Karnataka news paper

ಸಂಡೂರು ‌ತಹಶೀಲ್ದಾರ್ ಅಮಾನತಿಗೆ ಶಾಸಕ ತುಕಾರಾಂ ಪಟ್ಟು; ಸದನದಲ್ಲಿ ಕಾಂಗ್ರೆಸ್ ಪ್ರತಿಭಟನೆ


ಹೈಲೈಟ್ಸ್‌:

  • ಸಂಡೂರು ತಹಶೀಲ್ದಾರ್‌ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ ಶಾಸಕ ಈ ತುಕಾರಾಂ
  • ತಹಶೀಲ್ದಾರ್‌ ರಶ್ಮಿ ಅಮಾನತಿಗೆ ಆಗ್ರಹಿಸಿ ಸದನದ ಬಾವಿಗಿಳಿದು ಕಾಂಗ್ರೆಸ್‌ ಪ್ರತಿಭಟನೆ
  • ವರ್ಗಾವಣೆ ಶಿಕ್ಷೆಯಲ್ಲ, ಅಮಾನತು ಮಾಡಬೇಕೆಂದು ಸಿದ್ದರಾಮಯ್‌ ಆಗ್ರಹ

ಬೆಳಗಾವಿ: ಶಾಸಕ ತುಕಾರಾಂ ಅವರಿಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ಸಂಡೂರು ತಾಲೂಕಿನ ತಹಶೀಲ್ದಾರ್ ರಶ್ಮಿ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿತು.

ಸಂಡೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ತುಕಾರಾಂ ಅವರು ಈ ಬಗ್ಗೆ ಸದನದಲ್ಲಿ ಹಕ್ಕುಚ್ಯುತಿ ಪ್ರಸ್ತಾಪ ಮಂಡನೆ ಮಾಡಿದರು. ತಹಶೀಲ್ದಾರ್ ಕಾಲೇಜಿನಲ್ಲಿ ಪಾರ್ಟಿ ಮಾಡುತ್ತಾರೆ. ಕರ್ತವ್ಯ ಲೋಪ ಹಾಗೂ ಭ್ರಷ್ಟಾಚಾರದ ಆರೋಪ ಅವರ ಮೇಲಿದೆ. ತಹಶೀಲ್ದಾರರು ಹಳ್ಳಿಗಳಲ್ಲಿ ಕೋಲು ಹಿಡಿದು ಗೂಂಡಾ ವರ್ತನೆ ಮಾಡುತ್ತಿದ್ದಾರೆ. ವಾಲ್ಮೀಕಿ ಜಯಂತಿ ದಿನ ಕಾರ್ಯಕ್ರಮದ ಆಹ್ವಾನ ಪತ್ರದಲ್ಲಿ ನನ್ನ ಹೆಸರು ಹಾಕಿಲ್ಲ. ಈ ಮೂಲಕ ಅವಮಾನ ಮಾಡಿದ್ದಾರೆ ಎಂದು ತುಕಾರಾಂ ಸದನದ ಗಮನಕ್ಕೆ ತಂದರು.

ಭ್ರಷ್ಟಾಚಾರದ ಆರೋಪದ ಬಗ್ಗೆ ಕೇಳಲು ಅವರ ಕಚೇರಿಗೆ ಹೋದಾಗ ಅಗೌರವವಾಗಿ ನಡೆಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ತುಕಾರಾಂ ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್ ಶಾಸಕರು,ತಹಶೀಲ್ದಾರರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ತುಕಾರಾಂ ಪರವಾಗಿ ಮಾತನಾಡಿದ ಸಿದ್ದರಾಮಯ್ಯ, ಇದು ಬಹಳ ಗಂಭೀರವಾದ ವಿಚಾರವಾಗಿದೆ. ತುಕಾರಾಂ ಪತ್ರದ ಮೇಲೆ ಕ್ರಮ ಕೈಗೊಳ್ಳಲು ಮಾಧುಸ್ವಾಮಿ ಸೂಚಿಸಿದ್ದಾರೆ. ಇದಾದ ಮೇಲೂ ಶಾಸಕರಿಗೆ ತಹಶಿಲ್ದಾರರರು ಅವಮಾನ ಮಾಡುವುದು ನಿಂತಿಲ್ಲ. ಸಿಎಂ ಆದೇಶ ಇದ್ದರೂ ಇಲಾಖೆ ಅಧಿಕಾರಿಗಳು ತಹಶೀಲ್ದಾರರನ್ನು ವರ್ಗಾವಣೆ ಮಾಡಿಲ್ಲ. ಈ ವಿಚಾರವಾಗಿ ತೇಲಿಸುವ ಉತ್ತರ ಕೊಡಬಾರದು. ಅಧಿಕಾರಿಗಳು ನಿಮ್ಮ ಜಿಲ್ಲೆಯಲ್ಲಿ ಹೀಗೆ ಮಾತನಾಡಿದರೆ ಸುಮ್ಮನಿರುತ್ತಾರಾ? ಎಂದು ಪ್ರಶ್ನಿಸಿದರು.

