Karnataka news paper

‘ಗೋಡ್ಸೆ ಭಾರತದತ್ತ ಮತ್ತೊಂದು ಹೆಜ್ಜೆ’: ಉಡುಪಿ ಕಾಲೇಜಿನ ಹಿಜಾಬ್ ವಿವಾದದ ವಿರುದ್ಧ ಮುಫ್ತಿ ಕಿಡಿ


ಹೊಸದಿಲ್ಲಿ: ಹಿಜಾಬ್ ಧರಿಸಿ ಬಂದ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಕಾಲೇಜು ಪ್ರವೇಶಿಸದಂತೆ ಗೇಟ್ ಬಳಿಯೇ ತಡೆದ ಉಡುಪಿ ಜಿಲ್ಲೆಯ ಘಟನೆ ದೇಶಾದ್ಯಂತ ಚರ್ಚೆಗೆ ಒಳಗಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬ ಮುಫ್ತಿ ಹಾಗೂ ಒಮರ್ ಅಬ್ದುಲ್ಲಾ ಬಿಜೆಪಿ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ.

ಕುಂದಾಪುರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರಾಂಶುಪಾಲರು, ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು ಕಾಲೇಜು ಆವರಣದ ಒಳಗೆ ಪ್ರವೇಶಿಸಲು ಅವಕಾಶ ನಿರಾಕರಿಸುವ ವಿಡಿಯೋವನ್ನು ಈ ಮುಖಂಡರು ಹಂಚಿಕೊಂಡಿದ್ದಾರೆ. ಹಿಜಾಬ್ ತೊಟ್ಟಿರುವ ಕಾರಣಕ್ಕೆ ಮುಸ್ಲಿಂ ಹೆಣ್ಣುಮಕ್ಕಳಿಗೆ ಶಿಕ್ಷಣ ನಿರಾಕರಿಸಲಾಗಿದೆ. ಹೆಣ್ಣುಮಕ್ಕಳ ಶಿಕ್ಷಣೆ ಕುರಿತಾದ ಕೇಂದ್ರ ಸರ್ಕಾರದ ಘೋಷಣೆಗಳು ಕೇವಲ ಪೊಳ್ಳು ಎಂಬುದನ್ನು ಇದು ಸಾಬೀತುಪಡಿಸಿದೆ ಎಂದು ಮುಫ್ತಿ ಕಿಡಿಕಾರಿದ್ದಾರೆ.
ಉಡುಪಿಯಲ್ಲಿ ನಿಲ್ಲದ ಹಿಜಾಬ್‌ vs ಕೇಸರಿ ಶಾಲು ವಿವಾದ: ಹಿಜಾಬ್‌ ಧರಿಸಿದ ವಿದ್ಯಾರ್ಥಿನಿಯರನ್ನು ಶಾಲಾ ಗೇಟ್‌ನಲ್ಲೇ ತಡೆದ ಪ್ರಾಂಶುಪಾಲ

‘ಬೇಟಿ ಬಚಾವೊ ಬೇಟಿ ಫಡಾವೋ ಮತ್ತೊಂದು ಪೊಳ್ಳು ಘೋಷಣೆಯಾಗಿದೆ. ತಮ್ಮ ಉಡುಪಿನ ಕಾರಣಕ್ಕಾಗಿ ಮುಸ್ಲಿಂ ಹೆಣ್ಣುಮಕ್ಕಳಿಗೆ ಶಿಕ್ಷಣದ ಹಕ್ಕನ್ನು ನಿರಾಕರಣೆ ಮಾಡಲಾಗಿದೆ. ಗಾಂಧಿಯ ಭಾರತವನ್ನು ಗೋಡ್ಸೆಯ ಭಾರತವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಮುಸ್ಲಿಮರನ್ನು ಮೂಲೆಗುಂಪು ಮಾಡುವುದನ್ನು ಕಾನೂನುಬದ್ಧಗೊಳಿಸುವುದು ಇನ್ನೂ ಒಂದು ಹೆಜ್ಜೆಯಾಗಿದೆ’ ಎಂದು ಅವರು ಟ್ವಿಟ್ಟರ್‌ನಲ್ಲಿ ಆರೋಪಿಸಿದ್ದಾರೆ.

