Karnataka news paper

ರಾಜ್ಯ ಸರ್ಕಾರದಿಂದ ಬೇಟಿ ಹಟಾವೊ ಯತ್ನ: ಎಚ್‌ಡಿಕೆ


ಬೆಂಗಳೂರು: ಹೆಣ್ಣು ಮಕ್ಕಳ ಉದ್ಧಾರಕ್ಕಾಗಿ ಕೇಂದ್ರ ಸರ್ಕಾರ ಬೇಟಿ ಬಚಾವೊ, ಬೇಟಿ ಪಡಾವೊ ಯೋಜನೆ ಜಾರಿಗೊಳಿಸಿದೆ. ಆದರೆ, ರಾಜ್ಯ ಸರ್ಕಾರ ಹಿಜಾಬ್‌ ಧರಿಸುವ ವಿಷಯವನ್ನು ವಿವಾದ ಮಾಡುವ ಮೂಲಕ ಬೇಟಿ ಹಟಾವೊ ಮಾಡಲು ಹೊರಟಿದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದರು.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ಕೋವಿಡ್‌ ಸಂಕಷ್ಟದ ಅವಧಿಯಲ್ಲಿ ಸರಿಯಾಗಿ ಶಾಲೆ, ಕಾಲೇಜುಗಳ ತರಗತಿಗಳು ನಡೆದಿಲ್ಲ. ವಿದ್ಯಾರ್ಥಿಗಳು ಮತ್ತು ಪೋಷಕರು ಒದ್ದಾಡುತ್ತಿದ್ದಾರೆ. ಇಂಥಹ ಸಂದರ್ಭದಲ್ಲಿ ಹಿಜಾಬ್‌ ವಿವಾದವನ್ನು ಸೃಷ್ಟಿಸಲಾಗಿದೆ. ಇದು ಅನಗತ್ಯವಾಗಿತ್ತು’ ಎಂದರು.

ಈ ವಿಷಯವನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ಸಾಮರಸ್ಯ ಹಾಳು ಮಾಡಲಾಗುತ್ತಿದೆ. ರಾಜ್ಯದಲ್ಲಿ ಸಾಮರಸ್ಯ ನೆಲೆಸಿರಬೇಕು ಎಂಬ ಕಾಳಜಿ ರಾಷ್ಟ್ರೀಯ ಪಕ್ಷಗಳಿಗೆ ಇದ್ದರೆ ಹಿಜಾಬ್‌ ಮತ್ತು ಕೇಸರಿ ಶಾಲುಗಳ ವಿಷಯವನ್ನು ಇಲ್ಲಿಗೇ ಅಂತ್ಯಗೊಳಿಸಲಿ ಎಂದು ಆಗ್ರಹಿಸಿದರು.

‘ಯಾವುದೇ ರೀತಿಯ ದ್ವೇಷ, ಅಸೂಯೆಯ ಭಾವನೆ ಹೊಂದಿಲ್ಲದ ಮಕ್ಕಳ ನಿರ್ಮಲ ಮನಸ್ಸಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ವಿಷ ತುಂಬಬಾರದು. 15 ದಿನಗಳಿಂದ ಚರ್ಚೆಯಲ್ಲಿರುವ ವಿಷಯವನ್ನು ಇಲ್ಲಿಗೇ ಬಿಡುವುದು ಉತ್ತಮ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂಥಹ ಸೂಕ್ಷ್ಮ ವಿಷಯವನ್ನು ಹೆಚ್ಚು ಬೆಳೆಸಲು ಬಿಡಬಾರದು. ಸೂಕ್ತವಾಗಿ ಪರಿಸ್ಥಿತಿ ನಿಭಾಯಿಸುವ ಮೂಲಕ ಸಮಾಜದ ವಾತಾವರಣ ಹದಗಡೆದಂತೆ ನೋಡಿಕೊಳ್ಳಬೇಕು’ ಎಂದು ಕುಮಾರಸ್ವಾಮಿ ಹೇಳಿದರು.

ಕರಾವಳಿ ಪ್ರದೇಶದ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ ಧರಿಸಲು ಅವಕಾಶ ಇತ್ತು ಎಂಬ ಮಾಹಿತಿ ಇದೆ. ಎಲ್ಲಿ ಅವಕಾಶ ಇತ್ತೋ ಅಲ್ಲಿ ಮುಂದುವರಿಯಲಿ. ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಈಗ ಏಕೆ ಹೊಸದಾಗಿ ಅವಕಾಶ ನೀಡಿದ್ದಾರೋ ಗೊತ್ತಿಲ್ಲ. ನಂಬಿಕೆಗಳ ವಿಚಾರದಲ್ಲಿ ಇತರರನ್ನು ಕೆರಳಿಸುವಂತೆ ಯಾರೂ ವರ್ತಿಸಬಾರದು. ಮಕ್ಕಳಲ್ಲಿ ಹಿಂದೂ– ಮುಸ್ಲಿಂ ಎಂಬ ಸಂಕುಚಿತ ಮನೋಭಾವ ಬೆಳೆಸಬಾರದು ಎಂದರು.

ರಾಷ್ಟ್ರೀಯ ಪಕ್ಷಗಳು ಇಂತಹ ವಿಷಯಗಳನ್ನು ಬಳಸಿಕೊಂಡು ವ್ಯವಸ್ಥೆಯನ್ನು ಹಾಳು ಮಾಡಬಾರದು. ಭಯದ ವಾತಾವರಣ ಸೃಷ್ಟಿಸಲು ಯಾರೂ ಪ್ರಯತ್ನಿಸಬಾರದು ಎಂದು ಆಗ್ರಹಿಸಿದರು.

ಸಿ.ಎಂ ಆಗುವ ಹುಚ್ಚು: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಇಬ್ಬರಿಗೂ ಮುಖ್ಯಮಂತ್ರಿ ಆಗುವ ಹುಚ್ಚು. ಈ ಕಾರಣದಿಂದ ಇಂತಹ ಸೂಕ್ಷ್ಮ ವಿಚಾರಗಳನ್ನೂ ಮತ ಪಡೆಯಲು ಬಳಸಿಕೊಳ್ಳುತ್ತಿದ್ದಾರೆ. ಒಬ್ಬರಿಗೆ ಮುಸ್ಲಿಮರ ಮತಗಳನ್ನು ಪಡೆಯುವ ಉಮೇದು. ಮತ್ತೊಬ್ಬರಿಗೆ ಮುಸ್ಲಿಮರ ಪರ ಮಾತನಾಡಿದರೆ ಹೆಚ್ಚು, ಕಡಿಮೆ ಆಗಬಹುದು ಎನ್ನುವ ಭಯ’ ಎಂದು ಕುಮಾರಸ್ವಾಮಿ ಟೀಕಿಸಿದರು.



Read more from source

[wpas_products keywords=”deal of the day sale today kitchen”]