Karnataka news paper

‘ಸಮಾನತೆಯ ಪ್ರತಿಮೆ’ ಉದ್ಘಾಟಿಸಿದ ಪ್ರಧಾನಿ ಮೋದಿ: ರಾಮಾನುಜಾಚಾರ್ಯರ ಪ್ರತಿಮೆಯ ವಿಶೇಷತೆಗಳೇನು?


ಹೈದರಾಬಾದ್: ಜಗತ್ತಿನ ಎರಡನೇ ಅತಿ ದೊಡ್ಡ ಪ್ರತಿಮೆಯಾದ 216 ಅಡಿ ಎತ್ತರದ ಶ್ರೀ ರಾಮಾನುಜಾಚಾರ್ಯರ ‘ಸಮಾನತೆಯ ಪ್ರತಿಮೆ‘ಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ಶನಿವಾರ ಲೋಕಾರ್ಪಣೆ ಮಾಡಿದರು. 11ನೇ ಶತಮಾನದ ಹಿಂದೂ ಭಕ್ತಿ ಸಂತ ರಾಮಾನುಜಾಚಾರ್ಯರ ಬೃಹತ್ ಪ್ರತಿಮೆಯನ್ನು ಶಂಶಾಬಾದ್‌ನಲ್ಲಿ ಸ್ಥಾಪಿಸಲಾಗಿದೆ.

ಪ್ರಧಾನಿ ಮೋದಿ, ಸಮಾನತೆಯ ಪ್ರತಿಮೆಗೆ ಪೂಜೆ ಸಲ್ಲಿಸಿ, ಶ್ರೀ ರಾಮಾನುಜಾಚಾರ್ಯರಿಗೆ ವಂದನೆ ಸಲ್ಲಿಸಿದ ಬಳಿಕ ಅದರ ಅನಾವರಣ ಕಾರ್ಯ ನೆರವೇರಿಸಿದರು. ಅದಕ್ಕೂ ಮುನ್ನ ಅವರು ಶಂಶಾಬಾದ್‌ನಲ್ಲಿನ ಯಾಗ್ಯಶಾಲಾದಲ್ಲಿ ರುದ್ರಾಭಿಷೇಕ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡರು.
ರಾಮಾನುಜರ 216 ಅಡಿ ವಿಗ್ರಹ

ಪ್ರತಿಮೆ ಅನಾವರಣದ ಬಳಿಕ ಶ್ರೀ ರಾಮಾನುಜಾಚಾರ್ಯರ ಜೀವನ ಪಯಣ ಮತ್ತು ಬೋಧನೆಗಳನ್ನು ಬಿಂಬಿಸುವ 3ಡಿ ಪ್ರಸ್ತುತಿ ನಡೆಯಿತು. ‘ಸಮಾನತೆಯ ಪ್ರತಿಮೆ’ ಸುತ್ತಲೂ ಸಾಂಕೇತಿಕ 108 ದಿವ್ಯ ದೇಸಂಗಳ ಮರು ಸೃಷ್ಟಿಯನ್ನು ಪ್ರಧಾನಿ ವೀಕ್ಷಿಸಿದರು. ‘ರಾಮಾನುಜಾಚಾರ್ಯ ಅವರ ಪ್ರತಿಮೆಯು ಅವರ ಜ್ಞಾನ ಮತ್ತು ಆಲೋಚನೆಗಳ ಸಂಕೇತವಾಗಿದೆ. ಸಮಾನತೆಯ ಪ್ರತಿಮೆಯು ಯುವಜನರಲ್ಲಿ ಉತ್ತೇಜನ ನೀಡಲಿದೆ’ ಎಂದು ಮೋದಿ ಹೇಳಿದರು.

