Karnataka news paper

ಲಾಡೆನ್ ಹತ್ಯೆ ರೀತಿ ಅಮೆರಿಕ ರಹಸ್ಯ ಕಾರ್ಯಾಚರಣೆ : ಸಿರಿಯಾದಲ್ಲಿ ಐಸಿಸ್‌ ಮುಖ್ಯಸ್ಥನ ಹತ್ಯೆ


ವಾಷಿಂಗ್ಟನ್‌: ಐಸಿಸ್‌ ಉಗ್ರರ ವಿರುದ್ಧ ಅಮೆರಿಕ ನಡೆಸುತ್ತಿರುವ ಹೋರಾಟಕ್ಕೆ ಭಾರಿ ಮುನ್ನಡೆ ದೊರೆತಿದ್ದು, ಸಿರಿಯಾದಲ್ಲಿ ಅಮೆರಿಕ ಯೋಧರು ಕಾರ್ಯಾಚರಣೆ ನಡೆಸಿ ಐಸಿಸ್‌ ಮುಖ್ಯಸ್ಥ ಅಬು ಇಬ್ರಾಹಿಂ ಅಲ್‌-ಹಶೀಮಿ ಅಲ್‌-ಖುರೇಷಿಯನ್ನು ಹತ್ಯೆಗೈದಿದ್ದಾರೆ. ”ನಾನು ನೀಡಿದ ನಿರ್ದೇಶನದಂತೆ ಅಮೆರಿಕ ಯೋಧರು ಬುಧವಾರ ರಾತ್ರಿ ವಾಯವ್ಯ ಸಿರಿಯಾದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ನಡೆಸಿ ಐಸಿಸ್‌ ಪ್ರಮುಖ ಉಗ್ರ ಖುರೇಷಿಯನ್ನು ಹತ್ಯೆಗೈದಿದ್ದಾರೆ.

ಅಮೆರಿಕದ ಜನ, ನಮ್ಮ ಮಿತ್ರ ರಾಷ್ಟ್ರಗಳು ಹಾಗೂ ಜಗತ್ತಿನ ರಕ್ಷಣೆ ದಿಸೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಇಂತಹ ಶೌರ್ಯ ಮೆರೆದ ಅಮೆರಿಕ ಸೇನೆಗೆ ಧನ್ಯವಾದ,” ಎಂದು ಅಧ್ಯಕ್ಷ ಜೋ ಬೈಡೆನ್‌ ತಿಳಿಸಿದ್ದಾರೆ. ಅತ್ಮೇಹ್‌ ಪಟ್ಟಣದಲ್ಲಿರುವ ನಿವಾಸದಲ್ಲಿ ಖುರೇಷಿ ತಂಗಿದ್ದು, ರಾತ್ರೋರಾತ್ರಿ ಅಮೆರಿಕ ಸೈನಿಕರು ಹೆಲಿಕಾಪ್ಟರ್‌ ಮೂಲಕ ದಾಳಿ ಮಾಡಿದ್ದಾರೆ.

ಈ ವೇಳೆ ಸೈನಿಕರು ಹಾಗೂ ಖುರೇಷಿ ಭದ್ರತಾ ಪಡೆ ಮಧ್ಯೆ ಗುಂಡಿನ ಚಕಮಕಿ ಸಹ ನಡೆದಿದೆ. ಸತತ ಗುಂಡಿನ ದಾಳಿ ಹಾಗೂ ಸ್ಫೋಟಕ ಬಳಸಿ ಅಮೆರಿಕ ಸೈನಿಕರು ಮನೆ ಧ್ವಂಸಗೊಳಿಸಿದ್ದಾರೆ. ದಾಳಿಯಲ್ಲಿ ಮನೆಯಲ್ಲಿದ್ದ ಖುರೇಷಿ, ಆರು ಮಕ್ಕಳು, ನಾಲ್ವರು ಮಹಿಳೆಯರು ಸೇರಿ ಒಟ್ಟು 13 ಜನ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಮೆರಿಕವು 2019ರಲ್ಲಿ ಐಸಿಸ್‌ ಪ್ರಮುಖ ಮುಖಂಡ ಬಾಗ್ದಾದಿಯನ್ನು ಹತ್ಯೆಗೈದ ಬಳಿಕ ಖುರೇಷಿ ಆತನ ಸ್ಥಾನಕ್ಕೆ ನೇಮಕವಾಗಿದ್ದ.

