Karnataka news paper

ದಶಕದ ನಂತರ ಚಿತ್ರದುರ್ಗದಲ್ಲಿ ಲಿಂಗಾಯತರಿಗೆ ಪ್ರಾತಿನಿಧ್ಯ..! ನವೀನ್‌ ಗೆಲುವಿನ ಸಂಭ್ರಮಾಚರಣೆ..!


ಹೈಲೈಟ್ಸ್‌:

  • ಕೆ. ಎಸ್‌. ನವೀನ್‌ಗೆ ಇದು ಮೂರನೇ ಪ್ರಯತ್ನದ ಗೆಲುವು
  • 2013 ರಲ್ಲಿ ಸ್ಥಳೀಯ ವಿಧಾನ ಪರಿಷತ್‌ಗೆ ನಡೆದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು
  • 2015 ರಲ್ಲಿ ನಡೆದ ಚುನಾವಣೆಯಲ್ಲೂ ಅವರು ಪರಾಭವಗೊಂಡಿದ್ದರು

ಎಂ. ಎನ್‌. ಅಹೋಬಳಪತಿ
ಚಿತ್ರದುರ್ಗ:
ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ. ಎಸ್‌. ನವೀನ್‌ ಗೆಲುವು ಸಾಧಿಸುವುದರೊಂದಿಗೆ ದಶಕದ ನಂತರ ಚಿತ್ರದುರ್ಗ ಜಿಲ್ಲೆಯಲ್ಲಿ ಲಿಂಗಾಯತರಿಗೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಂತಾಗಿದೆ. ಇದೇ ಕಾರಣಕ್ಕೆ ನವೀನ್‌ ಅವರ ಗೆಲುವನ್ನು ಒಳ ಪಂಗಡಗಳ ಬೇಧವಿಲ್ಲದೇ ಸಂಭ್ರಮಿಸುತ್ತಿದ್ದಾರೆ. ಲಿಂಗಾಯತ ಸಮುದಾಯದ ವಾಟ್ಸಪ್‌ ಗ್ರೂಪ್‌ಗಳಲ್ಲಿ ಈ ಗೆಲುವಿನ ಸಂಭ್ರಮದ ಸಂದೇಶಗಳು ಹರಿದಾಡುತ್ತಿವೆ.

ಕೆ. ಎಸ್‌. ನವೀನ್‌ಗೆ ಇದು ಏಕಾಏಕಿ ಸಿಕ್ಕ ಗೆಲುವೇನಲ್ಲ. ಇದು ಮೂರನೇ ಪ್ರಯತ್ನದ ಗೆಲುವು. 2013 ರಲ್ಲಿ ಸ್ಥಳೀಯ ವಿಧಾನ ಪರಿಷತ್‌ಗೆ ನಡೆದ ಉಪ ಚುನಾವಣೆ ಹಾಗೂ 2015 ರಲ್ಲಿ ನಡೆದ ಚುನಾವಣೆ ಎರಡರಲ್ಲೂ ಅವರು ಪರಾಭವಗೊಂಡಿದ್ದರು. 2015 ರಲ್ಲಿ 240 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಈಗಿನ ಗೆಲುವು ವೈಯಕ್ತಿಕವಾಗಿ ಕೆ. ಎಸ್‌. ನವೀನ್‌ಗೆ ಮಾತ್ರವಲ್ಲದೇ, ಲಿಂಗಾಯತ ಸಮುದಾಯದ ರಾಜಕೀಯ ಕೊರಗನ್ನೂ ನೀಗಿಸಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಲಿಂಗಾಯತರಲ್ಲಿ ಹಲವು ಒಳ ಪಂಗಡಗಳಿದ್ದರೂ, ಒಬ್ಬ ಜನ ಪ್ರತಿನಿಧಿ ಇಲ್ಲ ಎನ್ನುವ ಆಳವಾದ ರಾಜಕೀಯ ಕೊರಗು ಇತ್ತು. ಸ್ವಾತಂತ್ರ್ಯಾ ನಂತರ ಆರಂಭಿಕ ದಶಕಗಳಲ್ಲಿ ಲಿಂಗಾಯತ ಸಮುದಾಯದ ರಾಜಕೀಯ ಪ್ರಾತಿನಿಧ್ಯಕ್ಕೆ ಕೊರತೆ ಇರಲಿಲ್ಲ. ನಂತರದ ದಶಕಗಳಲ್ಲಿ ಚಳ್ಳಕೆರೆಯಲ್ಲಿ ಬಸವರಾಜ ಮಂಡಿಮಠ್‌, ಎಚ್‌. ಸಿ. ಶಿವಶಂಕರಪ್ಪ, ಹೊಸದುರ್ಗದಲ್ಲಿ ಟಿ. ಎಚ್‌. ಬಸವರಾಜ್‌, ಹೊಳಲ್ಕೆರೆಯಲ್ಲಿ ಪಿ. ರಮೇಶ್‌, ಯು. ಎಚ್‌. ತಿಮ್ಮಣ್ಣ ಆಯ್ಕೆಯಾಗಿದ್ದರು.