ಪ್ರತಿಮೆಯ ವಿಶೇಷತೆ
ಭಕ್ತಿ ಸಂತ ಶ್ರೀ ರಾಮಾನುಜಾಚಾರ್ಯ ಅವರ 216 ಅಡಿ ಎತ್ತರದ ಪ್ರತಿಮೆಯನ್ನು ‘ಪಂಚಲೋಹ’ದಿಂದ ಮಾಡಲಾಗಿದೆ. ಅಂದರೆ, ಚಿನ್ನ, ಬೆಳ್ಳಿ, ಕಂಚು, ಹಿತ್ತಾಳೆ ಹಾಗೂ ಸತುವಿನಿಂದ ಮಾಡಲಾಗಿದೆ. ಇದು ಜಗತ್ತಿನಲ್ಲಿ ಕುಳಿತ ಸ್ಥಿತಿಯಲ್ಲಿರುವ ಜಗತ್ತಿನ ಅತ್ಯಂತ ಎತ್ತರದ ಪ್ರತಿಮೆಗಳಲ್ಲಿ ಒಂದಾಗಿದೆ. ಈ ಪ್ರತಿಮೆಯನ್ನು ‘ಭದ್ರ ವೇದಿ’ ಎಂಬ 54 ಅಡಿ ಎತ್ತರದ ಬೃಹತ್ ಬುನಾದಿಯ ಕಟ್ಟಡದ ಮೇಲೆ ನಿರ್ಮಿಸಲಾಗಿದೆ. ಇದರ ಆವರಣಗಳಲ್ಲಿ ವೇದಿಕ್ ಡಿಜಿಟಲ್ ಲೈಬ್ರರಿ ಮತ್ತು ಸಂಶೋಧನಾ ಕೇಂದ್ರ, ಭಾರತೀಯ ಪುರಾತನ ಗ್ರಂಥಗಳು, ಚಿತ್ರಮಂದಿರ, ಶ್ರೀ ರಾಮಾನುಜಾಚಾರ್ಯರ ಅನೇಕ ಕಾರ್ಯಗಳನ್ನು ವಿವರಿಸುವ ಶೈಕ್ಷಣಿಕ ಗ್ಯಾಲರಿಗಳು ಇವೆ.
ಪ್ರಧಾನಿ ಮೋದಿ ಸ್ವಾಗತಕ್ಕೆ ತೆರಳದ ತೆಲಂಗಾಣ ಸಿಎಂ ಕೆಸಿಆರ್: ಶಿಷ್ಟಾಚಾರ ಮುರಿದಿದ್ದಕ್ಕೆ ಬಿಜೆಪಿ ವಾಗ್ದಾಳಿ

ಹೈದರಾಬಾದ್‌ನ ಶಂಶಾಬಾದ್‌ನ ಮುಚಿಂಟಲ್‌ನಲ್ಲಿರುವ ಶ್ರೀ ರಾಮಾನುಜಾಚಾರ್ಯ ಆಶ್ರಮದಲ್ಲಿನ ಶ್ರೀ ಚಿನ್ನ ಜೀಯರ್ ಸ್ವಾಮಿ ಅವರು ಈ ಪ್ರತಿಮೆಯ ಪರಿಕಲ್ಪನೆ ಮಾಡಿದ್ದರು. ಶ್ರೀ ರಾಮಾನುಜಾಚಾರ್ಯರ 1,000ನೇ ಜನ್ಮದಿನದ 12 ದಿನಗಳ ಸಂಭ್ರಮಾಚರಣೆ ಭಾಗವಾಗಿ ಪ್ರತಿಮೆ ಅನಾವರಣ ಮಾಡಲಾಗಿದೆ.

