತು ಅದು ನನ್ನ ಮನೆಯೂ ಅಲ್ಲ, ಹೋಟೆಲ್ ಎಂಬುದನ್ನು ಕೆಲ ಮಾಧ್ಯಮಗಳಿಗೆ ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ಅಲ್ಲಿ ಕಠಿಣ ಮಾರ್ಗಸೂಚಿಗಳನ್ನು ಅನುಸರಿಸಲಾಗಿತ್ತು’ಎಂದು ಹೇಳಿದ್ದಾರೆ.

‘ನಾವೆಲ್ಲರೂ ಜವಾಬ್ದಾರಿಯುತ ವ್ಯಕ್ತಿಗಳು ಮತ್ತು ಎಲ್ಲ ಸಮಯದಲ್ಲೂ ಮಾಸ್ಕ್ ಧರಿಸಿದ್ದೇವೆ. ಯಾರೂ ಸಹ ಈ ಸಾಂಕ್ರಾಮಿಕ ರೋಗವನ್ನು ಲಘುವಾಗಿ ಪರಿಗಣಿಸುವುದಿಲ್ಲ. ಸತ್ಯವನ್ನು ಪರಿಶೀಲಿಸದೆ ಪ್ರಕಟಿಸಬಾರದೆಂದು ಕೆಲವು ಮಾಧ್ಯಮದ ಸದಸ್ಯರಿಗೆ ನಾನು ವಿನಂತಿಸುತ್ತೇನೆ’ಎಂದಿದ್ದಾರೆ.

ಇದು ಸ್ವೇಚ್ಛಾಚಾರವಾಗಿ ತಿರುಗಾಡುವ ಸಂದರ್ಭ ಅಲ್ಲ. ಕೋವಿಡ್ ಪರಿಸ್ಥಿತಿ ಇನ್ನೂ ಕೊನೆಗೊಂಡಿಲ್ಲ. ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸುವುದಾಗಿ ಮುಂಬೈ ಮೇಯರ್ ಕಿಶೋರಿಪೆಡ್ನೆಕರ್ ಮಂಗಳವಾರ ಎಚ್ಚರಿಸಿದ್ದರು.

‘ಕರೀನಾ ಅವರ ಮನೆಯಲ್ಲಿ ಎರಡು ಮಕ್ಕಳಿವೆ. ಕೋವಿಡ್ ಸಂದರ್ಭದಲ್ಲಿ ಈ ರೀತಿ ಎಗ್ಗಿಲ್ಲದೆ ಓಡಾಡುವುದು ಸರಿಯಲ್ಲ.ಪಾರ್ಟಿ ನಡೆದ ಹೋಟೆಲ್ ಅನ್ನು ನಾವು ಸಂಪರ್ಕಿಸಿದ್ದೇವೆ. ಅಲ್ಲಿಗೆ ಹೋಗಿದ್ದ ಉಳಿದವರ ಪತ್ತೆ ಕಾರ್ಯವೂ ನಡೆಯುತ್ತಿದೆ’ ಎಂದು ಅವರು ಹೇಳಿದ್ದರು.

‘ಹದಿ ಹರೆಯದವರು ಅಂತಹ ಪಾರ್ಟಿಗಳಲ್ಲಿ ಭಾಗವಹಿಸುತ್ತಾರೆ. ಅವರ ವಯಸ್ಸು ಅಂತದ್ದು. ಎಂಜಾಯ್ ಮಾಡಲು ಬಯಸುತ್ತಾರೆ. ಫೇಮಸ್ ಆದವರು ಅತ್ಯಂತ ಜಾಗರೂಕರಾಗಿರಬೇಕು. ಕೋವಿಡ್ ಬಗ್ಗೆ ಅವರಿಗೆ ಭಯವಿಲ್ಲವೇಕೆ?’ಎಂದು ಪ್ರಶ್ನಿಸಿದ್ದರು.



Read More…Source link