ಹಾಸನ ನಗರದ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿಗಳು ಈಗಾಗಲೇ ದಿನಾಂಕ ನಿಗದಿಪಡಿಸಿದ್ದಾರೆ. ಸಮಾವೇಶದಲ್ಲಿ ರಾಜ್ಯ, ದೇಶ, ವಿದೇಶದ 300ಕ್ಕೂ ಹೆಚ್ಚು ಬಂಡವಾಳ ಹೂಡಿಕೆ ಕಂಪನಿಗಳು ಭಾಗವಹಿಸಲಿದೆ. ಇದರಿಂದ ಜಾಗತಿಕ ಬಂಡವಾಳ ಹೂಡಿಕೆ ಮೂಲಕ ಆರ್ಥಿಕವಾಗಿ ಅಭಿವೃದ್ಧಿ, ಉದ್ಯೋಗ ಸೃಷ್ಟಿಗೂ ಸಹಕಾರಿಯಾಗಲಿದೆ’ ಎಂದರು.
‘ಕೈಗಾರಿಕೆ ಸ್ಥಾಪನೆಗೆ ನಿವೇಶನ ಪಡೆದು 20, 30 ವರ್ಷ ಆದರೂ ಕೈಗಾರಿಕೆ ಮಾಡದಿರುವುದನ್ನು ಆಯ್ಕೆ ಮಾಡಿ ನೋಟಿಸ್ ನೀಡಲಾಗಿದೆ. ರಾಜ್ಯದ ನಾನಾ ಜಿಲ್ಲೆಯಲ್ಲಿ 50 ಸಾವಿರ ಕೆರೆ ಭೂಮಿಯನ್ನು ಗುರುತಿಸಿದ್ದು, ನವೆಂಬರ್ ಒಳಗೆ ಕೈಗಾರಿಕೆ ಆರಂಭಿಸುವವರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.
‘ಉದ್ಯಮಿಯಾಗಿ ಉದ್ಯೋಗ ನೀಡು ಎಂಬುದು ಸರಕಾರದ ಪರಿಕಲ್ಪನೆ. ಈ ಹಿನ್ನೆಲೆಯಲ್ಲಿ ಕೈಗಾರಿಕೆ ತೆರೆಯಲು ಅಗತ್ಯ ಸೌಲಭ್ಯ ಒದಗಿಸಲಾಗುವುದು’ ಎಂದರು.
‘ಹಾಸನ ನಗರದಲ್ಲಿ ಐಐಟಿಗೆ ಮೀಸಲಾದ ಒಂದು ಸಾವಿರ ಎಕರೆ ಪ್ರದೇಶವನ್ನು ಏನು ಮಾಡಬೇಕು ಎಂಬುದರ ಕುರಿತು ನಾನೊಬ್ಬನೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಈ ಸಂಬಂಧ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ, ಹಿರಿಯ ಅಧಿಕಾರಿಗಳು, ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ರಾಜ್ಯದಲ್ಲಿ ಯಾವುದೇ ಕೈಗಾರಿಕೆಗಳು ಸ್ಥಾಪನೆಯಾಗಲಿ ಸರೋಜಿನಿ ಮಹಿಷಿ ವರದಿ ಅನ್ವಯ ಕನ್ನಡಿಗರಿಗೆ ಉದ್ಯೋಗವಕಾಶ ನೀಡಲೇಬೇಕು. ಇದರಲ್ಲಿ ಯಾವ ಮುಲಾಜು ಇಲ್ಲ’ ಎಂದು ನಿರಾಣಿ ಹೇಳಿದರು.
