ವಿಶ್ವದಲ್ಲಿ ಕೊರೊನಾಗೆ ಐದು ಲಕ್ಷಕ್ಕೂ ಹೆಚ್ಚು ಜನರು ಬಲಿಯಾಗಿರುವ ಮೂರನೇ ರಾಷ್ಟ್ರ ಭಾರತವಾಗಿದೆ. ಅಮೆರಿಕ ಹಾಗೂ ಬ್ರೆಜಿಲ್‌ನಲ್ಲಿ ಕೆಲ ತಿಂಗಳ ಮುನ್ನವೇ ಸಾವಿನ ಗಡಿ ಐದು ಲಕ್ಷ ದಾಟಿಯಾಗಿದೆ. ಅಮೆರಿಕದಲ್ಲಿ 9.2 ಲಕ್ಷ ಜನರು ಕೊರೊನಾ ಸೋಂಕಿನಿಂದ ಮೃತರಾಗಿದ್ದಾರೆ. ಬ್ರೆಜಿಲ್‌ನಲ್ಲಿ 6.3 ಲಕ್ಷ ಮಂದಿ ಬಲಿಯಾಗಿದ್ದಾರೆ.
ಸದ್ಯ ಭಾರತದಲ್ಲಿ ಕೊರೊನಾ 3ನೇ ಅಲೆಯು ಅಂತ್ಯದ ಭಾಗದಲ್ಲಿದೆ. ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ಸುಮಾರು 34 ರಾಜ್ಯಗಳಲ್ಲಿ ಕೊರೊನಾ ಮೂರನೇ ಅಲೆಯು ಉತ್ತುಂಗ ತಲುಪಿದ ಬಳಿಕ ಇಳಿಮುಖವಾಗುತ್ತಿದೆ. ಕೇರಳ ಮತ್ತು ಮಿಜೋರಾಂನಲ್ಲಿ ಮಾತ್ರ ಕೊರೊನಾ ಅಟ್ಟಹಾಸ ಮುಂದುವರಿದಿದೆ. ಶುಕ್ರವಾರ ಒಂದೇ ದಿನ ಕೇರಳದಲ್ಲಿ 601 ಸೋಂಕಿತರು ಮೃತಪಟ್ಟಿದ್ದಾರೆ.
34 ಲಕ್ಷ ಮಕ್ಕಳಿಗೆ ಲಸಿಕೆ
15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ನಿರೋಧಕ ಲಸಿಕೆ ನೀಡುವ ಅಭಿಯಾನದ ಅಡಿಯಲ್ಲಿ 34 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಲಸಿಕೆಯ ಎರಡನೇ ಡೋಸ್ ನೀಡಲಾಗಿದೆ. ಕೇವಲ ಒಂದೇ ತಿಂಗಳಲ್ಲಿ ದೇಶದ 65% ಮಕ್ಕಳು (15-18 ವಯಸ್ಸಿನವರು) ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಂಡಾವಿಯ ಶುಕ್ರವಾರ ತಿಳಿಸಿದ್ದಾರೆ. ಒಟ್ಟಾರೆಯಾಗಿ ದೇಶಾದ್ಯಂತ ಇದುವರೆಗೂ 168.47 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.
ಸಂತ್ರಸ್ತರಿಗೆ ಪರಿಹಾರ ವಿತರಣೆಗೆ ನೋಡಲ್ ಅಧಿಕಾರಿ ನೇಮಕ
ಕೊರೊನಾದಿಂದ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಪರಿಹಾರ ನೀಡಲು ಎಲ್ಲ ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರತ್ಯೇಕ ನೋಡಲ್ ಅಧಿಕಾರಿಯನ್ನು ನೇಮಕ ಮಾಡಬೇಕು ಎಂದು ಶುಕ್ರವಾರ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ರಾಜ್ಯ ಕಾನೂನು ಸೇವಾ ಆಯೋಗದ ಸದಸ್ಯ ಕಾರ್ಯದರ್ಶಿ (ಎಸ್‌ಎಲ್‌ಎಸ್‌ಎ) ಅವರ ಜತೆಗೆ ನೋಡಲ್ ಅಧಿಕಾರಿ ಸಮನ್ವಯ ಕಾಯ್ದುಕೊಳ್ಳಬೇಕು ಎಂದು ನ್ಯಾ. ಎಂ. ಆರ್. ಶಾ ಮತ್ತು ನ್ಯಾ. ಬಿ. ವಿ. ನಾಗರತ್ನ ಅವರಿದ್ದ ನ್ಯಾಯಪೀಠವು ಸೂಚಿಸಿದೆ. ಮುಂದಿನ ಒಂದು ವಾರದೊಳಗೆ ಕೊರೊನಾ ಸಂತ್ರಸ್ತರ ಪೂರ್ಣ ಹೆಸರು, ವಿಳಾಸ, ಮರಣ ಪ್ರಮಾಣಪತ್ರವನ್ನು ರಾಜ್ಯ ಸರಕಾರಗಳು ಆಯಾ ರಾಜ್ಯದ ಎಸ್‌ಎಲ್‌ಎಸ್‌ಎ ಅವರಿಗೆ ನೀಡಬೇಕು. ಅನಾಥರಿದ್ದರೆ, ಅವರ ಮಾಹಿತಿಯೂ ಸೇರಿಸಬೇಕು ಎಂದು ತಿಳಿಸಿದೆ. ಪರಿಹಾರ ವಿತರಣೆಗೆ ಅಗತ್ಯವಾದ ಎಲ್ಲ ಕೆಲಸಗಳನ್ನು 10 ದಿನಗಳ ಒಳಗೆ ರಾಜ್ಯ ಸರಕಾರಗಳು ಪೂರ್ಣಗೊಳಿಸಿ ಶೀಘ್ರವಾಗಿ ಸಂತ್ರಸ್ತರಿಗೆ ಪರಿಹಾರ ಧನವು ತಲುಪುವಂತೆ ನಿಗಾ ವಹಿಸಲು ಸರಕಾರಗಳಿಗೆ ಸೂಚಿಸಲಾಗಿದೆ.
Read more
[wpas_products keywords=”deal of the day sale today offer all”]