Karnataka news paper

ಉತ್ತರ ಪ್ರದೇಶದಲ್ಲಿ ಗುಂಡಿನ ದಾಳಿ: ಓವೈಸಿಗೆ ಝೆಡ್ ಸೆಕ್ಯುರಿಟಿ ನೀಡಿದ ಸರ್ಕಾರ


ಹೊಸದಿಲ್ಲಿ: ಎಐಎಂಐಎಂ ಮುಖ್ಯಸ್ಥ ಮತ್ತು ಸಂಸದ ಅಸಾದುದ್ದೀನ್ ಓವೈಸಿ ಅವರಿಗೆ ಕೇಂದ್ರ ಸರ್ಕಾರ ಶುಕ್ರವಾರ ‘ಝೆಡ್ ಸೆಕ್ಯುರಿಟಿ‘ ಒದಗಿಸಿದೆ. ಉತ್ತರ ಪ್ರದೇಶದ ಮೀರತ್‌ನಲ್ಲಿ ಗುರುವಾರ ಪ್ರಚಾರ ಮುಗಿಸಿ ದಿಲ್ಲಿಗೆ ಮರಳುವ ವೇಳೆ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆದಿತ್ತು. ಅದರ ಮರುದಿನವೇ ಅವರಿಗೆ ಝೆಡ್ ಶ್ರೇಣಿಯ ಭದ್ರತೆ ನೀಡಲಾಗಿದೆ.

ಕಳೆದ ರಾತ್ರಿ ಸಂಭವಿಸಿದ ದಾಳಿಯ ಮಟ್ಟವನ್ನು ಪರಾಮರ್ಶಿಸಿರುವ ಸರ್ಕಾರ, ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಝೆಡ್ ಶ್ರೇಣಿ ಭದ್ರತೆ (Z Category Security) ಒದಗಿಸಲು ನಿರ್ಧರಿಸಿದೆ. ಝೆಡ್ ಶ್ರೇಣಿಯಲ್ಲಿ 22 ಭದ್ರತಾ ಸಿಬ್ಬಂದಿ ಇರುತ್ತಾರೆ. ಇವರಲ್ಲಿ ನಾಲ್ಕರಿಂದ ಆರು ಮಂದಿ ಎನ್‌ಎಸ್‌ಜಿ ಕಮಾಂಡೋಗಳು ಮತ್ತು ಪೊಲೀಸ್ ಸಿಬ್ಬಂದಿ ಇರುತ್ತಾರೆ.
ಘಾಜಿಯಾಬಾದ್‌ನಲ್ಲಿ ಅಸಾದುದ್ದೀನ್ ಓವೈಸಿ ಕಾರಿನ ಮೇಲೆ 4 ಸುತ್ತಿನ ಗುಂಡಿನ ದಾಳಿ ಆರೋಪ!

ದಿಲ್ಲಿ ಪೊಲೀಸರು ಅಥವಾ ಇಂಡೋ- ಟಿಬೆಟ್ ಗಡಿ ಪೊಲೀಸರು ಅಥವಾ ಸಿಆರ್‌ಪಿಎಫ್ ಸಿಬ್ಬಂದಿ ಸಾಮಾನ್ಯವಾಗಿ ಜೆಡ್ ಸೆಕ್ಯುರಿಟಿ ಒದಗಿಸುತ್ತಾರೆ. ಸಿಬ್ಬಂದಿ ಜತೆಗೆ ಒಂದು ಬೆಂಗಾವಲು ಕಾರು ಇರುತ್ತದೆ.

ನನಗೆ ಭದ್ರತೆ ಬೇಡ
ಇದಕ್ಕೂ ಮುಂಚೆ ಮಾತನಾಡಿದ್ದ ಓವೈಸಿ, ತಾವು ಹಿಂದೆ ಎಂದೂ ಭದ್ರತೆ ಪಡೆದುಕೊಂಡಿಲ್ಲ, ಮುಂದೆಯೂ ಪಡೆದುಕೊಳ್ಳುವುದಿಲ್ಲ ಎಂದು ಹೇಳಿದ್ದರು. ‘ನಾನು 1994ರಲ್ಲಿ ರಾಜಕೀಯ ವೃತ್ತಿ ಆರಂಭಿಸಿದ್ದೆ. ಇದುವರೆಗೂ ಭದ್ರತೆಯನ್ನು ತೆಗೆದುಕೊಂಡಿಲ್ಲ. ಮುಂದೆಯೂ ಪಡೆಯೊಲ್ಲ. ನನ್ನ ಜೀವ ರಕ್ಷಿಸುವುದು ಸರ್ಕಾರದ ಜವಾಬ್ದಾರಿ’ ಎಂದಿದ್ದರು.

