Karnataka news paper

ಇಂಧನ ಸಾಗಿಸುತ್ತಿದ್ದ ಟ್ರಕ್ ಸ್ಫೋಟಗೊಂಡು ಭೀಕರ ದುರಂತ: ಕನಿಷ್ಠ 62 ಮಂದಿ ಸಜೀವ ದಹನ


ಹೈಲೈಟ್ಸ್‌:

  • ಹೈಟಿಯ ಕ್ಯಾಪ್-ಹೈಟಿಯನ್ ನಗರದಲ್ಲಿ ಮಧ್ಯರಾತ್ರಿ ನಡೆದ ದುರಂತ
  • ಅಪಘಾತ ಸಂಭವಿಸುವ ಪ್ರಯತ್ನದಲ್ಲಿ ಉರುಳಿಬಿದ್ದ ಇಂಧನ ಟ್ರಕ್
  • ಸೋರಿಕೆಯಾದ ಗ್ಯಾಸ್ ಸಂಗ್ರಹಿಸಲು ದೌಡಾಯಿಸಿದ ಸ್ಥಳೀಯ ಜನರು
  • ಟ್ರಕ್ ಸ್ಫೋಟಗೊಂಡು 62 ಮಂದಿ ಸಾವು, ಗಾಯಾಳುಗಳಿಗೆ ಲೆಕ್ಕವಿಲ್ಲ

ಪೋರ್ಟ್ ಆ ಪ್ರಿನ್ಸ್: ಕೆರೆಬಿಯನ್ ದೇಶ ಹೈಟಿಯಲ್ಲಿ ಮಂಗಳವಾರ ಗ್ಯಾಸೋಲಿನ್ ಟ್ರಕ್ ಒಂದು ಸ್ಫೋಟಿಸಿ ಉಂಟಾದ ಭೀಕರ ಅವಘಡದಲ್ಲಿ ಕನಿಷ್ಠ 62 ಮಂದಿ ಬಲಿಯಾಗಿದ್ದಾರೆ. ಹೈಟಿ ದೇಶದ ಎರಡನೇ ಅತಿ ದೊಡ್ಡ ನಗರವಾದ ಕ್ಯಾಪ್-ಹೈಟಿಯನ್‌ನಲ್ಲಿ ಇಂಧನ ಸಾಗಿಸುತ್ತಿದ್ದ ಟ್ರಕ್ ಒಂದು ಉರುಳಿಬಿದ್ದಿತ್ತು. ಹೈಟಿಯಲ್ಲಿ ತೈಲ ಅಭಾವ ತೀವ್ರವಾಗಿರುವುದರಿಂದ ಅಲ್ಲಿ ಸುತ್ತಮುತ್ತಲಿನ ಜನರು ಇಂಧನ ಸಂಗ್ರಹಿಸಲು ಟ್ರಕ್ ಬಳಿ ದೌಡಾಯಿಸಿದ್ದಾರೆ. ಈ ಸಂದರ್ಭದಲ್ಲಿ ಅದು ಸ್ಫೋಟಗೊಂಡು ಈ ಹೃದಯವಿದ್ರಾವಕ ಘಟನೆ ಸಂಭವಿಸಿದೆ.

ಬಡತನದ ಕೂಪ, ಗ್ಯಾಂಗ್‌ವಾರ್ ಹಿಂಸಾಚಾರಗಳು ಮತ್ತು ರಾಜಕೀಯ ಅಸ್ಥಿರತೆ ಸೇರಿದಂತೆ ಸಾಲು ಸಾಲು ಸಂಕಷ್ಟಗಳಿಂದ ಬಳಲುತ್ತಿರುವ ಹೈಟಿಯ ಜನತೆಗೆ ಇಂತಹ ದುರ್ಘಟನೆಗಳು ಗಾಯದ ಮೇಲೆ ಮತ್ತಷ್ಟು ಬರೆಗಳನ್ನು ಎಳೆಯುತ್ತಿವೆ.
ಹೈಟಿಯಲ್ಲಿ ಭೀಕರ ಭೂಕಂಪ ದುರಂತ: ಕನಿಷ್ಠ 304 ಸಾವು, ಧರೆಗುರುಳಿದ ಕಟ್ಟಡಗಳು
ನಗರದ ಪೂರ್ವ ಭಾಗದಲ್ಲಿರುವ ಸನ್ಮೇರಿ ಎಂಬ ಪ್ರದೇಶದಲ್ಲಿ ಮಂಗಳವಾರ ಮಧ್ಯರಾತ್ರಿ ಘಟನೆ ಸಂಭವಿಸಿದೆ. ಈ ಅವಘಡದಲ್ಲಿ ನೂರಾರು ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಸ್ಥಳೀಯ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಸಂಖ್ಯೆ ಇನ್ನೂ ಖಚಿತವಾಗಿಲ್ಲ.

