The New Indian Express
ಮೈಸೂರು: ಕರಾವಳಿ ಜಿಲ್ಲೆಗಳಲ್ಲಿ ಆರಂಭವಾದ ಹಿಜಾಬ್ ವಿವಾದ ಇದೀಗ ಇಡೀ ರಾಜ್ಯವನ್ನು ವ್ಯಾಪಿಸುತ್ತಿದೆ. ಉಡುಪಿ ಹಾಗೂ ಕುಂದಾಪುರ ಬಳಿಕ ಇದೀಗ ಸಾಂಸ್ಕ್ರತಿಕ ನಗರಿ ಮೈಸೂರಿನಲ್ಲೂ ಹಿಜಾಬ್ ವಿವಾದ ಪ್ರತಿಧ್ವನಿಸುತ್ತಿದ್ದು, ಕಾಲೇಜಿಗೆ ಹಿಜಾಬ್ ಧರಿಸಿ ಹೋಗುವ ಮೂಲಕ ಕೆಲ ವಿದ್ಯಾರ್ಥಿನಿಯರು ಸರ್ಕಾರದ ನಿಯಮಕ್ಕೆ ಸೆಡ್ಡು ಹೊಡೆದಿದ್ದಾರೆ.
ವಿದ್ಯಾರ್ಥಿನಿಯರು ಮೈಸೂರಿನ ಬನ್ನಿಮಂಟಪದ ಹೈವೆ ಸರ್ಕಲ್ ಬಳಿ ಹಿಜಾಬ್ ಅಭಿಯಾನ ನಡೆಸುತ್ತಿದ್ದು, ಐ ಲವ್ ಹಿಜಾಬ್ ಎಂಬ ಘೋಷಣಾ ವಾಕ್ಯಗಳನ್ನು ಪ್ರದರ್ಶಿಸಿ, ಪರಸ್ಪರ ಹಿಜಾಬ್ ತೊಡಿಸಿ ಪ್ರತಿಭಟಿಸಿದ್ದಾರೆ. ಅಲ್ಲದೇ ಎಲ್ಲಾ ಕಾಲೇಜಿನಲ್ಲೂ ಹಿಜಾಬ್ಗೆ ಅವಕಾಶ ಕಲ್ಪಿಸುವಂತೆ ವಿದ್ಯಾರ್ಥಿನಿಯರು ಮನವಿ ಮಾಡಿಕೊಂಡರು. ಈ ಮೂಲಕ ಉಡುಪಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಬೆಂಬಲ ವ್ಯಕ್ತಪಡಿಸಿದರು.
ಬೆಳಗಾವಿಯ ರಾಮದುರ್ಗ ಕಾಲೇಜಿನಲ್ಲಿಯೂ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗೆ ಬಂದ ಸಂದರ್ಭದಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿದ ಘಟನೆ ನಡೆಯಿತು.
ಇದನ್ನೂ ಓದಿ: ಹಿಜಾಬ್ ವಿವಾದ: ಅಮಾನವೀಯ ಎಂದ ಸಿದ್ದರಾಮಯ್ಯ, ವಿಚಾರವನ್ನು ಕಾಂಗ್ರೆಸ್ ರಾಜಕೀಯಗೊಳಿಸುತ್ತಿದೆ ಎಂದ ಬಿ.ಸಿ.ನಾಗೇಶ್
ಈ ಎಲ್ಲಾ ಬೆಳವಣಿಗೆ ನಡುವಲ್ಲೇ ಸಿಎಂ ಬೊಮ್ಮಾಯಿಯವರು ವಿವಾದ ಸಂಬಂಧ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿತರು. ಸಭೆಯಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಹಾಜರಿದ್ದರು.
ಕರ್ನಾಟಕವನ್ನು ಮತ್ತೊಂದು ತಾಲಿಬಾನ್ ರಾಜ್ಯವಾಗಲು ಬಿಡಲ್ಲ: ಸಚಿವ ಸುನೀಲ್ ಕುಮಾರ್
ಹಿಜಾಬ್ ವಿವಾದ ಆರಂಭವಾದ ಉಡುಪಿ ಜಿಲ್ಲೆಯಲ್ಲಿ ತಾಲಿಬಾನೀಕರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಅವರು ಹೇಳಿದ್ದಾರೆ.
“ಬಡ ಹಿನ್ನೆಲೆಯ ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರುವುದು ಹೇಗೆ? ಅವರ ಹಿಂದೆ ಯಾರಿದ್ದಾರೆ?” ಎಂದು ಇದೇ ವೇಳೆ ಪ್ರಶ್ನಿಸಿದ್ದಾರೆ.