ಹೋಗ್ರೀ ನಮಗೆ ಆಡಳಿತ ನಡೆಸುವುದು ಗೊತ್ತಿದೆ ಎಂದರೆ ಸುಮ್ಮನಿರಬೇಕಾ? ಕೂಡಲೇ ತಹಶೀಲ್ದಾರರನ್ನು ಅಮಾನತು ಮಾಡಿ‌ ಶಿಸ್ತು ಕ್ರಮ ಕೈಗೊಳ್ಳಬೇಕು.ಸರ್ಕಾರ ಇದನ್ನು ಪ್ರತಿಷ್ಠೆಯ ವಿಚಾರವಾಗಿ ನೋಡಬಾರದು ಎಂದರು. ಇದಕ್ಕೆ ಉತ್ತರಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಸರ್ಕಾರ‌‌ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಕೂಡಲೇ ವರ್ಗಾವಣೆ ಮಾಡಲು ಆದೇಶ ಮಾಡುತ್ತೇನೆ ಹಾಗೂ ತನಿಖೆಗೂ ಸೂಚನೆ ಕೊಡುತ್ತೇನೆ ಎಂದರು.

ಅಶಿಸ್ತು ಸಹಿಸುವುದಿಲ್ಲ, ಅನ್ನದಾನಿ ವಿರುದ್ಧ ಗರಂ ಆದ ಸ್ಪೀಕರ್!
ಆದರೆ, ಇದಕ್ಕೆ ಒಪ್ಪದ ಸಿದ್ದರಾಮಯ್ಯ, ವರ್ಗಾವಣೆ ಮಾಡುವುದು ಶಿಕ್ಷೆ ಅಲ್ಲ. ತಹಶೀಲ್ದಾರ್‌ರನ್ನು ಅಮಾನತು ಮಾಡಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ಉತ್ತರಿಸಿದ ಸಿಎಂ, ಏನು ತಪ್ಪು ಆಗಿದೆ ಎಂದು ತನಿಖೆ ಮಾಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ಕೊಟ್ಟರು.

ಇದೇ ವೇಳೆ ಹಕ್ಕುಚ್ಯುತಿ ಸಮಿತಿಗೆ ನೀಡಲು ಸ್ಪೀಕರ್ ಕಾಗೇರಿ ಮುಂದಾದಾಗ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿಎಂ, ಎರಡೆರಡು ತನಿಖೆ ಸಾಧ್ಯವಿಲ್ಲ. ವರ್ಗಾವಣೆ ಹಾಗೂ ತನಿಖೆಗೆ ಸೂಚಿಸುತ್ತೇವೆ ಅಥವಾ ಹಕ್ಕುಚ್ಯುತಿ ಸಮಿತಿಗೆ ಕೊಡಿ ವರದಿ ಬಂದ ಬಳಿಕ ಕ್ರಮ ಕೈಗೊಳ್ಳುತ್ತೇವೆ. ಹಕ್ಕುಚ್ಯುತಿ ಸಮಿತಿಗೆ ಕೊಟ್ಟರೆ ವರ್ಗಾವಣೆ, ತನಿಖೆಗೆ ಕೊಡಲು ಸಾಧ್ಯವಿಲ್ಲ.‌ಎರಡು ಕ್ರಮ ಏಕಕಾಲದಲ್ಲಿ ಸಾಧ್ಯವಿಲ್ಲ ಎಂದರು.

ಅಧಿವೇಶನದಲ್ಲಿ ಶಾಸಕರ ಗೈರು, ಸ್ಪೀಕರ್ ಕಾಗೇರಿ ತೀವ್ರ ಅಸಮಾಧಾನ
ಈ ವೇಳೆ ಮಧ್ಯಪ್ರವೇಶ ಮಾಡಿದ ಸಿದ್ದರಾಮಯ್ಯ, ಹಲವು ಬಾರಿ ಕಾನೂನು ಸಚಿವರ ಗಮನಕ್ಕೆ ತಂದಿದ್ದಾರೆ. ಇಷ್ಟೆಲ್ಲಾ ಆದರೂ ವರ್ಗಾವಣೆ ಸರಿಯಾದ ಕ್ರಮ ಅಲ್ಲ. ಅಮಾನತು ಮಾಡಿ ಕ್ರಮ ಕೈಗೊಳ್ಳಲಿ. ಹಿರಿಯ ಶಾಸಕರಿಗೆ ಅವಮಾನ ಆದರೆ ಸಹಿಸಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರದ ನಡೆಯನ್ನು ವಿರೋಧಿಸಿ ಬಾವಿಗಿಳಿದು ಕಾಂಗ್ರೆಸ್ ಶಾಸಕರ ಪ್ರತಿಭಟನೆ ನಡೆಸಿದರು. ಇದರಿಂದ ಸದನವನ್ನು ಸ್ಪೀಕರ್ ಹತ್ತು ನಿಮಿಷಗಳ ಕಾಲ ಮುಂದೂಡಿದರು.

ಬೆಳಗಾವಿ ಅಧಿವೇಶನ: ಸದನದಲ್ಲಿ ಸರ್ಕಾರವನ್ನು ಕಟ್ಟಿಹಾಕಲು ಕಾಂಗ್ರೆಸ್ ಬಳಿ ಇವೆ ಹಲವು ಅಸ್ತ್ರಗಳು!



Read more