ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆಎಸ್ ಈಶ್ವರಪ್ಪ, ಪಕ್ಷದೊಳಗೆ ಅವರ ಹೆಜ್ಜೆಯ ಧೂಳು ಕೂಡ ತಗೆದುಕೊಳ್ಳುವುದಿಲ್ಲ. ಸಿಎಂ ಇಬ್ರಾಹಿಂ ಏನು ಎಂಬುದು ನನಗೆ ಗೊತ್ತಿದೆ. ಅವರು ಎಷ್ಟರ ಮಟ್ಟಿಗೆ ಅನ್ಯಾಯ ಮಾಡಿದ್ದಾರೆ ಎನ್ನುವುದೂ ಗೊತ್ತು. ಅವರಿಗೆ ಮಂತ್ರಿಮಂಡಲದಿಂದ ತೆಗೆಯುವವರೆಗೆ ಬಿಜೆಪಿ ಹೋರಾಟ ಮಾಡಿತ್ತು. ಬಿಜೆಪಿಯ ಒತ್ತಾಯದಿಂದಲೇ ಅವರನ್ನು ಕಿತ್ತೆಸೆಯಲಾಗಿತ್ತು ಎಂದರು.
ಭದ್ರಾವತಿಯಲ್ಲಿ ಅವರ ಅಣ್ಣ- ತಮ್ಮಂದಿರು ಏನೇನು ಅನ್ಯಾಯ ಮಾಡಿದ್ದಾರೆ ಎಂಬುದು ಜಿಲ್ಲೆಯ, ರಾಜ್ಯದ ಜನರಿಗೆ ಗೊತ್ತಿದೆ. ಹೀಗಾಗಿ, ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಇದುವರೆಗೂ ಅವರೇನೂ ನಮ್ಮ ಪಕ್ಷಕ್ಕೆ ಬರುತ್ತೇನೆ ಅಂತನೂ ಹೇಳಿಲ್ಲ ಎಂದು ಈಶ್ವರಪ್ಪ ಹೇಳಿದರು.
ಹಿಜಾಬ್- ಕೇಸರಿ ಶಾಲು ವಿವಾದ :
ಉಡುಪಿ, ಭದ್ರಾವತಿ ಸೇರಿದಂತೆ ಕೆಲವು ಕಾಲೇಜುಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ‘ನಮ್ಮ ರಾಜ್ಯದಲ್ಲಿ ಹಿಂದೂ- ಮುಸ್ಲಿಂ ಬಾಂಧವರು ಅಣ್ಣ ತಮ್ಮಂದಿರಂತೆ ಒಟ್ಟಾಗಿ ಬದುಕುತ್ತಿರುವ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಗೊಂದಲ ಉಂಟು ಮಾಡುವ ಪ್ರಯತ್ನ ನಡೆಯುತ್ತಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಯಾ ಶಾಲೆ ಕಾಲೇಜುಗಳ ಆಡಳಿತ ಮಂಡಳಿಗಳು ಸೂಕ್ತ ನಿರ್ಧಾರ ಕೈಗೊಂಡು ತಮ್ಮ ಕರ್ತವ್ಯ ನಿರ್ವಹಿಸಬೇಕು’ ಎಂದರು.
ಸಿಟ್ಟು ಕಡಿಮೆಯಾದ ಮೇಲೆ ಇಬ್ರಾಹಿಂ ಭೇಟಿ ಎಂದ ಸಿದ್ದು
ಬೆಂಗಳೂರು: ‘ಸಿ.ಎಂ ಇಬ್ರಾಹಿಂ ನನ್ನ ಸ್ನೇಹಿತ. ಅವನು ಪಕ್ಷ ಬಿಡುವುದಿಲ್ಲವೆಂಬ ವಿಶ್ವಾಸವಿದೆ. ಸಿಟ್ಟು ಕಡಿಮೆಯಾದ ಬಳಿಕ ಅವನ ಮನೆಗೆ ಬಿರಿಯಾನಿ ತಿನ್ನಲು ಹೋಗುತ್ತೇನೆ. ನನಗಾಗಿ ಸ್ಪೆಷಲ್ ಬಿರಿಯಾನಿ ಮಾಡಿಸುತ್ತಾನೆ ಎಂದು ಸಿದ್ದರಾಮಯ್ಯ ಹೇಳಿದರು.
‘ಅವನು ನಮ್ಮ ಪಕ್ಷದಲ್ಲಿದ್ದರೂ ನನ್ನ ಸ್ನೇಹಿತ. ಪಕ್ಷ ಬಿಟ್ಟರೂ ನನ್ನ ಸ್ನೇಹಿತ. ಅವನು ಇಲ್ಲಿದ್ದರೂ, ಇಲ್ಲದಿದ್ದರೂ ನಾನು ಅವನ ಮನೆಗೆ ಬಿರಿಯಾನಿ ತಿನ್ನಲು ಹೋಗುತ್ತೇನೆ. ರಾಜಕೀಯ ಬೇರೆ, ವೈಯಕ್ತಿಕ ಸಂಬಂಧ ಬೇರೆ. ಸ್ವಲ್ಪ ಸಿಟ್ಟು ಕಡಿಮೆಯಾಗಲಿ ಎಂದು ಕಾಯುತ್ತಿದ್ದೇನೆ ಎಂದು ತಿಳಿಸಿದರು. ಹಿಜಾಬ್ ವಿವಾದ ಹಾಗೂ ಪೆನ್ನಾರ್- ಕಾವೇರಿ ನದಿ ಜೋಡಣೆ ಯೋಜನೆ ಬಗ್ಗೆ ಪ್ರತಿಕ್ರಿಯಿಸಿ, ಈ ಕುರಿತು ಮಾತನಾಡಲು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸುತ್ತೇನೆ. ನದಿ ಜೋಡಣೆಯಿಂದಾಗುವ ಸಾಧಕ-ಬಾಧಕಗಳ ಬಗ್ಗೆ ವಿವರಣೆ ನೀಡುತ್ತೇನೆ ಎಂದು ಹೇಳಿದರು.
Read more
[wpas_products keywords=”deal of the day sale today offer all”]