Online Desk
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ದೆಹಲಿಗೆ ತೆರಳಲು ನಿರ್ಧರಿಸಿದ್ದಾರೆ. ಇದರ ಬೆನ್ನಲ್ಲೇ ಸಚಿವಾಕಾಂಕ್ಷಿಗಳಲ್ಲಿ ಸಂಪುಟ ಸೇರುವ ಆಸೆ ಗರಿಗೆದರಿದ್ದು, ಮತ್ತೆ ತೆರೆ ಮರೆಯಲ್ಲಿ ಲಾಬಿ ಆರಂಭಿಸಿದ್ದಾರೆ.
ರಾಜ್ಯದ ಸಂಸದರ ಜೊತೆ ಮುಖ್ಯಮಂತ್ರಿ ಸಭೆ ನಡೆಸಲು ಸೋಮವಾರ ದೆಹಲಿಗೆ ತೆರಳಲು ನಿರ್ಧರಿಸಿದ್ದು, ಅದರ ಜೊತೆಗೆ ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಯ ಕೇಳಿದ್ದಾರೆ.
ಇದನ್ನು ಓದಿ: ಸೌಜನ್ಯದ ಭೇಟಿಯಷ್ಟೇ, ರಾಜಕೀಯ ಉದ್ದೇಶವಿಲ್ಲ: ಡಿಕೆ ಶಿವಕುಮಾರ್ ಭೇಟಿ ಬಗ್ಗೆ ಆನಂದ್ ಸಿಂಗ್ ಸ್ಪಷ್ಟನೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸದ ಕುರಿತು ಪ್ರಕಟಿಸುತ್ತಿರುವಂತೆ ರಾಜ್ಯದ ಸಚಿವಾಕಾಂಕ್ಷಿಗಳಲ್ಲಿ ಕನಸು ಚಿಗುರೊಡೆದಿದ್ದು, ವಿಧಾನಸಭೆಯ ಜಂಟಿ ಅಧಿವೇಶನಕ್ಕೂ ಮುನ್ನವೇ ಸಂಪುಟ ಪುನಾರಚನೆಯಾಗುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದು, ನಾಯಕರುಗಳ ಮೂಲಕ ಒತ್ತಡ ಹೇರುವ ಪ್ರಯತ್ನ ಆರಂಭಿಸಿದ್ದಾರೆ.
ಈ ಮಧ್ಯೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗುತ್ತದೆಯೋ ಇಲ್ಲವೋ ಎನ್ನುವ ಚರ್ಚೆಯೂ ಜೋರಾಗಿ ನಡೆದಿದೆ.
ಮಾಜಿ ಸಿಎಂ ಯಡಿಯೂರಪ್ಪ ತಮ್ಮ ಪುತ್ರ ವಿಜಯೇಂದ್ರ ಅವರಿಗೆ ಈ ಬಾರಿ ಸಂಪುಟದಲ್ಲಿ ಅವಕಾಶ ನೀಡಬೇಕೆಂದು ಸ್ವತಃ ಯಡಿಯೂರಪ್ಪ ಅವರೇ ಸಿಎಂ ಬೊಮ್ಮಾಯಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದ್ದು, ಸಿಎಂ ದೆಹಲಿ ಭೇಟಿ ಸಂದರ್ಭದಲ್ಲಿ ವಿಜಯೇಂದ್ರಗೆ ಅವಕಾಶ ಕಲ್ಪಿಸುವ ಕುರಿತು ಚರ್ಚಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಿಎಂ ಬೊಮ್ಮಾಯಿ ಕೂಡ ವಿಜಯೇಂದ್ರ ಅವರ ಪರವಾಗಿದ್ದಾರೆ ಎನ್ನಲಾಗಿದ್ದು, ಈ ಬಾರಿ ವಿಸ್ತರಣೆಯಾದರೆ ಪಕ್ಷದ ಹೈಕಮಾಂಡ್ ತಮ್ಮ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸುವುದಿಲ್ಲ ಎಂಬ ನಿರೀಕ್ಷೆಯಲ್ಲಿ ವಿಜಯೇಂದ್ರ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪುನಾರಚನೆಯ ನಿರೀಕ್ಷೆ
ಬಹುತೇಕ ಸಚಿವಾಕಾಂಕ್ಷಿಗಳು ಸಂಪುಟ ಪುನಾರಚನೆಯಾಗಬೇಕೆಂದು ಒತ್ತಡ ಹೇರುತ್ತಿದ್ದು, ಅದೇ ನಿರೀಕ್ಷೆಯಲ್ಲಿ ಜಿಲ್ಲೆ, ಜಾತಿ ಹಾಗೂ ಪ್ರಾದೇಶಿಕತೆ ಲೆಕ್ಕಾಚಾರದಲ್ಲಿ ಈ ಬಾರಿ ಅವಕಾಶ ದೊರೆಯಬಹುದೆಂಬ ನಿರೀಕ್ಷೆಯಲ್ಲಿ ಅನೇಕ ಸಚಿವಾಕಾಂಕ್ಷಿಗಳಿದ್ದಾರೆ.
