Karnataka news paper

ಅಂಧ ಮಕ್ಕಳಿಗೆ ಬ್ರೈಲ್‌ ಲಿಪಿ ಪಠ್ಯ ಪೂರೈಸಿ: ಹೈಕೋರ್ಟ್


ಬೆಂಗಳೂರು: ’ಅಂಧ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಬ್ರೈಲ್ ಲಿಪಿ ಪಠ್ಯ ಪುಸ್ತಕಗಳನ್ನು ಇ-ಪಬ್ 3 ಮಾದರಿಯಲ್ಲಿ ಪರಿವರ್ತಿಸಿ ಪೂರೈಸುವ ಕಾರ್ಯವನ್ನು ಇನ್ನೆರಡು ತಿಂಗಳಲ್ಲಿ ಪೂರ್ಣಗೊಳಿಸಿ‘ ಎಂದು ಹೈಕೋರ್ಟ್ ಆದೇಶಿಸಿದೆ.

ಈ ಕುರಿತಂತೆ, ‘ದಿ ನ್ಯಾಷನಲ್ ಫೆಡರೇಷನ್ ಆಫ್ ದಿ ಬ್ಲೈಂಡ್’ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಸರ್ಕಾರಿ ವಕೀಲೆ ಎಚ್.ವಾಣಿ, ’ಅಂಧ ವಿದ್ಯಾರ್ಥಿಗಳಿಗೆ ರಾಜ್ಯ ಪಠ್ಯಕ್ರಮದ 1ರಿಂದ 10ನೇ ತರಗತಿಯ 132 ಬ್ರೈಲ್ ಲಿಪಿಯ ಪಠ್ಯ ಪುಸ್ತಕಗಳನ್ನುಇ-ಪಬ್ 3 ಮಾದರಿಯಲ್ಲಿ ಕರ್ನಾಟಕ ಪಠ್ಯಪುಸ್ತಕ ಸೊಸೈಟಿಯ (ಕೆಟಿಬಿಎಸ್) ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಉಳಿದ 403  ಪುಸ್ತಕಗಳನ್ನು ಇ-ಪಠ್ಯಕ್ಕೆ ಪರಿವರ್ತಿಸಿ ಅಪ್‌ಲೋಡ್ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗುವುದರೊಳಗೆ ಆ ಕಾರ್ಯವನ್ನೂ ಪೂರ್ಣಗೊಳಿಸಲಾಗುವುದು‘ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ’ಅಷ್ಟೊಂದು ಸಮಯ ನೀಡಲಾಗದು. ಎರಡು ತಿಂಗಳಲ್ಲಿ ಪೂರೈಸಿ‘ ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿದೆ.

1,692 ಅಂಧ ವಿದ್ಯಾರ್ಥಿಗಳು: ’ಕೋರ್ಟ್‌ ಆದೇಶದಂತೆ ರಾಜ್ಯದಲ್ಲಿ ಅಂಧ (ದೃಷ್ಟಿ ಚೇತನರು) ವಿದ್ಯಾರ್ಥಿಗಳ ಸಮೀಕ್ಷೆ ನಡೆಸಲಾಗಿದ್ದು, ಒಟ್ಟು 1,692 ಅಂಧ ವಿದ್ಯಾರ್ಥಿಗಳಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ 145, ಅನುದಾನರಹಿತ ಶಾಲೆಗಳಲ್ಲಿ 533 ಮತ್ತು ಖಾಸಗಿ ಶಾಲೆಗಳಲ್ಲಿ 1,014 ವಿದ್ಯಾರ್ಥಿಗಳಿದ್ದಾರೆ’ ಎಂದು ಸರ್ಕಾರಿ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.



Read more from source

[wpas_products keywords=”deal of the day sale today kitchen”]