Karnataka news paper

ಬಳ್ಳಾರಿಯ 12 ವರ್ಷಗಳ ಹಿಂದಿನ ಕೊಲೆ ಕೇಸ್ ಇನ್ನೂ ಜೀವಂತ..! ಕೇಂದ್ರದ ಅಂಗಳಕ್ಕೆ ಪದ್ಮಾವತಿ ಪ್ರಕರಣ..!


ಮಾರುತಿ ಸುಣಗಾರ
ಬಳ್ಳಾರಿ:
ಜಿಲ್ಲೆಯಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ನಗರಸಭೆ ಸದಸ್ಯೆ ಜಿ. ಪದ್ಮಾವತಿ ಯಾದವ್‌ ಕೊಲೆ ಪ್ರಕರಣ ಸಂಭವಿಸಿ 12 ವರ್ಷಗಳಾದರೂ ಆರೋಪಿಗಳು ಪತ್ತೆಯಾಗಿಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂಬ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದ್ದರೆ, ಇನ್ನೊಂದೆಡೆ ದೂರುದಾರರು ಕೇಂದ್ರ ಸರಕಾರಕ್ಕೂ ಮನವಿ ಸಲ್ಲಿಸಲು ಮುಂದಾಗಿರುವುದು ಸಂಚಲನ ಮೂಡಿಸಿದೆ.

2010 ಫೆಬ್ರುವರಿ 04ರಂದು ಪದ್ಮಾವತಿ ಅವರ ಕೊಲೆಯಾಗಿತ್ತು. ಸದ್ಯ ಈ ಪ್ರಕರಣ ನಡೆದು 12 ವರ್ಷಗಳು ಕಳೆದಿದ್ದರೂ ಈವರೆಗೂ ಆರೋಪಿಗಳು ಪತ್ತೆಯಾಗಿಲ್ಲ. ಪ್ರಕರಣದ ತನಿಖೆ ಸಮರ್ಪಕವಾಗಿ ನಡೆಸಲು ಸಿಬಿಐಗೆ ವಹಿಸುವಂತೆ ಮೃತ ಪದ್ಮಾವತಿ ಯಾದವ್‌ ಅವರ ಸಹೋದರ ಸುಬ್ಬರಾಯುಡು, ಧಾರವಾಡ ಹೈಕೋಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಇದರೊಂದಿಗೆ 2020ರ ಡಿಸೆಂಬರ್ 01ರಂದು ಬೆಂಗಳೂರಿನ ಮುಖ್ಯಮಂತ್ರಿ ಕಚೇರಿ, ಗೃಹ ಇಲಾಖೆ ಕಾರ್ಯದರ್ಶಿ, ಗೃಹ ಸಚಿವರ ಕಚೇರಿಗೂ ತೆರಳಿ ಮನವಿ ಸಲ್ಲಿಸಿದ್ದಾರೆ. ಮನವಿಗೆ ಸ್ಪಂದಿಸಿರುವ ಸರಕಾರ, ಪ್ರಕರಣವನ್ನು ಸಿಬಿಐಗೆ ವಹಿಸುವ ಸಂಬಂಧ ಮಾಹಿತಿ ಸಲ್ಲಿಸುವಂತೆ ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚಿಸಿದೆ.

ಬಳ್ಳಾರಿ ನಗರಸಭೆ ಸದಸ್ಯೆ ಪದ್ಮಾವತಿ ಯಾದವ್‌ ಕೊಲೆ ಪ್ರಕರಣಕ್ಕೆ 12 ವರ್ಷಗಳ ನಂತರ ಮರುಜೀವ
ಮನವಿ ಸಲ್ಲಿಸಲು ಸಿದ್ಧತೆ: ದೂರುದಾರ ಸುಬ್ಬರಾಯುಡು ಅವರು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಕೇಂದ್ರ ಗೃಹ ಸಚಿವಾಲಯ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಮೂರ್ತಿಗಳಿಗೆ, ಸಿಬಿಐ ಕೇಂದ್ರ ಕಚೇರಿಗೆ ಮನವಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವು ಪಡೆಯಬಹುದು ಎಂಬ ಕುತೂಹಲ ಮನೆ ಮಾಡಿದೆ.

ಪದ್ಮಾವತಿ ಯಾದವ್‌ ಹಿನ್ನೆಲೆ: ಪದ್ಮಾವತಿ ಯಾದವ್‌ ಅವರು 1999ರಲ್ಲಿ ಬಳ್ಳಾರಿ ನಗರಸಭೆಗೆ 18ನೇ ವಾರ್ಡ್‌ನಿಂದ ಸ್ಪರ್ಧಿಸಿ, ಜಯ ಗಳಿಸಿದ್ದರು. 2001-03ರ ವರೆಗೆ ನಗರಸಭೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಬಳಿಕ 2007ರಲ್ಲಿ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ಬಳಿಕ 19ನೇ ವಾರ್ಡ್‌ನಿಂದ ಬಿಜೆಪಿಯಿಂದ ಸ್ಪರ್ಧಿಸಿ ಜಯ ಗಳಿಸಿದ್ದರು. 2010ರಲ್ಲಿ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು.