ಈಗಿರುವ ಲೆಕ್ಕಾಚಾರದಲ್ಲಿ ನಾಲ್ಕು ಸ್ಥಾನಗಳು ಖಾಲಿ ಇದ್ದು, ಕನಿಷ್ಟ 10-12 ಹಾಲಿ ಸಚಿವರನ್ನು ಕೈ ಬಿಡಬೇಕೆಂಬ ಒತ್ತಡವನ್ನು ಸಚಿವಾಕಾಂಕ್ಷಿಗಳು ಹೊಂದಿದ್ದಾರೆ. ಅಲ್ಲದೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಸಂಪುಟದ ಅರ್ಧದಷ್ಟು ಸಚಿವರು ನಿಷ್ಕ್ರೀಯರಾಗಿದ್ದು, ಶಾಸಕರ ಅಹವಾಲುಗಳಿಗೆ ಸ್ಪಂದಿಸುವುದಿಲ್ಲ ಎಂದು ಹೈಕಮಾಂಡ್ ನಾಯಕರಿಗೆ ದೂರು ಸಲ್ಲಿಸಿದ್ದಾರೆ. ಅವರ ದೂರಿಗೆ ಪ್ರತಿಯಾಗಿ ಅನೇಕ ಸಚಿವರು ರೇಣುಕಾಚಾರ್ಯ ವಿರುದ್ಧವೂ ಆರೋಪ ಮಾಡಿದ್ದಾರೆ ಎನ್ನಲಾಗಿದೆ. ಅದೇ ಕಾರಣಕ್ಕೆ ಪಕ್ಷದ ಹೈಕಮಾಂಡ್ ರೇಣುಕಾಚಾರ್ಯಗೆ ದೆಹಲಿಗೆ ಬರುವಂತೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕೆಲವು ಸಚಿವರಿಗೆ ಕೊಕ್
ಪಕ್ಷದ ಮೂಲಗಳ ಪ್ರಕಾರ ಕನಿಷ್ಠ ಐದರಿಂದ ಆರು ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಂಪುಟ ವಿಸ್ತರಣೆ ಬದಲು ಪುನಾರಚನೆಯಾದರೆ ಹೆಚ್ಚಿನ ಜನರಿಗೆ ಅವಕಾಶ ದೊರೆಯುತ್ತದೆ ಎನ್ನುವುದು ಸಚಿವಾಕಾಂಕ್ಷಿಗಳ ಬಯಕೆಯಾಗಿದೆ.
ಹೈಕಮಾಂಡ್ ಗ್ರೀನ್‌ಸಿಗ್ನಲ್?