ಹವಾಮಾನ ಬದಲಾವಣೆ ಕೇಂದ್ರ ಉದ್ಘಾಟನೆ
ಹೈದರಾಬಾದ್‌ನ ಪತಂಚೆರುದಲ್ಲಿ ಅಂತಾರಾಷ್ಟ್ರೀಯ ಕಾರ್ಪ್ಸ್ ರೀಸರ್ಚ್ ಇನ್‌ಸ್ಟಿಟ್ಯೂಷನ್ ಆಫ್ ಸೆಮಿ- ಆರಿಡ್ ಟ್ರಾಪಿಕ್ಸ್ (ICRISAT)ನ 50ನೇ ವರ್ಷದ ಸಂಭ್ರಮಾಚರಣೆಯಲ್ಲಿ ಪ್ರಧಾನಿ ಭಾಗವಹಿಸಿದರು. ಐಸಿಆರ್‌ಐಎಸ್‌ಎಟಿಯ ಗಿಡಗಳ ರಕ್ಷಣೆ ಹಾಗೂ ರಾಪಿಡ್ ಜನರೇಷನ್ ಅಡ್ವಾನ್ಸ್‌ಮೆಂಟ್ ಫೆಸಿಲಿಟಿಯ ಹವಾಮಾನ ಬದಲಾವಣೆ ಸಂಶೋಧನಾ ಸೌಲಭ್ಯಕ್ಕೆ ಪ್ರಧಾನಿ ಚಾಲನೆ ನೀಡಿದರು.

ramanujacharaya 1

‘ಐಸಿಆರ್‌ಐಎಸ್‌ಎಟಿಯ ಹವಾಮಾನ ಬದಲಾವಣೆ ಸಂಶೋಧನಾ ಸೌಲಭ್ಯವು ಹವಾಮಾನ ವೈಪರೀತ್ಯವನ್ನು ನಿಭಾಯಿಸಲು ಕೃಷಿ ವಲಯಕ್ಕೆ ನೆರವಾಗಲಿದೆ. ಹವಾಮಾನ ವೈಪರೀತ್ಯವು ದೇಶದ ರೈತರಲ್ಲಿ ಶೇ 80- 85ರಷ್ಟು ಪ್ರಮಾಣದಲ್ಲಿ ಇರುವ ಸಣ್ಣ ರೈತರಿಗೆ ಭಾರಿ ಹೊಡೆತ ನೀಡುತ್ತದೆ’ ಎಂದು ಅವರು ಹೇಳಿದರು.

‘ನಾವು ನೈಸರ್ಗಿಕ ಕೃಷಿ ಮತ್ತು ಡಿಜಿಟಲ್ ಕೃಷಿಯ ಮೇಲೆ ಗಮನ ಹರಿಸುತ್ತಿದ್ದೇವೆ. ಕೃಷಿ ವಲಯದಲ್ಲಿನ ಅಧಿಕ ಮತ್ತು ಸಮಗ್ರ ಬೆಳವಣಿಗೆಗೆ ಆದ್ಯತೆ ನೀಡಿದ್ದೇವೆ. ಆಹಾರ ಭದ್ರತೆಯ ಜತೆಗೆ ನಾವು ಪೌಷ್ಟಿಕತೆಯ ಭದ್ರತೆಯ ಬಗ್ಗೆ ಕೂಡ ಗಮನ ಹರಿಸುತ್ತಿದ್ದೇವೆ’ ಎಂದು ತಿಳಿಸಿದರು.

‘ಈ ವರ್ಷ ಭಾರತವು ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ವನ್ನು ಆಚರಿಸುತ್ತಿದೆ ಮತ್ತು ಐಸಿಆರ್‌ಐಎಸ್‌ಎಟಿಗೆ 50 ವರ್ಷ ತುಂಬಿದೆ. ಈ ಎರಡೂ ಸಂದರ್ಭಗಳು ನಮಗೆ ಮುಂದಿನ 25 ವರ್ಷಗಳ ನಿರ್ಣಯಗಳನ್ನು ಕೈಗೊಳ್ಳಲು ಸ್ಫೂರ್ತಿ ಮತ್ತು ಅವಕಾಶಗಳನ್ನು ನೀಡುತ್ತಿವೆ’ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಹೇಳಿದರು.



Read more

[wpas_products keywords=”deal of the day sale today offer all”]