ಮುಸ್ಲಿಂ ವಿದ್ಯಾರ್ಥಿನಿಯರ ವಸ್ತ್ರ ಸಂಹಿತೆ ವಿಚಾರವಾಗಿ ಗುಡುಗಿರುವ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ, ಕೇಸರಿ ವಸ್ತ್ರದಲ್ಲಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ ಮತ್ತು ಸಂಸದೆ ಪ್ರಗ್ಯಾ ಠಾಕೂರ್ ಅವರ ಚಿತ್ರಗಳನ್ನು, ಹಿಜಾಬ್ ಧರಿಸಿದ ಮುಸ್ಲಿಂ ವಿದ್ಯಾರ್ಥಿನಿಯರ ಚಿತ್ರಗಳೊಂದಿಗೆ ಹಂಚಿಕೊಂಡಿದ್ದಾರೆ.

‘ತಾವು ಏನನ್ನು ಧರಿಸಬೇಕು ಎಂಬುದನ್ನು ಜನರು ವೈಯಕ್ತಿಕವಾಗಿ ನಿರ್ಧರಿಸಲು ಸ್ವತಂತ್ರರು. ಅವರ ಆಯ್ಕೆಯನ್ನು ನೀವು ಇಷ್ಟಪಡಬಹುದು ಅಥವಾ ಇಷ್ಟಪಡದೆ ಇರಬಹುದು. ಆದರೆ ನಾವೆಲ್ಲರೂ ಹೊಂದಿರುವ ಹಕ್ಕು ಅದು. ಈ ಸಾರ್ವಜನಿಕ ಪ್ರತಿನಿಧಿಗಳು ಕೇಸರ ಉಡುಪು ಧರಿಸಬಹುದಾದರೆ, ಈ ಹೆಣ್ಣುಮಕ್ಕಳೂ ಹಿಜಾಬ್ ತೊಡಬಹುದು. ಮುಸ್ಲಿಮರು ದ್ವಿತೀಯ ದರ್ಜೆ ಪ್ರಜೆಗಳಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭದ್ರಾವತಿಯ ಕಾಲೇಜ್‌ನಲ್ಲೂ ಹಿಜಾಬ್‌ ಗಲಾಟೆ! ಹಿಂದೂ-ಮುಸ್ಲಿಂ ಸಂಬಂಧ ಹಾಳು ಮಾಡಲು ಯತ್ನ: ಈಶ್ವರಪ್ಪ!

ಘಟನೆ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, ‘ಪ್ರತಿಯೊಬ್ಬರೂ ತಾವು ಇಷ್ಟಪಟ್ಟಿದ್ದನ್ನು ಧರಿಸುವ ಸ್ವಾತಂತ್ರ್ಯ ಹೊಂದಿರುವುದು ಭಾರತದ ಶಕ್ತಿಯಾಗಿದೆ. ಹಿಜಾಬ್‌ಗೆ ಅನುಮತಿ ಇಲ್ಲ ಎಂದರೆ, ಸಿಖ್ಖರ ಪೇಟದ ಬಗ್ಗೆ ಏನು? ಹಿಂದೂಗಳ ಹಣೆಯ ತಿಲಕ ಏನು? ಕ್ರೈಸ್ತರ ಶಿಲುಬೆ ಏನು? ಈ ಕಾಲೇಜು ವಿನಾಶಕಾರಿ ಹೆಜ್ಜೆ ಇರಿಸುತ್ತಿದೆ. ಹೆಣ್ಣುಮಕ್ಕಳನ್ನು ಒಳಗೆ ಬಿಡಿ. ಅವರಿಗೆ ಓದಲು ಬಿಡಿ. ಅವರಿಗೆ ನಿರ್ಧರಿಸಲು ಬಿಡಿ’ ಎಂದು ಟ್ವೀಟ್ ಮಾಡಿದ್ದಾರೆ.



Read more

[wpas_products keywords=”deal of the day sale today offer all”]