ಸಚಿವ ಮುರುಗೇಶ ನಿರಾಣಿ ಮಠಕ್ಕೆ ದಾನವಾಗಿ ನೀಡಿದ ವಸ್ತುಗಳನ್ನು ಅವರ ಮನೆಗೆ ಕಳುಹಿಸುತ್ತೇನೆ ಎಂದು ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಪೀಠಾಧಿಪತಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಲು ಬಯಸದ ಸಚಿವರು, ‘ಪ್ರತ್ಯಕ್ಷ ಕಂಡರೂ ಪ್ರಾಮಾಣಿಸಿ ನೋಡು ಎಂಬಂತೆ ಸತ್ಯವನ್ನು ತಿಳಿಯಬೇಕು. ನಾನು ಎಲ್ಲ ಪೀಠಗಳ ಸೇವೆ ಮಾಡಿದ್ದೇನೆ. ಜಗತ್ತಿಗೆ ಬೆಳಕು ನೀಡುವ ಸೂರ್ಯನಿಗೆ ಒಮ್ಮೊಮ್ಮೆ ಗ್ರಹಣ ಹಿಡಿಯುತ್ತದೆ. ಬಳಿಕ ಬಿಡುತ್ತದೆ, ಅಷ್ಟನ್ನು ಮಾತ್ರ ಹೇಳಬಲ್ಲೆ’ ಎಂದರು.
‘ನನಗೆ ಕೆಲಸ ಮಾಡಲು 24 ಗಂಟೆ ಸಾಲುತ್ತಿಲ್ಲ. ನನ್ನ ಕುಟುಂಬವಾಗಲಿ, ನಾನಾಗಲಿ ಪೀಠದ ಬಗ್ಗೆ ಮಾತನಾಡಿಲ್ಲ. ಬೇರೆಯವರು ಮಾತನಾಡಿ ಸಿಲುಕಿಸುವ ಕೆಲಸ ಮಾಡಿದರೆ ಅದಕ್ಕೆ ಉತ್ತರ ನೀಡುವಷ್ಟು ದೊಡ್ಡವನಲ್ಲ’ ಎಂದು ಸಚಿವರು ಪ್ರತಿಕ್ರಿಯಿಸಿದರು.
‘ಎಲ್ಲ ಸಮಾಜದವರು ಆಶೀರ್ವಾದ ಮಾಡಿದ್ದರಿಂದ ಶಾಸಕನಾಗಿ, ಮಂತ್ರಿಯಾಗಿದ್ದೇನೆ. ಸಣ್ಣ, ಸಣ್ಣ ಕುಟುಂಬಗಳಿವೆ, ಅವರ ಕಣ್ಣೀರು ಒರೆಸುವ ಕೆಲಸ ಮಾಡಬೇಕಿದೆ. ನನ್ನ ಬಗ್ಗೆ ಅವರಿಗೆ ತಪ್ಪು ಕಲ್ಪನೆ ಇದ್ದರೆ ಫೋನ್ ಮಾಡಿದರೆ ಪ್ರತಿಕ್ರಿಯಿಸಲು ಸಿದ್ಧವಿದ್ದೇನೆ’ ಎಂದರು.
‘ಹಿಂದುಳಿದ ಆಯೋಗದ ಅಧ್ಯಕ್ಷರು ಜಯ ಪ್ರಕಾಶ್ ಹೆಗ್ಡೆ ವರದಿ ನೀಡಬೇಕು. ಅದು ಕೊಡದ ಹೊರತು ಸರಕಾರ ಏನು ಮಾಡಲು ಆಗಲ್ಲ. ಅವರು ವರದಿ ನೀಡಿದ ಬಳಿಕ ಸಮಸ್ತ ವೀರಶೈವ ಲಿಂಗಾಯಿತರು, ಉಪ ಜಾತಿ, ವಾಲ್ಮೀಕಿ ಎಲ್ಲ ಸಮಾಜಕ್ಕೆ 2ಎ ಕೊಡುವ ಬಗ್ಗೆ ಅಧ್ಯಯನ ನಡೆಯುತ್ತಿದೆ’ ಎಂದು ಹೇಳಿದರು. ಶಾಸಕ ಪ್ರೀತಂ ಜೆ.ಗೌಡ ಹಾಜರಿದ್ದರು.
Read more
[wpas_products keywords=”deal of the day sale today offer all”]