ಹೊಳಲ್ಕೆರೆ ಮೀಸಲು ಕ್ಷೇತ್ರವಾದ ನಂತರ ಲಿಂಗಾಯತರ ಆಯ್ಕೆಗೆ ಇದ್ದ ಒಂದು ಕ್ಷೇತ್ರವೂ ಕೈ ತಪ್ಪಿ ಹೋದಂತಾಗಿತ್ತು. ಆದರೆ ವಿಧಾನ ಪರಿಷತ್‌ಗೆ 90ರ ದಶಕದಲ್ಲಿ ಭೀಮ ಸಮುದ್ರದ ಬಿ. ಟಿ. ರುದ್ರಮ್ಮ ಹಾಗೂ ಬಿ. ಟಿ. ಚನ್ನಬಸಪ್ಪ ಆಯ್ಕೆಯಾಗಿದ್ದರು. ಎಂಬತ್ತರ ದಶಕದಲ್ಲಿ ಚಿತ್ರದುರ್ಗ ವಿಧಾನಸಭೆ ಕ್ಷೇತ್ರದಿಂದ ಜನತಾ ಪರಿವಾರದಿಂದ ಸ್ಪರ್ಧಿಸಿದ್ದ ಎಚ್‌. ಏಕಾಂತಯ್ಯ ಎರಡು ಬಾರಿ ಶಾಸಕರು, ಕ್ಯಾಬಿನೆಟ್‌ ಸಚಿವರಾಗಿದ್ದರು.

ಕ್ಷೇತ್ರ SURVEY: ಲಿಂಗಾಯತ ಪ್ರತ್ಯೇಕ ಧರ್ಮ ವೋಟಿನ ವಿಷಯವಲ್ಲ!
ಎಸ್‌. ಕೆ. ಬಸವರಾಜನ್‌ ಚಿತ್ರದುರ್ಗ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಒಮ್ಮೆ ಪರಾಭವಗೊಂಡು ನಂತರ ಜೆಡಿಎಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರದ ಅವಧಿಗೆ ನಡೆದ ಚುನಾವಣೆಯಲ್ಲಿ ಜಿ. ಎಸ್‌. ಮಂಜುನಾಥ್‌, ಬಸವರಾಜನ್‌ ಇಬ್ಬರೂ ಅಖಾಡಕ್ಕಿಳಿದು ಪರಾಭವಗೊಂಡಿದ್ದರು.

ಹೊಸದುರ್ಗದಲ್ಲಿ ಲಿಂಗಾಯತರ ಸ್ಪರ್ಧೆಗೆ ಅವಕಾಶ ಇದ್ದರೂ 2008 ಮತ್ತು 2013 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್‌. ಲಿಂಗಮೂರ್ತಿ ಲಿಂಗಾಯತ ಒಳ ಪಂಗಡಗಳ ಅನೈಕ್ಯತೆಯ ಕಾರಣಕ್ಕೆ ಪರಾಭವಗೊಂಡಿದ್ದರು. ಇದೇ ಕಾರಣಕ್ಕೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವು ಆದ್ಯತೆಯಾಗಿದ್ದುದರಿಂದ ಹೊಸದುರ್ಗ ಕ್ಷೇತ್ರದ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದ ಕೆ. ಎಸ್‌. ನವೀನ್‌, ಎಸ್‌. ಲಿಂಗಮೂರ್ತಿ ಇಬ್ಬರೂ ಹಿಂದೆ ಸರಿದು ಗೂಳಿಹಟ್ಟಿ ಡಿ. ಶೇಖರ್‌ ಸ್ಪರ್ಧೆಗೆ ವೇದಿಕೆ ಮುಕ್ತಗೊಳಿಸಿದ್ದರು.

ರಘು ಆಚಾರ‍್ಯ ವಿರುದ್ಧ ಪ್ರತಿಭಟನೆ
ಚಿತ್ರದುರ್ಗ ವಿಧಾನ ಸಭೆ ಕ್ಷೇತ್ರದಲ್ಲೂ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕೆ. ಸಿ. ವೀರೇಂದ್ರ ಪಪ್ಪಿ ಹಾಗೂ ಹನುಮಲಿ ಷಣ್ಮುಖಪ್ಪ ಇಬ್ಬರೂ ಸ್ಪರ್ಧಿಸಿ, ಪರಾಭವಗೊಂಡಿದ್ದರು. ಆಯಾ ಸಂದರ್ಭದಲ್ಲಿ ಬದಲಾಗುವ ರಾಜಕೀಯ ಸಮೀಕರಣ ಹಾಗೂ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹಿಂದುಳಿದ ವರ್ಗಗಳ ರಾಜಕೀಯ ಜಾಗೃತಿ, ಲಿಂಗಾಯತ ಸಮುದಾಯದ ರಾಜಕೀಯ ಪ್ರಾತಿನಿಧ್ಯಕ್ಕೆ ಒಂದು ಸವಾಲಾಗಿ ಪರಿಣಮಿಸಿದೆ.

ಈ ಸವಾಲನ್ನು ಪರಿಹರಿಸಿಕೊಳ್ಳುವ ಸಾಧ್ಯತೆಗಳ ಬಾಗಿಲು ಮುಚ್ಚಿಯೇ ಹೋಯಿತು ಎನ್ನುವ ಪರಿಸ್ಥಿತಿಯಲ್ಲಿ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್‌ ಚುನಾವಣೆಯಲ್ಲಿ ಕೆ. ಎಸ್‌. ನವೀನ್‌ ಗೆಲುವು ಸಾಧಿಸಿರುವುದು ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ ಎಂದರೆ ಅತಿಶಯೋಕ್ತಿ ಅಲ್ಲ.

ಲಿಂಗಾಯತ ಕೋಟಾದಲ್ಲಿ ಮತ್ತೆ ಕೇಂದ್ರ ಸಚಿವರಾಗ್ತಾರಾ ಸಿದ್ದೇಶ್ವರ್? ಅಂಗಡಿ ಸ್ಥಾನಕ್ಕೆ ನೇಮಕ..?



Read more