Karnataka news paper

ಉಡುಪಿ: ಹಿಜಾಬ್, ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳಿಗೆ ಬೈಂದೂರು ಕಾಲೇಜಿನಲ್ಲಿ ಪ್ರವೇಶ ನಿರಾಕರಣೆ


The New Indian Express

ಉಡುಪಿ: ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಹಿಜಾಬ್ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವಂತೆಯೇ, ಉಡುಪಿ ಜಿಲ್ಲೆಯ ಮತ್ತೊಂದು ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿಗಳಿಗೆ ಶುಕ್ರವಾರ ಪ್ರವೇಶ ನಿರಾಕರಿಸಲಾಗಿದೆ. ಉಡುಪಿ ಜಿಲ್ಲೆಯ ಬೈಂದೂರಿನ ಪಿಯು ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದ 12 ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಲಾಗಿದೆ. 

ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶ ನೀಡಿದ್ದರಿಂದ 150 ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಹಿಜಾಬ್, ಕೇಸರಿ ಶಾಲು ಧರಿಸಿ ಬರುವವರಿಗೆ ಕಾಲೇಜ್ ಆಡಳಿತ ಮಂಡಳಿ ಪ್ರವೇಶವನ್ನು ನಿರಾಕರಿಸಲು ನಿರ್ಧರಿಸಿತು. ಹಿಜಾಬ್ ಅಥವಾ ಕೇಸರಿ ಶಾಲಿನಂತಹ ಸಾಂಪ್ರದಾಯಿಕ ಉಡುಪು ಧರಿಸದೆ, ಸಮವಸ್ತ್ರದಲ್ಲಿ ಬರುವಂತೆ ವಿದ್ಯಾರ್ಥಿಗಳಿಗೆ ಕಾಲೇಜ್ ಪ್ರಿನ್ಸಿಪಾಲ್ ಎಂ.ಪಿ. ನಾಯಕ್ ಹೇಳಿದರು. 

ಇದನ್ನೂ ಓದಿ: ಕುಂದಾಪುರ: ಮೂರನೇ ದಿನವೂ ಹಿಜಾಬ್ ಧರಿಸಿ ಬಂದವರಿಗೆ ಕಾಲೇಜಿಗೆ ಪ್ರವೇಶ ನಿರಾಕರಣೆ! ಪೋಷಕರೊಂದಿಗೆ ಪ್ರತಿಭಟನೆ

ಈ ಮಧ್ಯೆ ಉಡುಪಿಯ ಸರ್ಕಾರಿ ಬಾಲಕಿಯರ ಕಾಲೇಜಿನ ಆರು ವಿದ್ಯಾರ್ಥಿಗಳು ಕಾಲೇಜ್ ಕ್ಯಾಂಪಸ್ ಹೊರಗಡೆ ಶುಕ್ರವಾರವೂ ಪ್ರತಿಭಟನೆ ಮುಂದುವರೆಸಿದರು. ಕುಂದಾಪುರದ ಸರ್ಕಾರಿ ಪಿಯು ಕಾಲೇಜ್ ಮತ್ತು ಭಂಡರ್ಕರ್ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದವರಿಗೆ ಇಂದು ಕೂಡಾ ತರಗತಿಗೆ ಅವಕಾಶ ನೀಡಲಿಲ್ಲ. ಕೆಲ ವಿದ್ಯಾರ್ಥಿಗಳು ರಾಮನ ಪರ ಘೋಷಣೆ ಕೂಗಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು. 

ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭವಾದ ವಿವಾದ ಇದೀಗ ಜಿಲ್ಲೆಯ ಇತರ ಕಾಲೇಜಿನಲ್ಲೂ ವ್ಯಾಪಿಸುತ್ತಿದೆ. ಹಿಜಾಬ್ ಧರಿಸಿ ಬಂದ ಕುಂದಾಪುರ ಕಾಲೇಜಿನ ವಿದ್ಯಾರ್ಥಿಗಳಿಗೆ ಏಕೆ ಹಠಾತ್ತನೇ ಪ್ರವೇಶ ನಿರಾಕರಿಸಲಾಯಿತು ಎಂದು ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಶ್ನಿಸಿದರು. 

ಎಡ ಸಂಘಟನೆಗಳು ಧ್ರುವೀಕರಣದ ಲಾಭ ಪಡೆಯಲು ಹಿಜಾಬ್ ವಿವಾದ ಸೃಷ್ಟಿಸಿದ್ದಾರೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಕರಾವಳಿ ಭಾಗದ ಶಿಕ್ಷಣ ಸಂಸ್ಥೆಗಳ ವರ್ಚಸ್ಸಿಗೆ ಧಕ್ಕೆ ತರುವ ಕುತಂತ್ರವಾಗಿದೆ ಎಂದು ಬಿಜೆಪಿ ಹಿಂದುಳಿದ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಉಡುಪಿ ಸರ್ಕಾರಿ ಪಿಯು ಕಾಲೇಜ್ ಮಹಿಳಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಯಶ್ ಪಾಲ್ ಸುವರ್ಣ ಹೇಳಿದರು. 



Read more

[wpas_products keywords=”deal of the day”]