ಪರೇಶ್ ಮೇಸ್ತಾ ನಿಗೂಢ ಸಾವಿಗೆ ನಾಲ್ಕು ವರ್ಷ: ಇನ್ನೂ ಅಂತ್ಯ ಕಾಣದಾಗಿದೆ ಪ್ರಕರಣ..!
ಪ್ರಕರಣದ ಹಿನ್ನೆಲೆ: ಬಳ್ಳಾರಿ ನಗರದಲ್ಲಿ 2010ರ ಫೆಬ್ರುವರಿ 04ರಂದು ಪದ್ಮಾವತಿ ಅವರ ಕೊಲೆ ನಡೆದಿದ್ದು, ಫೆಬ್ರುವರಿ 05ರಂದು ಮರಣೋತ್ತರ ಪರೀಕ್ಷೆ ನಡೆಸಿ, ಫೆಬ್ರುವರಿ 06ರಂದು ಪ್ರಕರಣದ ತನಿಖೆಯನ್ನು ಸರಕಾರ ಸಿಐಡಿಗೆ ವಹಿಸಿತ್ತು. ಐದು ವರ್ಷಗಳು ಕಳೆದರೂ ತನಿಖೆ ಪೂರ್ಣಗೊಳ್ಳದ ಹಿನ್ನೆಲೆ, ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಧಾರವಾಡ ಹೈಕೋರ್ಟ್‌ 2015ರ ಡಿಸೆಂಬರ್ 8 ರಂದು ಸಿಐಡಿಗೆ ಸೂಚನೆ ನೀಡಿತ್ತು. ಈ ಹಿನ್ನೆಲೆ ಸೆಪ್ಟೆಂಬರ್ 20ರ 2016ರಂದು ಸಿಐಡಿ ಬಳ್ಳಾರಿ ನ್ಯಾಯಾಲಯಕ್ಕೆ ‘ಸಿ’ ರಿಪೋರ್ಟ್‌ ಸಲ್ಲಿಸಿತ್ತು. ‘ಸಿ’ ರಿಪೋರ್ಟ್‌ನ್ನು ಪ್ರಶ್ನಿಸಿ, ಸುಬ್ಬರಾಯುಡು ಅವರು ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿ 2017ರಲ್ಲಿ ಬಳ್ಳಾರಿ ನ್ಯಾಯಾಲಯಕ್ಕೆ ಪ್ರೊಟೆಸ್ಟ್‌ ಮೆಮೊ ಸಲ್ಲಿಸಿದ್ದರು.

ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಧಾರವಾಡ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ವಿಚಾರಣೆ ಹಂತದಲ್ಲಿದೆ. ರಾಜ್ಯ ಸರಕಾರಕ್ಕೂ ಮನವಿ ಸಲ್ಲಿಸಲಾಗಿದೆ. ಇದೇ ಮಾರ್ಚ್‌ನಲ್ಲಿ ಕೇಂದ್ರ ಸರಕಾರಕ್ಕೂ ಮನವಿ ಸಲ್ಲಿಸಲು ಸಿದ್ಧತೆ ನಡೆಸಲಾಗುತ್ತಿದೆ. ಪ್ರಕರಣದ ಸಂಪೂರ್ಣ ತನಿಖೆ ನಡೆದು, ತಪ್ಪಿತಸ್ಥರಿಗೆ ಶಿಕ್ಷೆಯಾಗುವ ಮೂಲಕ ನೊಂದವರಿಗೆ ನ್ಯಾಯ ಸಿಗುವ ಭರವಸೆ ಇದೆ.

ಸುಬ್ಬರಾಯುಡು, ಮೃತ ಪದ್ಮಾವತಿ ಯಾದವ್‌ ಅವರ ಸಹೋದರ, ಬಳ್ಳಾರಿ

ಹೈಕೋರ್ಟ್‌ ಅಂಗಳದಲ್ಲಿ ಪ್ರಕರಣ: ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸುಬ್ಬರಾಯುಡು ಅವರು 2017 ಜೂನ್ 06 ಹಾಗೂ 2018 ಏಪ್ರಿಲ್ 30 ರಂದು ಬಳ್ಳಾರಿ ಎಸ್ಪಿ, ಐಜಿಪಿ ಅವರಿಗೆ ಮನವಿ ಸಲ್ಲಿಸಿದ್ದರು. ಬಳಿಕ 2018 ಜೂನ್ 28 ರಂದು ಧಾರವಾಡ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ 2019ರಿಂದ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡಿದ್ದು, 2021 ಜುಲೈ 28, ಆಗಸ್ಟ್ 05 ಹಾಗೂ 2022ರ ಜನವರಿಯಲ್ಲಿ ಮೂರು ಬಾರಿ ಅರ್ಜಿ ವಿಚಾರಣೆ ನಡೆಸಿರುವುದು ಪ್ರಕರಣದ ತೀವ್ರತೆ ಹೆಚ್ಚಿಸುವಂತಾಗಿದೆ.

62 ವರ್ಷಗಳ ಬಳಿಕ ನಿಗೂಢ ಪ್ರಕರಣಕ್ಕೆ ಮುಕ್ತಿ; ಡಿಎನ್‌ಎಯಿಂದ ಅತ್ಯಾಚಾರ ಆರೋಪಿ ಪತ್ತೆ



Read more

[wpas_products keywords=”deal of the day sale today offer all”]