ಮುಸ್ಲಿಂ ವಿದ್ಯಾರ್ಥಿಗಳು ಓದಬೇಕಾದರೆ ಸಮವಸ್ತ್ರದಲ್ಲಿ ಬರಬೇಕು ಎಂದ ಸಚಿವ ಬಿಸಿ ನಾಗೇಶ್ ಅವರು, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿ, 2018ರಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಲೇ ಸಮವಸ್ತ್ರದ ನಿಯಮಾವಳಿ ರೂಪಿಸಲಾಗಿತ್ತು ಎಂದಿದ್ದಾರೆ.
ಇದನ್ನೂ ಓದಿ: ಉಡುಪಿ: ಹಿಜಾಬ್, ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳಿಗೆ ಬೈಂದೂರು ಕಾಲೇಜಿನಲ್ಲಿ ಪ್ರವೇಶ ನಿರಾಕರಣೆ
ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರವನ್ನು ಹಾಳು ಮಾಡಬೇಡಿ, ಹೈಕೋರ್ಟ್ ತೀರ್ಪು ನೀಡಿದ ನಂತರ ರಾಜ್ಯವು ನೀತಿಯನ್ನು ಹೊರತರಲಿದೆ ಎಂದು ತಿಳಿಸಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಕಾಂಗ್ರೆಸ್ ಪಕ್ಷದ ಇಚ್ಛೆಯಂತೆ ಸರ್ಕಾರ ನಿಯಮಗಳನ್ನು ರೂಪಿಸಲು ಸಾಧ್ಯವಿಲ್ಲ. ಸಮವಸ್ತ್ರದ ಪರಿಕಲ್ಪನೆ ಬ್ರಿಟಿಷರ ಕಾಲದಿಂದಲೂ ಬಂದಿದೆ. ಮತ ಬ್ಯಾಂಕ್ ರಾಜಕಾರಣಕ್ಕಾಗಿ ಧರ್ಮದ ಆಧಾರದಲ್ಲಿ ಕಾಂಗ್ರೆಸ್ ದೇಶವನ್ನು ವಿಭಜಿಸಿತು ಎಂದು ಆರೋಪಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಅವರು ಮಾತನಾಡಿ, ಆಡಳಿತಾರೂಢ ಬಿಜೆಪಿ ಬೆಳವಣಿಗೆಗಳನ್ನು ಗಮನಿಸುತ್ತಿದ್ದು, ಹಿಜಾಬ್ ವಿವಾದ ಸಂಬಂಧ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ.
ಮಾಜಿ ಸಚಿವ ಯು.ಟಿ.ಖಾದರ್ ಅವರು ಮಾತನಾಡಿ, ವಿದ್ಯಾರ್ಥಿಗಳು ಬಯಲಿಗೆ ಬಂದರೆ ಸರ್ಕಾರಕ್ಕೆ ತಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಆಡಳಿತಾರೂಢ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಕುಂದಾಪುರ: ಮೂರನೇ ದಿನವೂ ಹಿಜಾಬ್ ಧರಿಸಿ ಬಂದವರಿಗೆ ಕಾಲೇಜಿಗೆ ಪ್ರವೇಶ ನಿರಾಕರಣೆ! ಪೋಷಕರೊಂದಿಗೆ ಪ್ರತಿಭಟನೆ
ಹಿಜಾಬ್ ಗಲಾಟೆ ಉಲ್ಬಣಗೊಳ್ಳುವ ಸಾಧ್ಯತೆಯಿದ್ದು, ಇದನ್ನು ಸರ್ಕಾರ ತಡೆಯಬೇಕು ಎಂದು ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಮತ್ತೊಬ್ಬ ಹಿರಿಯ ಕಾಂಗ್ರೆಸ್ ನಾಯಕ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಅವರು ಮಾತನಾಡಿ, ಕಾಲೇಜಿಗೆ ವಿದ್ಯಾರ್ಥಿಗಳ ಪ್ರವೇಶ ನಿರಾಕರಿಸಿರುವುದನ್ನು ನೋಡಿ ಬಹಳ ನೋವಾಗುತ್ತಿದೆ. ಇದು ಸರಿಯಲ್ಲ. ಆಡಳಿತಾರೂಢ ಬಿಜೆಪಿ ಇದರ ಹಿಂದೆ ಇದೆ ಎಂದು ಆರೋಪಿಸಿದ್ದಾರೆ.
Read more
[wpas_products keywords=”deal of the day”]