Karnataka news paper

ಹೀನಾಯ ಸೋಲಿನ ಬೇಸರದಲ್ಲಿದ್ದ ಇಂಗ್ಲೆಂಡ್‌ಗೆ ಮತ್ತೊಂದು ಆಘಾತ!


ಹೈಲೈಟ್ಸ್‌:

  • ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ನಡುವಣ 5 ಪಂದ್ಯಗಳ ಆಶಷ್‌ ಟೆಸ್ಟ್‌ ಸರಣಿ.
  • ಆರಂಭಿಕ ಟೆಸ್ಟ್‌ ಪಂದ್ಯದಲ್ಲಿ 9 ವಿಕೆಟ್‌ಗಳಿಂದ ಗೆದ್ದು ಆಸ್ಟ್ರೇಲಿಯಾ ಶುಭಾರಂಭ.
  • ಸ್ಲೋ ಓವರ್‌ ರೇಟ್‌ನಿಂದಾಗಿ ಇಂಗ್ಲೆಂಡ್‌ ತಂಡಕ್ಕೆ ಶೇ. 100 ರಷ್ಟು ದಂಡ ವಿಧಿಸಲಾಗಿದೆ.

ಬ್ರಿಸ್ಬೇನ್‌: ಆಸ್ಟ್ರೇಲಿಯಾ ವಿರುದ್ಧ ಆಶಷ್‌ ಟೆಸ್ಟ್ ಸರಣಿಯ ಆರಂಭಿಕ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‌ನಿಂದಾಗಿ ಇಂಗ್ಲೆಂಡ್‌ ತಂಡಕ್ಕೆ ಸಂಭಾವನೆಯಲ್ಲಿ ಶೇ 100 ರಷ್ಟು ದಂಡ ಹಾಗೂ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಐದು ಅಂಕಗಳನ್ನು ಕಡಿತಗೊಳಿಸಲಾಗಿದೆ. ಆ ಮೂಲಕ ಹೀನಾಯ ಸೋಲಿನ ಬೇಸರದಲ್ಲಿದ್ದ ಪ್ರವಾಸಿ ತಂಡಕ್ಕೆ ಮತ್ತೊಂದು ಆಘಾತವಾಗಿದೆ.

ಇಲ್ಲಿನ ದಿ ಗಬ್ಬಾ ಕ್ರೀಡಾಂಗಣದಲ್ಲಿ ಶನಿವಾರ ಅಂತ್ಯವಾಗಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 9 ವಿಕೆಟ್‌ಗಳಿಂದ ಗೆಲುವು ಪಡೆದಿತ್ತು ಹಾಗೂ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ಯಾಟ್‌ ಕಮಿನ್ಸ್ ಪಡೆ 1-0 ಮುನ್ನಡೆ ಪಡೆಯಿತು. ಪಂದ್ಯ ಮುಗಿದ ಬೆನ್ನಲ್ಲೆ ನಿಧಾನಗತಿಯ ಬೌಲಿಂಗ್‌ ಕಾರಣದಿಂದ ಐಸಿಸಿ ಅಧಿಕಾರಿಗಳು ಜೋ ರೂಟ್‌ ನಾಯಕತ್ವದ ಇಂಗ್ಲೆಂಡ್‌ ತಂಡಕ್ಕೆ ದಂಡ ವಿಧಿಸಿದ್ದಾರೆ.

ಇದರ ಜೊತೆಗೆ ಐಸಿಸಿ ಕೋಡ್‌ ಆಫ್‌ ಕಂಡಕ್ಟ್‌ನ ಮೊದಲನೇ ಹಂತದ ನಿಯಮವನ್ನು ಉಲ್ಲಂಘಿಸಿದ ಕಾರಣ ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್‌ಮನ್‌ ಟ್ರಾವಿಡ್‌ ಹೆಡ್‌ ಅವರಿಗೂ ಪಂದ್ಯದ ಸಂಭಾವನೆಯಲ್ಲಿ ಶೇ. 15 ರಷ್ಟು ದಂಡವನ್ನು ವಿಧಿಸಲಾಗಿದೆ. ಪಂದ್ಯದ 77ನೇ ಓವರ್‌ನಲ್ಲಿ ಬೆನ್‌ ಸ್ಟೋಕ್ಸ್‌ ಎಸೆತವನ್ನು ಟ್ರಾವಿಸ್‌ ಅವರಿಂದ ಆಡಲು ಆಗಿರಲಿಲ್ಲ. ಈ ವೇಳೆ ಹೆಡ್‌, ಅವಾಚ್ಯ ಪದಗಳನ್ನು ಬಳಿಸಿದ್ದರು. ಹಾಗಾಗಿ, ದಂಡದ ಜೊತೆಗೆ ಅವರಿಗೆ ಒಂದು ಡೀಮೆರಿಟ್‌ ಅಂಕವನ್ನು ನೀಡಲಾಗಿದೆ.

ಬ್ಯಾಟಿಂಗ್‌ ವೈಫಲ್ಯಕ್ಕೆ ದುಬಾರಿ ಬೆಲೆ ತೆತ್ತ ಇಂಗ್ಲೆಂಡ್‌, ಆಸ್ಟ್ರೇಲಿಯಾ ಶುಭಾರಂಭ!

