ಬೆಳಗಾವಿ: ನಮ್ಮನ್ನೆಲ್ಲಾ ನಿರ್ಲಕ್ಷ್ಯ ಮಾಡಿದ್ದಾರೆ, ಅದಕ್ಕೆ ವಿಧಾನ ಪರಿಷತ್ ಚುನಾವಣಾ ಫಲಿತಾಂಶದಲ್ಲಿ ಹಿನ್ನಡೆ ಉಂಟಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ವಿಜಯಪುರದಲ್ಲಿ ಪರಿಷತ್ ಚುನಾವಣೆಯಲ್ಲಿ ಎರಡನೇ ಪ್ರಾಶಸ್ತ್ಯದಲ್ಲಿ ಬಿಜೆಪಿ ಗೆಲುವು ಹಿನ್ನಡೆಯಲ್ವಾ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಯಾಕೆ ಹಿನ್ನಡೆ ಆಗ್ತಿದೆ ಅಂದ್ರೆ ನಮ್ನನ್ನೆಲ್ಲ ನಿರ್ಲಕ್ಷ್ಯ ಮಾಡಿದ್ದಾರೆ ಎಂದರು. ಸಿಂಧಗಿಯಲ್ಲಿ ಜವಾಬ್ದಾರಿ ಕೊಟ್ಟಿದ್ದರು. 34 ಸಾವಿರ ಓಟ್ನಲ್ಲಿ ಗೆಲ್ಲಿಸಿದ್ದೆ. ಈ ಚುನಾವಣೆಗೆ ಪ್ರಚಾರಕ್ಕೆ ಕರೆಯಲಿಲ್ಲ. ಬಿಜೆಪಿಗೆ ಓಟ್ ಹಾಕಿ ಎಂದು ಹೇಳಿ ಮನೆಯಲ್ಲಿ ಕೂತೆ. ಯಾವುದೋ ಯಾತ್ರೆ ತಗೆದುಕೊಂಡು ಯಡಿಯೂರಪ್ಪನವರು ಬಂದಿದ್ದರು. ಆಗ್ಲೂ ಕರೆಯಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಿದ್ದರಾಮಯ್ಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸಹೋದರ ಸಿಎಂ ಬಸವರಾಜ ಬೊಮ್ಮಾಯಿ ಪದೇ ಪದೇ ಯಡಿಯೂರಪ್ಪ ಭೇಟಿಯಾಗುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಎಲ್ಲಾ ನವಗ್ರಹಗಳು ಇರುತ್ತೆ. ಅದಕ್ಕೆ ಶಾಂತಿ ಮಾಡಬೇಕಾಗುತ್ತೆ. ರಾಹು ಕೇತು ಎರಡು ದೊಡ್ಡ ಗ್ರಹಗಳು. ಈ ಗ್ರಹಗಳಿಂದ ಭವಿಷ್ಯದಲ್ಲಿ ಸಮಸ್ಯೆ ಆಗಬಾರದು. ಇದಕ್ಕಾಗಿ ಶಾಂತಿ ಮಾಡಬೇಕಿದೆ ಎಂದರು. ಎಲ್ಲೆಲ್ಲಿ ಸೋಲಾಗಿದೆ ಇದರ ಬಗ್ಗೆ ಅತ್ಮಾವಲೋಕನವನ್ನು ಮಾಡಿಕೊಳ್ಳಬೇಕಿದೆ. ರಾಜ್ಯಾಧ್ಯಕ್ಷರು ಯಾಕೆ ಸೋಲಾಯ್ತು ಅನ್ನುವುದರ ಬಗ್ಗೆ ಚರ್ಚೆ ಮಾಡಬೇಕು. ಎಲ್ಲಾ ನಾಯಕರನ್ನ ಕರೆದು ಚರ್ಚೆ ಮಾಡಬೇಕು ಎಂದು ಹೇಳಿದರು.
ಇನ್ನು ಯಾರೆಲ್ಲ ನಾಯಕರನ್ನ ದೂರ ತಳ್ಳಿದ್ದಾರೆ ಅವರನ್ನ ಕರೆಸಿ ಚರ್ಚೆ ಮಾಡಬೇಕು ಎಂದ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಸಿಎಂ ಬೊಮ್ಮಾಯಿಗೆ ಯಾವ ಶಾಂತಿ ಮಾಡಿಸಿದ್ರೆ ಒಳ್ಳೆಯದು ಎಂಬ ಪ್ರಶ್ನೆಗೆ, ಮೊನ್ನೆ ಕಾಶಿಗೆ ಹೋಗಿ ವಿಶ್ವನಾಥನ ದರ್ಶನ ಮಾಡಿ ಬಂದಿದ್ದಾರೆ. ಈಗ ರಾಹು ಕೇತು ಶಾಂತ ಆಗುತ್ತೆ ಎಂದರು.