ಮೈಸೂರು: ‘ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಶಾಸಕ ಜಿ.ಟಿ.ದೇವೇಗೌಡ ಅವರ ವಿರುದ್ಧ ಶೀಘ್ರದಲ್ಲೇ ಶಿಸ್ತು ಕ್ರಮ ಕೈಗೊಳ್ಳಲು ಜೆಡಿಎಸ್ ವರಿಷ್ಠರು ತೀರ್ಮಾನಿಸಿದ್ದಾರೆ’ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.
ಮೈಸೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಹಿಂದೆ ನಡೆದ ಚುನಾವಣೆಗಳು ಮತ್ತು ಈಗ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಅವರು ಪಕ್ಷದ ವಿರುದ್ಧ ಕೆಲಸ ಮಾಡಿದ್ದಾರೆ. ಜೆಡಿಎಸ್ ಕಾರ್ಯಕರ್ತರು, ಮತದಾರರಿಂದ ಗೆದ್ದು ಬಂದು ನಮ್ಮ ವಿರುದ್ಧವೇ ಕೆಲಸ ಮಾಡಿದ್ದಾರೆ. ಪಕ್ಷ ಇದನ್ನು ಗಂಭೀರವಾಗಿ ಪರಿಗಣಿಸಿದೆ’ ಎಂದು ತಿಳಿಸಿದರು.
ಓದಿ: ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರ: ಜೆಡಿಎಸ್ನ ಮಂಜೇಗೌಡಗೆ ಗೆಲುವು
‘ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಿಂದ ಗೆದ್ದ ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ ಅವರು ವರಿಷ್ಠರನ್ನು ಭೇಟಿಯಾಗಲಿದ್ದಾರೆ. ಚುನಾವಣೆಯ ವಿಚಾರಗಳ ಬಗ್ಗೆ ಅವರು ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಎಲ್ಲ ಮಾಹಿತಿ ನೀಡಲಿದ್ದಾರೆ. ಈಗಾಗಲೇ ಪಕ್ಷದ ವರಿಷ್ಠರು ಒಂದು ತೀರ್ಮಾನಕ್ಕೆ ಬಂದಿದ್ದು, ಅದು ಏನು ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ’ ಎಂದರು.
‘ನಮಗೆ ಜೆಡಿಎಸ್ ಅನಿವಾರ್ಯವೇ ಹೊರತು, ಜೆಡಿಎಸ್‌ಗೆ ನಾವು ಯಾರೂ ಅನಿವಾರ್ಯವಲ್ಲ ಎಂಬುದನ್ನು ಈ ಚುನಾವಣೆ ಫಲಿತಾಂಶ ತೋರಿಸಿದೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು ಈಗಲಾದರೂ ಎಚ್ಚೆತ್ತುಕೊಂಡು, ಮನಸ್ಥಿತಿ ಬದಲಾಯಿಸಲಿ. ಇದುವರೆಗೂ ಅವರನ್ನು ನಮ್ಮ ನಾಯಕರು ಅನ್ನುತ್ತಿದ್ದೆ. ಈಗ ಶಾಸಕರು ಅನ್ನುತ್ತೇನೆ’ ಎಂದು ಹೆಸರು ಹೇಳದೆಯೇ ಜಿ.ಟಿ ದೇವೇಗೌಡ ವಿರುದ್ಧ ಕಿಡಿಕಾರಿದರು.