ಪಂದ್ಯದ ಬಳಿಕ ತಮ್ಮ ಅಪಾರಾಧವನ್ನು ಟ್ರಾವಿಸ್‌ ಹೆಡ್‌ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಔಪಚಾರಿಕ ವಿಚಾರಣೆಯನ್ನು ಕೈ ಬಿಡಲಾಗಿದೆ. ಇನ್ನು ಇದೇ ಪಂದ್ಯದಲ್ಲಿ ಶತಕ ಸಿಡಿಸಿ ಆಸ್ಟ್ರೇಲಿಯಾ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಟ್ರಾವಿಸ್‌ ಹೆಡ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಇಂಗ್ಲೆಂಡ್‌ ವಿರುದ್ಧ 9 ವಿಕೆಟ್‌ಗಳಿಂದ ಗೆದ್ದ ಆಸ್ಟ್ರೇಲಿಯಾ

ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡರಲ್ಲೂ ಸಂಘಟಿತ ಪ್ರದರ್ಶನ ತೋರಿದ ಆಸ್ಟ್ರೇಲಿಯಾ ತಂಡ ಆಶಷ್‌ ಟೆಸ್ಟ್‌ ಸರಣಿಯ ಆರಂಭಿಕ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್‌ ವಿರುದ್ಧ ಇನ್ನೂ ಒಂದು ದಿನ ಬಾಕಿ ಇರುವಾಗಲೇ 9 ವಿಕೆಟ್‌ ಭರ್ಜರಿ ಗೆಲುವು ಪಡೆಯಿತು.

326 ದಿನಗಳ ಸುದೀರ್ಘ ಕಾಯುವಿಕೆಗೆ ಅಂತ್ಯವಾಡಿ ದಾಖಲೆ ಬರೆದ ಲಯಾನ್‌!

ಇಲ್ಲಿನ ದಿ ಗಬ್ಬಾ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ತಂಡದ ಗೆಲುವಿನಲ್ಲಿ ನೇಥನ್‌ ಲಯಾನ್‌, ನಾಯಕ ಪ್ಯಾಟ್‌ ಕಮಿನ್ಸ್‌, ಡೇವಿಡ್‌ ವಾರ್ನರ್‌ ಹಾಗೂ ಟ್ರಾವಿಸ್‌ ಹೆಡ್‌ ಮಹತ್ತರ ಪಾತ್ರವಹಿಸಿದರು. ಈ ಪಂದ್ಯದ ಗೆಲುವಿನೊಂದಿಗೆ ಆತಿಥೇಯ ಆಸ್ಟ್ರೇಲಿಯಾ ತಂಡ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು.

ಶನಿವಾರ ಬೆಳಗ್ಗೆ ಎರಡು ವಿಕೆಟ್‌ ನಷ್ಟಕ್ಕೆ 220 ರನ್‌ ಗಳೊಂದಿಗೆ ನಾಲ್ಕನೇ ದಿನ ಆರಂಭಿಸಿದ ಇಂಗ್ಲೆಂಡ್‌ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 103 ಓವರ್‌ಗಳಿಗೆ 297 ವಿಕೆಟ್‌ಗಳಿಗೆ ಆಲೌಟ್‌ ಆಯಿತು. ಆ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಕೇವಲ 20 ರನ್‌ ಗುರಿ ನೀಡಿತ್ತು. ಬಳಿಕ ಗುರಿ ಹಿಂಬಾಲಿಸಿದ ಆಸ್ಟ್ರೇಲಿಯಾ 5.1 ಓವರ್‌ಗಳಿಗೆ ಒಂದು ವಿಕೆಟ್‌ ನಷ್ಟಕ್ಕೆ ಗೆಲುವಿನ ದಡ ಸೇರಿತು.

ಪದಾರ್ಪಣೆ ಟೆಸ್ಟ್‌ ಪಂದ್ಯದಲ್ಲಿಯೇ ಪಂತ್‌ ದಾಖಲೆ ಮುರಿದ ಅಲೆಕ್ಸ್‌ ಕೇರಿ!

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ನಡುವಿನ ಎರಡನೇ ಟೆಸ್ಟ್‌ ಪಂದ್ಯ ಡಿಸೆಂಬರ್ ೧೬ ರಿಂದ ಅಡಿಲೇಡ್‌ ಓವಲ್‌ನಲ್ಲಿ ಆರಂಭವಾಗಲಿದೆ. ಪಂದ್ಯದ ಸೋಲಿನ ಮೂಲಕ ಕೇವಲ 14 ಅಂಕಗಳನ್ನು ಹೊಂದಿರುವ ಇಂಗ್ಲೆಂಡ್‌ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಪಾಯಿಂಟ್ಸ್‌ ಟೇಬಲ್‌ನಲ್ಲಿ 6ನೇ ಸ್ಥಾನಕ್ಕೆ ಕುಸಿದಿದೆ.



Read more

Leave a Reply

Your email address will not be published. Required fields are marked *