Online Desk
ಸಂದರ್ಶನ: ಹರ್ಷವರ್ಧನ್ ಸುಳ್ಯ
ಬಹುಭಾಷಾ ನಟ ಪ್ರಕಾಶ್ ಬೆಳವಾಡಿ ಅಭಿನಯದ ‘ಒನ್ ಕಟ್ ಟೂ ಕಟ್’ ಸಿನಿಮಾ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿದೆ. ಈ ಪ್ರಯುಕ್ತ ಅವರೊಂದಿಗೆ Kannadaprabha.com ನಡೆಸಿದ ಸಂದರ್ಶನ ಇಲ್ಲಿದೆ.
ಈಗೀಗ ಯಾವ ಭಾಷೆಯ ಸಿನಿಮಾ ನೋಡೋಣಾ ಅಂತ ಕುಳಿತರೂ
ಅದರಲ್ಲಿ ನೀವಿರುತ್ತೀರಿ…
(ನಗು) ಪೂರ್ಣಪ್ರಮಾಣದಲ್ಲಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ದಿನಗಳಲ್ಲಿ ತೆರೆಮರೆಯ ಕೆಲಸಗಳಲ್ಲಿಯೇ ಹೆಚ್ಚು ತೊಡಗಿಕೊಳ್ಳುತ್ತಿದ್ದೆ. ಕಳೆದ ಒಂದು ದಶಕದಿಂದೀಚಿಗೆ ಹೆಚ್ಚೆಚ್ಚು ಸಿನಿಮಾ ಅವಕಾಶಗಳು ಬರಲು ಶುರುವಾಗಿದ್ದು. ಎಲ್ಲಾ ಶುರುವಾಗಿದ್ದು ‘ಮದ್ರಾಸ್ ಕೆಫೆ’ ಬಾಲಿವುಡ್ ಸಿನಿಮಾದಿಂದ ಅಂತ ಹೇಳಬಹುದು.
ಒನ್ ಕಟ್ ಟೂ ಕಟ್ ಸಿನಿಮಾ ಅನುಭವ ಹೇಗಿತ್ತು
ದಾನಿಶ್ ಸೇಟ್, ನಿರ್ದೇಶಕ ವಂಸೀಧರ್ ಸೇಟ್ ಇನ್ನೂ ಯುವಕರು. ಯಂಗ್ ಮೈಂಡ್ ಗಳೊಂದಿಗೆ ಕೆಲಸ ಮಾಡೋದು ಯಾವತ್ತೂ ನನಗೆ ಖುಷಿ ಕೊಡೋ ವಿಚಾರ. ಈಗಿನ ಪೀಳಿಗೆಯವರು ಎಲ್ಲವನ್ನೂ ಡೌಟ್ ಫುಲ್ಲಾಗಿ ನೋಡ್ತಾರೆ. ಹಿಂದಿನವರ ಥರ ಯಾವುದೇ ಸಿದ್ಧಾಂತಕ್ಕೆ ಕಟ್ಟುಬಿದ್ದಿರುವುದಿಲ್ಲ. ಅದಕ್ಕೇ ನನಗೆ ಇಷ್ಟ. ಒನ್ ಕಟ್ ಟೂ ಕಟ್ ಸಿನಿಮಾ ಒಳ್ಳೆಯ ಪ್ರಯೋಗಾತ್ಮಕ ಸಿನಿಮಾ. ದಾನಿಶ್ ರೇಡಿಯೊ ಜಾಕಿಯಾಗಿದ್ದಾಗಿನಿಂದಲೂ ನಾನು ಆತನ ಫ್ಯಾನ್. ಈ ಥರದ ಹೊಸ ಪ್ರಾಜೆಕ್ಟ್ ಮತ್ತು ಹೊಸಬರ ತಂಡದ ಸಾಹಸಕ್ಕೆ ಪ್ರೋತ್ಸಾಹ ನೀಡಿದ್ದು ಪುನೀತ್ ರಾಜ್ ಕುಮಾರ್, ಅಶ್ವಿನಿ ರಾಜ್ ಕುಮಾರ್ ಅವರ ಪಿ ಆರ್ ಕೆ ಸಂಸ್ಥೆಯ ಹೆಗ್ಗಳಿಕೆ. ಅವರಿಗೆ ನಾನು ಥ್ಯಾಂಕ್ ಫುಲ್.
