ಕಿರುತೆರೆಯ ಮೂಲಕ ಚಂದನವನಕ್ಕೆ ಪ್ರವೇಶಿಸಿದವರು ನಟ ಪ್ರಮೋದ್. ‘ಗೀತಾ ಬ್ಯಾಂಗಲ್ ಸ್ಟೋರ್’ ಸಿನಿಮಾ ಮುಖಾಂತರ ನಾಯಕ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು, ನಂತರ ‘ಪ್ರೀಮಿಯರ್ ಪದ್ಮಿನಿ’, ‘ಮತ್ತೆ ಉದ್ಭವ’, ‘ರತ್ನನ್ ಪ್ರಪಂಚ’ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
‘ರತ್ನನ್ ಪ್ರಪಂಚ’ದಲ್ಲಿ ‘ಉಡಾಳ್ ಬಾಬು ರಾವ್’ ಆಗಿ ಮಿಂಚಿದ್ದ ಪ್ರಮೋದ್ ಇದೀಗ ʻಅಲಂಕಾರ್ ವಿದ್ಯಾರ್ಥಿʼ ಎನ್ನುವ ವಿಭಿನ್ನ ಶೀರ್ಷಿಕೆಯ ಸಿನಿಮಾದ ಹೀರೊ. ಈ ಚಿತ್ರದ ಮುಹೂರ್ತ ಇತ್ತೀಚೆಗೆ ನಡೆಯಿತು. ನಟ ‘ಡಾಲಿ’ ಧನಂಜಯ್ ಕ್ಲ್ಯಾಪ್ ಮಾಡುವ ಮುಖಾಂತರ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
‘ಅಲಂಕಾರ್ ವಿದ್ಯಾರ್ಥಿ– ಇದು ಎಪ್ಪತ್ತು ಎಂಭತ್ತರ ದಶಕದಲ್ಲಿ ಕೊನೆಯ ಬೆಂಚ್‌ನ ವಿದ್ಯಾರ್ಥಿಗಳನ್ನು ಕರೆಯುತ್ತಿದ್ದ ರೀತಿ. ನಮ್ಮ ಸಿನಿಮಾದಲ್ಲಿ ಹೀರೊ ಕೂಡಾ ಹಾಗೇ. ಓದು ತಲೆಗೆ ಹತ್ತದಿದ್ದರೂ ಅಲಂಕಾರಕ್ಕಾಗಿ ಕಾಲೇಜಿಗೆ ಬರುತ್ತಿರುತ್ತಾನೆ. ಆದರೂ ಕಾಲೇಜಿನಲ್ಲಿ ಪಾಠ ಮಾಡುವ ಗುರುಗಳಿಂದ ಹಿಡಿದು ಎಲ್ಲರಿಗೂ ಇವನೆಂದರೆ ಮುದ್ದು. ಉತ್ತೀರ್ಣನಾಗುವ ವಿದ್ಯಾರ್ಥಿಗೆ ಬೇಸಿಗೆ ಕಾಲದಲ್ಲಿ ಮಾತ್ರ ರಜೆ ಸಿಗುತ್ತದೆ. ಅದೇ ಫೇಲಾಗಿ ಎರಡು ವರ್ಷ ಕಾಲ ಕಳೆದವನು ಬೇಸಿಗೆ, ಮಳೆ, ಚಳಿ ಮೂರೂ ಋತುವಿನಲ್ಲೂ ಮನೆಯಲ್ಲೇ ಇರುತ್ತಾನೆ. ಇಂಥಾ ಹುಡುಗ ಮ್ಯಾನೇಜ್‌ಮೆಂಟ್ ಸೀಟು ತೆಗೆದುಕೊಂಡು ಕಾಲೇಜಿಗೆ ಬರುತ್ತಾನೆ. ಈತನ ಬದುಕು ಹೇಗಿರುತ್ತದೆ ಅನ್ನುವುದೇ ಚಿತ್ರದ ತಿರುಳು’ ಎನ್ನುತ್ತಾರೆ ನಿರ್ದೇಶಕ ಕೇಶವ್ ಎಸ್ ಇಂಡಲವಾಡಿ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ.
‘ನಮ್ಮ ನಿರ್ದೇಶಕರು ಬಹಳ ಹಿಂದೆಯೇ ಕತೆ ಹೇಳಿದ್ದರು. ‘ರತ್ನನ್ ಪ್ರಪಂಚ’ ಸಿನಿಮಾದ ನಂತರ ನನಗೆ ಬಹುತೇಕ ಮಾಸ್ ಮತ್ತು ಆ್ಯಕ್ಷನ್ ವಿಷಯಗಳೇ ಇರುವ ಸಿನಿಮಾಗಳು ಬರುತ್ತಿವೆ. ಈ ನಡುವೆ ಇಂಥದ್ದೊಂದು ಜಾನರ್‌ನ ಸಿನಿಮಾ ಇರಲಿ ಅಂತಾ ತುಂಬಾ ಇಷ್ಟ ಪಟ್ಟು ಒಪ್ಪಿಕೊಂಡಿದ್ದೀನಿ’ ಎಂದರು ಪ್ರಮೋದ್.
ಪ್ರಮೋದ್‌ಗೆ ಜೋಡಿಯಾಗಿ ಅರ್ಚನಾ ಕೊಟ್ಟಿಗೆ ಬಣ್ಣಹಚ್ಚಲಿದ್ದಾರೆ. ಬೆಂಗಳೂರಿನಲ್ಲಿ 45 ದಿನಗಳ ಚಿತ್ರೀಕರಣ ನಡೆಸಿ, ಹಾಡುಗಳ ಚಿತ್ರೀಕರಣಕ್ಕೆ ಚಿಕ್ಕಮಗಳೂರು ಸೇರಿದಂತೆ ಇತರೆ ಕಡೆಗೆ ಹೋಗಲಿದೆ ಚಿತ್ರತಂಡ. ಪ್ರಮೋದ್ ಅವರ ತಂದೆ –ತಾಯಿ ಪಾತ್ರದಲ್ಲಿ ಅಚ್ಯುತ್ ಮತ್ತು ಸುಧಾ ಬೆಳವಾಡಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ರಘು ದೀಕ್ಷಿತ್ ಸಂಗೀತವಿದೆ.