Karnataka news paper

‘ಎಷ್ಟೊಂದ್‌ ಜನ, ಇಲ್ಲಿ ಯಾರು ನನ್ನೋರು’: ಧಾರವಾಡದಲ್ಲಿ ತನ್ನ ತಂದೆ-ತಾಯಿ, ಬಂಧುಗಳ ಹುಡುಕಾಟದಲ್ಲಿ ಸ್ವೀಡನ್ ವ್ಯಕ್ತಿ!


The New Indian Express

ಹುಬ್ಬಳ್ಳಿ: ಇದು ತಮ್ಮವರಿಗಾಗಿ ಹುಡುಕಾಟ ನಡೆಸುತ್ತಿರುವ ಯುವಕನೊಬ್ಬನ ಕಥೆ. ಈಗ ಸೋಷಿಯಲ್ ಮೀಡಿಯಾದ ಕಾರುಬಾರು, ಪ್ರಭಾವ ಜೋರಾಗಿದೆ. ಹೀಗಾಗಿ ಸೋಷಿಯಲ್ ಮೀಡಿಯಾ ಮೂಲಕ ಸ್ವೀಡನ್ ನ ಪಂತು ಎಂಬುವವರು ತಮ್ಮ ಬಂಧುಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅದು ನಮ್ಮ ಕರ್ನಾಟಕದ ಪೇಡನಗರಿ ಧಾರವಾಡದಲ್ಲಿ ತಮ್ಮವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ದೂರದ ಸ್ವೀಡನ್ ವ್ಯಕ್ತಿಗೂ ಧಾರವಾಡಕ್ಕೂ ಏನು ನಂಟು ಎಂದು ಭಾವಿಸುತ್ತೀರಾ, ಇಲ್ಲಿದೆ ನೋಡಿ.

ಏನಿದು ಪ್ರಕರಣ?: ಪಂತು ಜೋಹಾನ್ ಪಾಮ್ಕ್ವಿಸ್ಟ್ ಎಂಬ 40 ವರ್ಷದ ವ್ಯಕ್ತಿಯನ್ನು 1980ರ ದಶಕದ ಸುಮಾರಿಗೆ ಸ್ವೀಡನ್ ನ ದಂಪತಿ ದತ್ತು ಪಡೆದು ಸ್ವೀಡನ್ ಗೆ ಕರೆದುಕೊಂಡು ಹೋಗಿದ್ದರು. ಈ ಪಂತು ಧಾರವಾಡದ ವ್ಯಕ್ತಿ, ಮೂರು ವರ್ಷದ ಪುಟ್ಟ ಮಗುವಾಗಿದ್ದಾಗ ಹೋಗಿದ್ದ ಪಂತುವಿಗೆ ಈಗ ಏನೂ ನೆನಪಿಲ್ಲ, ತನ್ನನ್ನು ಪಂತು ಎಂದು ಕರೆಯುತ್ತಿದ್ದರೇನೋ ಎಂದು ನೆನಪಿಸಿಕೊಳ್ಳುತ್ತಾರೆ, ಅಥವಾ ಎಲ್ಲರೂ ಮುದ್ದಿನಿಂದ ಪುಟ್ಟು ಎಂದು ಕರೆಯುತ್ತಿದ್ದರೇನೋ?

ಧಾರವಾಡದಲ್ಲಿ ಕಳೆದ ಸ್ವಲ್ಪ ನೆನಪು, ತಾಯಿಯ ಮುಖ, ಒಬ್ಬ ವೃದ್ಧನ ಜೊತೆ ಕೈಹಿಡಿದುಕೊಂಡು ಓಡಾಡುತ್ತಿದ್ದುದು, ಎಮ್ಮೆಗಳ ಜೊತೆ ಆಟವಾಡುತ್ತಿದ್ದದ್ದು, ಹಾಲು ಕುಡಿಯುತ್ತಿದ್ದದ್ದು, ನಂತರ ಧಾರವಾಡ ಪೊಲೀಸ್ ಠಾಣೆಯಲ್ಲಿ ಮಾರುಕಟ್ಟೆಯಲ್ಲಿ ಸಿಕ್ಕ ಒಬ್ಬನೇ ಒಬ್ಬ ಪುಟ್ಟ ಮಗುವನ್ನು ಪೊಲೀಸರು ಕರೆತಂದಿದ್ದಾಗ ಅಳುತ್ತಿದ್ದುದು ಇಷ್ಟು ನೆನಪುಗಳಿವೆ. ತನ್ನ ಪೋಷಕರು ಯಾರು, ಅವರು ಏಕೆ ತನ್ನನ್ನು ದತ್ತು ನೀಡಿದರು ಎಂದು ಕೂಡ ಪಂತುಗೆ ಗೊತ್ತಿಲ್ಲ.