ನಿರ್ದೇಶಕರು ತಮ್ಮ ಸಿನಿಮಾದಲ್ಲಿ ನಿಮ್ಮನ್ನು ಏಕೆ ಹಾಕಿಕೊಳ್ಳುತ್ತಾರೆ?
ಈ ಪ್ರಶ್ನೆಗೆ ಖಚಿತ ಉತ್ತರ ಸಿಕ್ಕಿದ್ದರೆ ನನಗೂ ತುಂಬಾ ಸಹಾಯವಾಗುತ್ತಿತ್ತು. ಯಾವುದೇ ಒಂದು ಸಿನಿಮಾ ಯಾವ ಕಾರಣಕ್ಕೆ ಹಿಟ್ ಆಯಿತು ಎಂದು ಹೇಳುವುದು ಎಷ್ಟು ಕಷ್ಟವೋ. ಹಾಗೇ ಇದೂ ಕೂಡಾ. ನನಗೆ ಸಿಕ್ಕಿರುವ ಅವಕಾಶಗಳಲ್ಲಿ ಹೆಚ್ಚಿನವು ಫ್ಯಾಕ್ಷನ್, ಅಂದರೆ ನಿಜಘಟನೆಯನ್ನು ಆಧರಿಸಿದ ಸಿನಿಮಾಗಳು. ನೈಜತೆಗೆ ಹತ್ತಿರ ಇರುವ ಪಾತ್ರ ನಿರ್ವಹಿಸಬೇಕಾಗಿ ಬಂದಾಗ ನಿರ್ದೇಶಕರು ನನ್ನ ಬಳಿ ಬರುತ್ತಾರೆ ಎನ್ನುವುದು ನನ್ನ ಊಹೆ.
‘ಒನ್ ಕಟ್ ಟೂ ಕಟ್’ ಸೇರಿದಂತೆ ಹೆಚ್ಚಿನ ಸಿನಿಮಾಗಳಲ್ಲಿ ನೆಗೆಟಿವ್ ಶೇಡ್ ಇರೋ ಪಾತ್ರಗಳನ್ನ ಮಾಡಿದ್ದೀರಿ. ವಿಲನ್ ಆಗಿ ನಟಿಸುವುದನ್ನು ಎಂಜಾಯ್ ಮಾಡ್ತೀರಾ?
ನೀವು ಸೂಕ್ಷ್ಮವಾಗಿ ಗಮನಿಸಿದರೆ ನನ್ನ ಪಾತ್ರಗಳ ಬಗ್ಗೆ ಒಂದು ವಿಷಯವನ್ನು ಗಮನಿಸಬಹುದು. ನನ್ನ ಪಾತ್ರಗಳು ಪೂರ್ಣಪ್ರಮಾಣದ ವಿಲನ್ ಗಳಲ್ಲ. ಅಂದರೆ ಕ್ರೂರಿಗಳಲ್ಲ. ಪರಿಸ್ಥಿತಿಗಳಿಂದಾಗಿ ಕೆಟ್ಟವರಾಗುವ ಗ್ರೇ ಶೇಡ್ ಇರೋ ಪಾತ್ರಗಳು. ಆ ಪಾತ್ರಗಳ ಮನಸ್ಥಿತಿಯನ್ನು ಊಹಿಸಲು ಆಗುವುದಿಲ್ಲ. ಹೀಗಾಗಿ ಪ್ರೇಕ್ಷಕರಿಗೆ ಸರ್ಪ್ರೈಸ್ ಕೊಡುವ ಸಾಮರ್ಥ್ಯ ಆ ಪಾತ್ರಗಳಿಗೆ ಇರುತ್ತವೆ. ಅದು ನನಗೂ ಇಷ್ಟ.
