ಮೈಸೂರು: ‘ದಾನ ನೀಡಿರುವುದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠಕ್ಕೆ ಹೊರತು ಅದರ ಸ್ವಾಮೀಜಿಗೆ ಅಲ್ಲ. ಪೀಠಕ್ಕೆ ನೀಡಿರುವ ಕಾಣಿಕೆಯನ್ನು ವಾಪಸ್ ಕೇಳುವಷ್ಟು ಸಣ್ಣವ ನಾನಲ್ಲ. ಅಂತಹ ಮನಸ್ಥಿತಿಯೂ ನನ್ನದ್ದಲ್ಲ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಇಲ್ಲಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
‘ನಾನು ವಾಪಸ್ಸು ಕೇಳಿದ್ದೇನೆ ಎಂಬುದು ಸುಳ್ಳು. ಸ್ವಾಮೀಜಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ. ದೂರವಾಣಿ ಮೂಲಕ ಸ್ವಾಮೀಜಿ ಜತೆ ಮಾತನಾಡಿಯಾದರೂ ಸ್ಪಷ್ಟನೆ ನೀಡುತ್ತೇನೆ’ ಎಂದು ತಿಳಿಸಿದರು.
ರಾಜ್ಯದಲ್ಲಿ ಪಂಚಮಸಾಲಿ 3ನೇ ಪೀಠ ಸ್ಥಾಪನೆಯ ಹಿಂದೆ ನಾನಿಲ್ಲ. ಆದರೆ, ನನ್ನ ಬೆಂಬಲ ಈ ಪೀಠಕ್ಕೆ ಇದೆ. ಎರಡು ಪೀಠಗಳ ಸ್ವಾಮೀಜಿಗಳ ಒತ್ತಡ ಕಡಿಮೆ ಮಾಡಲು ಈ ಪೀಠದ ಅಗತ್ಯ ಇದೆ. ವಚನಾನಂದ ಸ್ವಾಮೀಜಿ ಸೇರಿ ಹಲವರು ಬೆಂಬಲಿಸಿದ್ದಾರೆ. ಪೀಠ ಸ್ಥಾಪನೆಯ ಹಿಂದೆ ದುರುದ್ದೇಶದ ಪ್ರಶ್ನೆಯೇ ಇಲ್ಲ. ಸಮುದಾಯದ ಜನಸಂಖ್ಯೆ ಹೆಚ್ಚಿರುವ ಕಾರಣ 3ನೇ ಪೀಠದ ಅವಶ್ಯಕತೆ ಇದೆ ಎಂದು ಅವರು ಇಲ್ಲಿ ಪ್ರತಿಪಾದಿಸಿದರು.
‘ನಾನೇ ಹೋಗಿ ಸ್ವಾಮೀಜಿ ಅವರನ್ನು ಖುದ್ದಾಗಿ ಭೇಟಿ ಮಾಡುವುದಿಲ್ಲ. ಅವರು ಕರೆದರೆ ಖಂಡಿತ ಹೋಗುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರ ಪರಮಾಧಿಕಾರ. ಅದರಲ್ಲಿ ನಮ್ಮ ಪಾತ್ರಗಳು ಏನು ಇಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ’ ಎಂದರು.
‘ನನ್ನ ಸೋದರ ಯಾರಿಗೂ ಧಮಕಿ ಹಾಕಿಲ್ಲ. ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆಗೆ ತೋರಿಸುವ ಗಾಂಧಿ ತತ್ವ ನಮ್ಮದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
Read more from source
[wpas_products keywords=”deal of the day sale today kitchen”]