ಪ್ರಸ್ತುತ ದೇಶದಲ್ಲಿ ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳು ವಿಧಾನಸಭೆಗಳಿಗೆ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಹೈಕಮಾಂಡ್ ಅಲ್ಲಿ ಸಕ್ರೀಯವಾಗಿದ್ದು, ಬೇರೆ ಯಾವುದೇ ರಾಜ್ಯಗಳ ಚಟುವಟಿಕೆಗಳ ಕುರಿತು ಚರ್ಚಿಸುವುದು ಅನುಮಾನ ಎಂಬ ಮಾತುಗಳು ಕೇಳಿ ಬರುತ್ತಿವೆ.
ಆದರೆ, ಪಕ್ಷದ ಉನ್ನತ ಮೂಲಗಳ ಪ್ರಕಾರ ಈಗಾಗಲೇ ಬಿಜೆಪಿ ಹೈಕಮಾಂಡ್ ಸಂಪುಟ ಪುನಾರಚನೆಗೂ ಪಂಚರಾಜ್ಯಗಳ ಚುನಾವಣೆಗೂ ಸಂಬಂಧ ಕಲ್ಪಿಸದೇ ಮುಂದುವರೆಯುವಂತೆ ರಾಜ್ಯದ ನಾಯಕರಿಗೆ ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಆದರೆ, ಪ್ರಸ್ತುತ ಫೆಬ್ರವರಿ 14 ರಿಂದ ವಿಧಾನ ಮಂಡಲದ ಜಂಟಿ ಅಧಿವೇಶನ ಆರಂಭವಾಗಲಿದ್ದು, ಈ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಸಿದ್ದತೆಯಲ್ಲಿ ತೊಡಗಿಕೊಳ್ಳಲಿದ್ದಾಾರೆ. ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಅಧಿವೇಶನ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಸಂಪುಟ ಪುನಾರಚನೆಗೆ ಮುಂದಾಗುವ ಸಾಧ್ಯತೆ ಕಡಿಮೆ ಎಂಬ ಮಾತುಗಳು ಮುಖ್ಯಮಂತ್ರಿಗಳ ವಲಯದಿಂದ ಕೇಳಿ ಬರುತ್ತಿವೆ.
ಸಚಿವಾಕಾಂಕ್ಷಿಗಳು
ಅನೇಕ ಹಿರಿಯ ಶಾಸಕರು ಸಂಪುಟದಲ್ಲಿ ಸೇರುವ ಕನಸು ಕಾಣುತ್ತಿದ್ದು, ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಎಂ.ಪಿ. ಕುಮಾರಸ್ವಾಾಮಿ, ರಾಜು ಗೌಡ, ಪಿ. ರಾಜೀವ, ಕೆ.ಜಿ. ಭೋಪಯ್ಯ, ತಿಪ್ಪಾರೆಡ್ಡಿ, ಅಪ್ಪಚ್ಚು ರಂಜನ್, ದತ್ತಾತ್ರೆಯ ಪಾಟೀಲ್, ರಾಜಕುಮಾರ್ ತೇಲ್ಕೂರ್, ಶಿವನಗೌಡ ನಾಯಕ್, ಅಭಯ್ ಪಾಟೀಲ್, ಅರವಿಂದ ಬೆಲ್ಲದ್, ಮಾಡಾಳು ವಿರೂಪಾಕ್ಷಪ್ಪ, ಪೂರ್ಣಿಮಾ ಶ್ರೀನಿವಾಸ್, ರಘುಪತಿ ಭಟ್, ಎ. ರಾಮದಾಸ್, ಸಿ.ಪಿ. ಯೋಗೇಶ್ವರ್, ಎನ್. ಮಹೇಶ್ ಸಂಪುಟ ಸೇರಲು ತೆರೆ ಮರೆಯ ಕಸರತ್ತು ಆರಂಭಿಸಿದ್ದಾರೆ.
ಇನ್ನೊಂದೆಡೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಗಾದರೂ ಮಾಡಿ ಸಚಿವ ಸಂಪುಟ ಸೇರಬೇಕೆಂದು ಕಸರತ್ತು ನಡೆಸಿದ್ದಾರೆ. ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳದಂತೆ ಬೆಳಗಾವಿ ಉಳಿದ ಮುಖಂಡರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
Read more
[wpas_products keywords=”deal of the day”]