ಈ ಸಂಬಂಧ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿರುವ ಕಿರಣ್ ರಿಜಿಜು, ಈ ವಿಚಾರವನ್ನು 21ನೇ ಕಾನೂನು ಆಯೋಗವೇ ಕೈಗೆತ್ತಿಕೊಳ್ಳಬೇಕಿತ್ತು. ಆದ್ರೆ ಆಯೋಗದ ಅವಧಿ ಮುಕ್ತಾಯವಾದ ಕಾರಣ 22ನೇ ಕಾನೂನು ಆಯೋಗ ಏಕರೂಪ ನಾಗರಿಕ ಸಂಹಿತೆಯನ್ನು ಪರಿಶೀಲನೆ ನಡೆಸಲಿದೆ ಎಂದು ಹೇಳಿದ್ದಾರೆ.
ಏಕರೂಪ ನಾಗರಿಕ ಸಂಹಿತೆಯನ್ನು ಪರಿಶೀಲಿಸುವಂತೆ ಈ ಹಿಂದೆಯೇ ಕೇಂದ್ರ ಸರ್ಕಾರ ಕಾನೂನು ಆಯೋಗಕ್ಕೆ ಪ್ರಸ್ತಾವನೆ ರವಾನಿಸಿತ್ತು. ಆದ್ರೆ. 21ನೇ ಕಾನೂನು ಆಯೋಗದ ಅಧಿಕಾರಾವಧಿ 31-08-2018ಕ್ಕೆ ಮುಕ್ತಾಯವಾದ ಹಿನ್ನೆಲೆಯಲ್ಲಿ ನೂತನವಾಗಿ ರಚನೆಗೊಂಡ 22ನೇ ಕಾನೂನು ಆಯೋಗ ಪರಿಶೀಲನೆ ನಡೆಸಲಿದೆ.
ಏಕರೂಪ ನಾಗರಿಕ ಸಂಹಿತೆ ಜಾರಿ ವಿಚಾರ ಎಲ್ಲಿಯವರೆಗೆ ಬಂತು ಎಂಬುದರ ಕುರಿತಾಗಿ ಲೋಕಸಭೆಯಲ್ಲಿ ಡಿಸೆಂಬರ್ 1, 2021ರಂದು ಬಿಜೆಪಿ ಸಂಸದ ದುಬೆ ಅವರು ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಇದೀಗ ಕಾನೂನು ಸಚಿವರು ಉತ್ತರಿಸಿದ್ದಾರೆ.
ಸಂವಿಧಾನದ ಪರಿಚ್ಛೇದ 44ರ ಪ್ರಕಾರ, ರಾಜ್ಯ ಸರ್ಕಾರಗಳು ತನ್ನ ನಾಗರಿಕರಿಗೆ ಏಕರೂಪ ನಾಗರಿಕ ಸಂಹಿತೆ ಅನ್ವಯ ಆಗುವ ರೀತಿ ನೋಡಿಕೊಳ್ಳಬೇಕು ಎಂದೂ ಕಾನೂನು ಸಚಿವರು ಮಾಹಿತಿ ನೀಡಿದ್ದಾರೆ.
ಇತ್ತೀಚೆಗಷ್ಟೇ ಕೇಂದ್ರ ಸರ್ಕಾರವು ಏಕರೂಪ ನಾಗರಿಕ ಸಂಹಿತೆ ಸಂಬಂಧ ದಿಲ್ಲಿ ಹೈಕೋರ್ಟ್‌ಗೆ ಮಾಹಿತಿ ನೀಡಿತ್ತು. ಏಕರೂಪ ನಾಗರಿಕ ಸಂಹಿತೆ ಸಂಬಂದ 21ನೇ ಕಾನೂನು ಆಯೋಗವು ಸಲ್ಲಿಸಿರುವ ವರದಿಯನ್ನು ಪರಿಶೀಲಿಸಬೇಕಿದೆ ಎಂದು ತಿಳಿಸಿತ್ತು.
ಏನಿದು ಏಕರೂಪ ನಾಗರಿಕ ಸಂಹಿತೆ..?
ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಂದಲ್ಲಿ, ದೇಶದ ಎಲ್ಲ ರಾಜ್ಯಗಳಲ್ಲೂ ಎಲ್ಲ ನಾಗರಿಕರಿಗೂ ಒಂದೇ ಕಾನೂನು ಜಾರಿಗೆ ಬರಲಿದೆ. ಎಲ್ಲ ಧರ್ಮದವರಿಗೂ ಒಂದೇ ಕಾನೂನು ಜಾರಿಗೆ ಬರಲಿದೆ. ಮದುವೆ, ವಿಚ್ಛೇದನ, ದತ್ತು ಸ್ವೀಕಾರ, ಆಸ್ತಿ ಉತ್ತರಾಧಿಕಾರ ಕಾನೂನು ಸೇರಿದಂತೆ ಎಲ್ಲವೂ ಎಲ್ಲರಿಗೂ ಒಂದೇ ಕಾನೂನು ಆಗಲಿದೆ.
ಈ ಹಿನ್ನೆಲೆಯಲ್ಲಿ ದಿಲ್ಲಿ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದ ಕೇಂದ್ರ ಸರ್ಕಾರವು, ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಸಂಬಂಧ ತಾನು ಸಾಂವಿಧಾನಿಕ ಸಂಸ್ಥೆಗಳೂ ಸೇರಿದಂತೆ ಎಲ್ಲರ ಜೊತೆ ಚರ್ಚೆ ನಡೆಸಬೇಕಿದೆ ಎಂದು ತಿಳಿಸಿತ್ತು.
ಅಷ್ಟೇ ಅಲ್ಲ, ಏಕರೂಪ ನಾಗರಿಕ ಸಂಹಿತೆಯನ್ನು ಈ ಕೂಡಲೇ ಜಾರಿಗೆ ತರುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಇದು ಸೂಕ್ಷ್ಮ ವಿಚರ ಆದ ಕಾರಣ, ಈ ಸಂಬಂಧ ಸುದೀರ್ಘ ಅಧ್ಯಯನದ ಅಗತ್ಯತೆ ಇದೆ. ಧರ್ಮಾನುಸಾರ ಇರುವ ವೈಯಕ್ತಿಕ ಕಾನೂನುಗಳನ್ನು ಇನ್ನಷ್ಟು ಆಳವಾಗಿ ಅಧ್ಯಯನ ಮಾಡಬೇಕಿದೆ ಎಂದು ತಿಳಿಸಿತು.
ಈ ಸಂಬಂಧ ಜುಲೈ 9, 2021ರಂದು ತನ್ನ ಅಭಿಪ್ರಾಯ ಹೊರಹಾಕಿದ್ದ ದಿಲ್ಲಿ ಹೈಕೋರ್ಟ್, ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯ ಅಗತ್ಯತೆಯನ್ನು ಪ್ರತಿಪಾದಿಸಿತ್ತು. ಆಧುನಿಕ ಭಾರತದ ಯುವಕರು ತಮ್ಮ ಧರ್ಮದ ವೈಯಕ್ತಿಕ ಕಾನೂನುಗಳ ಜಂಜಾಟದಿಂದ ಹೊರಬಂದು ಜಾತಿ, ಧರ್ಮ ಬೇಧವಿಲ್ಲದೆ ಮದುವೆ ಸೇರಿದಂತೆ ಇನ್ನಿತರ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟಿತ್ತು.
Read more
[wpas_products keywords=”deal of the day sale today offer all”]