ಹೈಲೈಟ್ಸ್:
- ಪಶ್ಚಿಮ ಗೋದಾವರಿ ಜಿಲ್ಲೆಯ ಜಂಗರೆಡ್ಡಿಗುಡೆಂ ಸಮೀಪ ಸಂಭವಿಸಿದ ದುರ್ಘಟನೆ
- ತೆಲಂಗಾಣದ ಅಸ್ವರಾವ್‌ಪೇಟೆಯಿಂದ ಬರುತ್ತಿದ್ದ ಎಪಿಎಸ್‌ಆರ್‌ಸಿಟಿ ಬಸ್
- ಲಾರಿಗೆ ಜಾಗ ಮಾಡಿಕೊಡುವ ಪ್ರಯತ್ನದಲ್ಲಿ ಸೇತುವೆಯಿಂದ ನದಿಗೆ ಉರುಳಿ ಅವಘಡ
ಬಸ್‌ನಲ್ಲಿ ಸುಮಾರು 35 ಪ್ರಯಾಣಿಕರಿದ್ದು, ನೆರೆಯ ತೆಲಂಗಾಣ ರಾಜ್ಯದ ಅಸ್ವರಾವ್‌ಪೇಟೆಯಿಂದ ಜಂಗರೆಡ್ಡಿಗುಡೆಂ ಕಡೆಗೆ ತೆರಳುತ್ತಿದ್ದ ವೇಳೆ ಈ ದುರಂತ ನಡೆದಿದೆ ಎಂದು ಪಶ್ಚಿಮ ಗೋದಾವರಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ದೇವ್ ತಿಳಿಸಿದ್ದಾರೆ. ಬಸ್‌ನಲ್ಲಿ 47 ಪ್ರಯಾಣಿಕರು ಇದ್ದರು ಎಂದು ಕೆಲವರು ತಿಳಿಸಿದ್ದಾರೆ.
ಎಪಿಎಸ್‌ಆರ್‌ಟಿಸಿ (APSRTC) ಬಸ್ ಚಾಲಕ, ಎದುರಿನಿಂದ ಬರುತ್ತಿದ್ದ ಲಾರಿಗೆ ಜಾಗ ಮಾಡಿಕೊಡಲು ಪ್ರಯತ್ನಿಸಿದ್ದರು. ಆಗ ಬಸ್ ನಿಯಂತ್ರಣ ತಪ್ಪಿ ಸಣ್ಣ ಸೇತುವೆಯಿಂದ ಜಲ್ಲೇರು ನದಿಗೆ ಉರುಳಿ ಬಿದ್ದಿದೆ. ‘ಬಸ್ ಸೇತುವೆಯ ಕಂಬಿಗಳಿಗೆ ಅಪ್ಪಳಿಸಿ ಬಳಿಕ ನದಿಗೆ ಬಿದ್ದಿದೆ. ಈವರೆಗೂ ನಾವು ಎಂಟು ಮೃತದೇಹಗಳನ್ನು ಹೊರ ತೆಗೆದಿದ್ದೇವೆ. ಮೃತರಲ್ಲಿ ಐವರು ಮಹಿಳಾ ಪ್ರಯಾಣಿಕರು ಇದ್ದಾರೆ’ ಎಂದು ರಾಹುಲ್ ದೇವ್ ಹೇಳಿದ್ದಾರೆ.
ಸ್ಥಳೀಯ ಜನರು ಮತ್ತು ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ದೋಣಿಗಳ ಸಹಾಯದಿಂದ ಸ್ಥಳೀಯರು ಕೆಲವರನ್ನು ರಕ್ಷಿಸಿದ್ದಾರೆ. ಗಾಯಾಳುಗಳನ್ನು ಜಂಗರೆಡ್ಡಿಗುಡೆಂ ಪ್ರದೇಶದ ಆಸ್ಪತ್ರೆಗೆ ಸಾಗಿಸಲಾಗಿದೆ. ನಾಪತ್ತೆಯಾಗಿರುವವರಿಗಾಗಿ ಹುಡುಕಾಟ ನಡೆಯುತ್ತಿದೆ.