ಈ ದುರಂತ ಸಂಭವಿಸಿದ ಸ್ಥಳಕ್ಕೆ ಹೈಟಿ ಪ್ರಧಾನಿ ಅರಿಯೆಲ್ ಹೆನ್ರಿ ಭೇಟಿ ನೀಡಿದ್ದಾರೆ. ಸ್ಥಳೀಯ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಿದ ಅವರು, ಈ ಘಟನೆ ತಮ್ಮ ಹೃದಯವನ್ನು ಛಿದ್ರಗೊಳಿಸಿದೆ ಎಂದಿದ್ದಾರೆ. ತುರ್ತು ಪರಿಹಾರ ಕ್ರಮಗಳಿಗಾಗಿ ನೆರವು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ದೇಶದ ಉತ್ತರ ಕರಾವಳಿ ಭಾಗದಲ್ಲಿರುವ ಈ ನಗರದಲ್ಲಿ ಟ್ರಕ್ ಒಳಗೆ ಹಾಗೂ ಸುತ್ತಮುತ್ತಲೂ ಜನರ ಅಂಗಗಳು ಸುಟ್ಟು ಕರಕಲಾಗಿ ಹಾಗೂ ತುಂಡು ತುಂಡಾಗಿ ಬಿದ್ದಿವೆ. ಸ್ಫೋಟದ ನಂತರದ ಸನ್ನಿವೇಶ ಕೂಡ ಮನಕಲಕುವಂತಿತ್ತು. ಟ್ರಕ್‌ನಿಂದ ಸಿಡಿದು ಚೂರಾಗಿ ಬಿದ್ದಿದ್ದ ಭಾಗಗಳಲ್ಲಿ ಅಂಟಿಕೊಂಡಿದ್ದ ದೇಹದ ಅಂಗಗಳನ್ನು ಜನರು ಬೇರ್ಪಡಿಸಿ ಎಸೆದು, ಗುಜರಿಗೆ ಲೋಹದ ವಸ್ತುಗಳನ್ನು ಸಂಗ್ರಹಿಸುವ ದೃಶ್ಯ ಮತ್ತಷ್ಟು ಭಯಾನಕವಾಗಿತ್ತು.

ಘಟನೆಯಲ್ಲಿ 62 ಮಂದಿ ಮೃತಪಟ್ಟಿರುವುದು ಖಚಿತವಾಗಿದೆ ಎಂದು ಉಪ ಮೇಯರ್ ಪ್ಯಾಟ್ರಿಕ್ ಅಲ್ಮೊನೋರ್ ತಿಳಿಸಿದ್ದಾರೆ. ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಕಟ್ಟಡಗಳಲ್ಲಿನ ಜನರು ಮೃತಪಟ್ಟಿರುವ ಶಂಕೆ ಇದ್ದು, ಅವರಿಗಾಗಿ ಪತ್ತೆ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಹೇಳಿದ್ದಾರೆ. ಡಜನ್‌ಗಟ್ಟಲೆ ಜನರು ಸಜೀವವಾಗಿ ದಹನವಾಗಿದ್ದಾರೆ. ಹೀಗಾಗಿ ಅವರ ಗುರುತುಗಳನ್ನು ಪತ್ತೆ ಹಚ್ಚುವುದು ಅಸಾಧ್ಯವಾಗಿದೆ. ಇಲ್ಲಿನ ಸನ್ನಿವೇಶ ಭಯಾನಕವಾಗಿದೆ ಎಂದು ತಿಳಿಸಿದ್ದಾರೆ.
ಹೈಟಿ ಅಧ್ಯಕ್ಷರ ಹತ್ಯೆ: ಫ್ಲೋರಿಡಾ ನಿವಾಸಿ ಬಂಧನ, ಕೊಲೆಗಡುಕರಲ್ಲಿ ಬಹುತೇಕರು ವಿದೇಶಿಗರು!
ಮೋಟಾರ್‌ಸೈಕಲ್ ಟ್ಯಾಕ್ಸಿ ಒಂದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸಿದಾಗ ಚಾಲಕ ನಿಯಂತ್ರಣ ತಪ್ಪಿದ್ದರಿಂದ ಟ್ರಕ್ ಉರುಳಿ ಬಿದ್ದಿದೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ ಟ್ರಕ್‌ನಲ್ಲಿದ್ದ ಇಂಧನ ಟ್ಯಾಂಕರ್ ಒಡೆದಿದ್ದು, ಅದರಿಂದ ಗ್ಯಾಸ್ ಹೊರಬರತೊಡಗಿದೆ. ಸುತ್ತಮುತ್ತಲಿನ ಜನರು ಕೂಡಲೇ ಅದನ್ನು ಸಂಗ್ರಹಿಸಲು ಧಾವಿಸಿದ್ದಾರೆ. ಆಗ ಟ್ರಕ್ ಸ್ಫೋಟಗೊಂಡಿದೆ. ಹೈಟಿಯಲ್ಲಿ ಹಲವು ತಿಂಗಳಿನಿಂದ ಅನಿಲ ಕೊರತೆ ಇದೆ. ಹೀಗಾಗಿ ಗ್ಯಾಸೋಲಿನ್ ಸಂಗ್ರಹಿಸಲು ಜನರು ಹತಾಶೆಯಿಂದ ಮುಗಿಬಿದ್ದಿದ್ದರು.

ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಸುಮಾರು 40 ಮನೆಗಳಿಗೆ ಕೂಡ ಹಾನಿಯಾಗಿದೆ. ಆದರೆ ಮನೆಗಳ ಒಳಗೂ ಜನರು ಮೃತಪಟ್ಟಿದ್ದಾರೆಯೇ ಎನ್ನುವುದು ಖಚಿತವಾಗಿಲ್ಲ. ಆಸ್ಪತ್ರೆಗಳು ಸುಟ್ಟ ಗಾಯಗಳಿಂದ ನರಳುತ್ತಿರುವ ಜನರಿಂದ ತುಂಬಿಕೊಂಡಿವೆ. ಸುಮಾರು 40 ಮಂದಿಯ ಸ್ಥಿತಿ ಬಹಳ ಗಂಭೀರವಾಗಿದೆ. ಅವರ ದೇಹಗಳು ಶೇ 60ಕ್ಕೂ ಹೆಚ್ಚು ಭಾಗ ಸುಟ್ಟುಹೋಗಿವೆ.



Read more