ಮಾಸ್ಟರ್ ಮೈಂಡ್ ಇದ್ದಾರೆ
‘ಈ ದಾಳಿಯ ಹಿಂದೆ ಖಂಡಿತವಾಗಿಯೂ ಒಂದು ಮಾಸ್ಟರ್‌ಮೈಂಡ್ ಇದೆ ಎಂದು ನಾನು ಚುನಾವಣಾ ಆಯೋಗಕ್ಕೆ ಹೇಳಲು ಬಯಸುತ್ತೇನೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಕೆಲವು ದಿನಗಳ ಹಿಂದೆ ನಡೆದ ಧರಮ್ ಸಂಸದ್‌ನಲ್ಲಿ ನನ್ನ ಜೀವ ತೆಗೆಯುವ ಬಗ್ಗೆ ಮಾತುಗಳನ್ನು ಆಡಲಾಗಿತ್ತು. ಇದು ದಾಖಲಾಗಿತ್ತು. ನಾನು ಅದನ್ನು ನೋಡಿದ್ದೇನೆ’ ಎಂದು ಓವೈಸಿ ಹೇಳಿದ್ದಾರೆ.

ಇಬ್ಬರು ಆರೋಪಿಗಳ ಬಂಧನ
ಮೀರತ್‌ನ ಕಿತೌಧ್ ಪ್ರದೇಶದಲ್ಲಿ ಓವೈಸಿ ಅವರ ಕಾರಿನ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಒಬ್ಬ ಆರೋಪಿಯ ಹೆಸರು ಸಚಿನ್ ಎಂದು ಗುರುತಿಸಿದ್ದು, ಈತ ನೋಯ್ಡಾ ನಿವಾಸಿಯಾಗಿದ್ದಾನೆ. ಈತನ ವಿರುದ್ಧ ಕೊಲೆ ಪ್ರಯತ್ನದ ಪ್ರಕರಣವೊಂದು ದಾಖಲಾಗಿತ್ತು. ಸಚಿನ್ ತಾನು ಕಾನೂನು ಪದವಿ ಹೊಂದಿರುವುದಾಗಿ ಹೇಳಿಕೊಂಡಿದ್ದಾನೆ. ಪೊಲೀಸರು ಇದನ್ನು ಪರಿಶೀಲಿಸುತ್ತಿದ್ದಾರೆ. ತಾನೊಬ್ಬ ಹಿಂದೂ ಬಲ ಪಂಥೀಯ ಸಂಘಟನೆಯ ಸದಸ್ಯ ಎಂದು ಆತ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಬರೆದುಕೊಂಡಿದ್ದಾನೆ. ಈ ನಿಟ್ಟಿನಲ್ಲಿಯೂ ತನಿಖೆ ನಡೆಸಲಾಗುತ್ತಿದೆ.
ಮೋದಿಗಿಂತಲೂ ದೊಡ್ಡ ಹಿಂದೂ ಆಗಲು ಯೋಗಿ ಮತ್ತು ಅಖಿಲೇಶ್ ನಡುವೆ ಪೈಪೋಟಿ: ಓವೈಸಿ ಟೀಕೆ

ಮತ್ತೊಬ್ಬ ಆರೋಪಿ ಸಹರಾನ್ಪುರ ನಿವಾಸಿ ಶುಭಂ ಎಂದು ಗುರುತಿಸಲಾಗಿದೆ. ಈತನಿಗೆ ಯಾವುದೇ ಅಪರಾಧ ಹಿನ್ನೆಲೆ ಇಲ್ಲ. ಅಸಾದುದ್ದೀನ್ ಓವೈಸಿ ಮತ್ತು ಅವರ ಸಹೋದರ ಅಕ್ಬರುದ್ದೀನ್ ಓವೈಸಿ ನೀಡಿದ ಹೇಳಿಕೆಗಳಿಂದ ಅಸಮಾಧಾನಗೊಂಡಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಹೇಳಿದ್ದಾರೆ.

ಅವರು ಇತ್ತೀಚೆಗೆ ಖರೀದಿಸಿದ್ದ ನಾಡ ಪಿಸ್ತೂಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅವರಿಗೆ ಪಿಸ್ತೂಲು ಮಾರಾಟ ಮಾಡಿದ ವ್ಯಕ್ತಿಗಳ ಪತ್ತೆ ಕಾರ್ಯ ಆರಂಭಿಸಲಾಗಿದೆ.

ತಮ್ಮ ಬಿಳಿ ಎಸ್‌ಯುವಿಯಲ್ಲಿ ಎರಡು ಗುಂಡಿನ ರಂದ್ರಗಳಾಗಿದೆ ಎಂದು ಅಸಾದುದ್ದೀನ್ ಓವೈಸಿ ಅವರು ಟೋಲ್ ಪ್ಲಾಜಾ ಒಂದರ ಬಳಿ ತೆಗೆದ ಚಿತ್ರಗಳನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಇನ್ನೊಂದು ಗುಂಡು ಟೈರ್‌ಗೆ ತಗುಲಿರುವುದಾಗಿ ತಿಳಿಸಿದ್ದರು. ಅವರು ಆ ಕಾರನ್ನು ಅಲ್ಲಿಯೇ ಬಿಟ್ಟು, ಬೇರೆ ಕಾರಿನಲ್ಲಿ ಪ್ರಯಾಣಿಸಿದ್ದರು.



Read more

[wpas_products keywords=”deal of the day sale today offer all”]