ಕಾನೂನಾತ್ಮಕವಾಗಿ ದತ್ತು ಪ್ರಕ್ರಿಯೆ ಮುಗಿದ ನಂತರ ಪಂತು ಸ್ವೀಡನ್ ಗೆ ಹೋದರು. ಅಲ್ಲಿ ಶಿಕ್ಷಣ ಪಡೆದು ಸಮಾಜ ಕಾರ್ಯದಲ್ಲಿ ತೊಡಗಿದರು. ಮಕ್ಕಳು, ಹದಿಹರೆಯದವರಿಗೆ ಸಹಾಯ ಮಾಡುತ್ತಾರೆ. ರಿಟೈಲ್ ಜಗತ್ತಿನಲ್ಲಿ ಕೆಲಸ ಮಾಡಿದ್ದಾರೆ. 4 ದಶಕಗಳ ಸ್ವೀಡನ್ ಬದುಕಿನಲ್ಲಿ ಭಾರತದಲ್ಲಿ ತನ್ನವರಾರು ಎಂದು ಹುಡುಕಿ–ಹುಡುಕಿ ಪಂತು ಸುಸ್ತಾಗಿ ಹೋಗಿದ್ದಾರೆ. 

ನಾನು ಧಾರವಾಡಕ್ಕೆ ಹಿಂದೆಯೇ ಬರಬೇಕೆಂದುಕೊಂಡಿದ್ದೆ. ಆದರೆ ನನ್ನಲ್ಲಿ ಅಷ್ಟೊಂದು ಹಣವಿರಲಿಲ್ಲ. ಇಂಟರ್ನೆಟ್ ನಲ್ಲಿ ನನ್ನ ಹೆಸರು, ಅದರ ಅರ್ಥ, ಕನ್ನಡದಲ್ಲಿ ಅದರ ಅರ್ಥವೇನು ಎಂದು ಹುಡುಕಿದೆ, ಸಿಗಲಿಲ್ಲ. ಈಗ ರಜೆಯಲ್ಲಿದ್ದೇನೆ, ಸೋಷಿಯಲ್ ಮೀಡಿಯಾದಲ್ಲಿ ಹುಡುಕಾಟ ನಡೆಸುತ್ತಿದ್ದೇನೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ನನ್ನ ಹೆತ್ತ ತಾಯಿ ಮತ್ತು ಬಂಧುಗಳ ಬಗ್ಗೆ ನನಗೆ ಗೊತ್ತಾಗಬೇಕು, ನನ್ನಲ್ಲಿ ಯಾವುದೇ ದಾಖಲೆಗಳಿಲ್ಲ. ನನ್ನ ಹಳೆಯ ಫೋಟೋವೊಂದಿದೆ ಎಂದು ಫೋಟೋ ತೋರಿಸಿದರು. 

ಪಂತು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡುತ್ತಿದ್ದಂತೆ ಹಲವರು ಹಂಚಿಕೊಂಡಿದ್ದಾರೆ. ನಮಗೆ ಈ ಬಗ್ಗೆ ಪತ್ರ ಬಂದಿದೆ. 1980ರ ದಶಕದಲ್ಲಿ ಧಾರವಾಡದಲ್ಲಿ ಎಷ್ಟು ಪೊಲೀಸ್ ಠಾಣೆಗಳಿವೆ ಎಂದು ನೋಡಿಕೊಂಡು ಹುಬ್ಬಳ್ಳಿ-ಧಾರವಾಡ ಪೊಲೀಸ್ ಸೂಪರಿಂಟೆಂಡೆಂಟ್ ಅವರ ಜೊತೆ ಸಮನ್ವಯ ಸಾಧಿಸಿ ಆಗ ಕಳೆದು ಹೋಗಿದ್ದ ಮಕ್ಕಳ ಬಗ್ಗೆ ಪತ್ತೆ ಹಚ್ಚಲು ನೋಡುತ್ತಿದ್ದೇವೆ ಎಂದು ಧಾರವಾಡ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಪಿ ಕೃಷ್ಣಕಾಂತ್ ಹೇಳುತ್ತಾರೆ.

ಎಲ್ಲರ ಸಹಕಾರ, ಸಹಾಯದಿಂದ ತನ್ನ ನಿಜವಾದ ತಾಯಿ ಮತ್ತು ಬಂಧುಗಳು ಸಿಗುತ್ತಾರೆ ಎಂಬ ಆಶಾವಾದದಲ್ಲಿ ಪಂತು ಇದ್ದಾರೆ.



Read more

[wpas_products keywords=”deal of the day”]