ಬಲೂಚಿಸ್ತಾನ ಲಿಬರೇಷನ್‌ ಆರ್ಮಿ ಉಗ್ರರಿಂದ ಪಾಕಿಸ್ತಾನದ 100 ಸೈನಿಕರ ಹತ್ಯೆ?

ಪಾಕಿಸ್ತಾನದ 100 ಸೈನಿಕರ ಹತ್ಯೆ?
ಇಸ್ಲಾಮಾಬಾದ್‌: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿರುವ ಎರಡು ಸೇನಾ ನೆಲೆಗಳ ಮೇಲೆ ಬಲೂಚಿಸ್ತಾನ ಲಿಬರೇಷನ್‌ ಆರ್ಮಿ (ಬಿಎಲ್‌ಎ) ಸಂಘಟನೆಯ ಉಗ್ರರು ದಾಳಿ ನಡೆಸಿದ್ದು, ”ಪಾಕಿಸ್ತಾನದ 100 ಸೈನಿಕರನ್ನು ಹತ್ಯೆಗೈದಿದ್ದೇವೆ,” ಎಂದು ಹೇಳಿದೆ. ಮತ್ತೊಂದೆಡೆ, ”ಗುಂಡಿನ ಚಕಮಕಿಯಲ್ಲಿ ನಾಲ್ವರು ಸೈನಿಕರು ಮಾತ್ರ ಮೃತಪಟ್ಟಿದ್ದು, ಯೋಧರ ಗುಂಡಿಗೆ 15 ಉಗ್ರರನ್ನು ಹತ್ಯೆಗೈಯಲಾಗಿದೆ,” ಎಂದು ಪಾಕ್‌ ಸರಕಾರ ತಿಳಿಸಿದೆ.

ಪಂಜ್ಗುರ್‌ ಹಾಗೂ ನೋಶ್ಕಿ ಜಿಲ್ಲೆಗಳಲ್ಲಿ ಸೇನೆಯ ಎರಡು ನೆಲೆಗಳ ಮೇಲೆ ಉಗ್ರರು ದಾಳಿ ಮಾಡಿದ್ದಾರೆ. ಇದಕ್ಕೆ ಪಾಕ್‌ ಸೈನಿಕರು ಸಹ ಪ್ರತಿ ದಾಳಿ ನಡೆಸಿದ್ದಾರೆ. ”ಉಗ್ರರ ವಿರುದ್ಧದ ಹೋರಾಟದಲ್ಲಿ ಪಾಕ್‌ ಸೇನೆಗೆ ಭಾರಿ ಮುನ್ನಡೆ ದೊರೆತಿದೆ. ನೋಶ್ಕಿಯಲ್ಲಿ ಒಂಬತ್ತು ಉಗ್ರರು ಹಾಗೂ ನಾಲ್ವರು ಸೈನಿಕರು ಮೃತಪಟ್ಟರೆ, ಪಂಜ್ಗುರ್‌ನಲ್ಲಿಆರು ಉಗ್ರರ ಹತ್ಯೆ ಮಾಡಲಾಗಿದೆ,” ಎಂದು ಗೃಹ ಸಚಿವ ಶೇಖ್‌ ರಶೀದ್‌ ಅಹ್ಮದ್‌ ತಿಳಿಸಿದ್ದಾರೆ.



Read more

[wpas_products keywords=”deal of the day sale today offer all”]