ನಿಮ್ಮ ಅಭಿಮಾನಿ ಬಳಗದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರಾ? ಪುರುಷರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ?
ನಾನು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿಲ್ಲ. ಇನ್ ಸ್ಟಾಗ್ರಾಂ ನಲ್ಲಿ ಮಾತ್ರ ಆಗೀಗ ಅಪರೂಪಕ್ಕೆ ಸಿನಿಮಾಗಳ ಕುರಿತಾದ ವಿಚಾರ ಪೋಸ್ಟ್ ಮಾಡುತ್ತೇನೆ. ಹೀಗಾಗಿ ಅಭಿಮಾನಿಗಳು ಇದ್ದಾರೆ ಎನ್ನುವ ಬಗ್ಗೆಯೂ ಖಚಿತವಾಗಿ ಹೇಳಲು ನನಗೆ ಆಗಲ್ಲ.
ನೀವು ಕೆಲಸ ಮಾಡಲಿಚ್ಚಿಸುವ ನಿರ್ದೇಶಕರು, ನಟರ ಬಗ್ಗೆ ಹೇಳ್ತೀರಾ?
ಬಾಲಿವುಡ್ ನಲ್ಲಿ ನನಗೆ ಮೊದಲ ಬ್ರೇಕ್ ನೀಡಿದ ಮದ್ರಾಸ್ ಕೆಫೆ ಸಿನಿಮಾ ನಿರ್ದೇಶಕ ಶೂಜಿತ್ ಸರ್ಕಾರ್ ಜೊತೆ ಮತ್ತೆ ಕೆಲಸ ಮಾಡಬೇಕು ಅಂತ ಇಷ್ಟ. ಮೇಘನಾ ಗುಲ್ಜಾರ್, ಕನ್ನಡದಲ್ಲಿ ಸೂರಿ, ಸೂರರೈ ಪೊಟ್ರು ನಿರ್ದೇಶಕಿ ಸುಧಾ ಕೊಂಗರ ಪ್ರಸಾದ್, ಮಲಯಾಳಂನಲ್ಲಿ ಮಹೇಶ್ ನಾರಾಯಣನ್ ಅವರ ಜೊತೆ ಕೆಲಸ ಮಾಡಲು ಇಷ್ಟ. ಮಲಯಾಳಂ ಫಿಲಂ ಮೇಕರ್ ಗಳು ನೈಜತೆಗೆ ಒತ್ತು ಕೊಡುವ ಸಿನಿಮಾಗಳನ್ನು ಹೆಚ್ಚೆಚ್ಚು ಮಾಡ್ತಿದ್ದಾರೆ. ಅಲ್ಲಿನ ಯುವ ನಿರ್ದೇಶಕರ ಜೊತೆ ಕೆಲಸ ಮಾಡಬೇಕು ಅಂತ ಇದೆ. ದೊಡ್ಡ ಬಜೆಟ್ ಸಿನಿಮಾಗಳಲ್ಲಿ ನಟಿಸುವುದಕ್ಕಿಂತ ಮಿಗಿಲಾಗಿ ನೈಜತೆಗೆ ಒತ್ತು ನೀಡುವ ಸಿನಿಮಾಗಳಲ್ಲಿ ನಟಿಸಲು ನನಗೆ ಆಸಕ್ತಿ.
ರಂಗಭೂಮಿಯ ಹಿನ್ನೆಲೆಯವರಾದ ನೀವು ಸಿನಿಮಾರಂಗದಲ್ಲಿ ಜನಪ್ರಿಯತೆ ಗಳಿಸಿದ್ದೀರಿ. ಅದರ ಗುಟ್ಟೇನು?
ಸಿನಿಮಾರಂಗಕ್ಕೂ ರಂಗಭೂಮಿಗೂ ವ್ಯತ್ಯಾಸಗಳು ಇವೆ. ಇಲ್ಲವೆಂದು ಹೇಳಲ್ಲ. ಆದರೆ ಅವುಗಳಲ್ಲಿ ಟೆಕ್ನಿಕಲ್ ವ್ಯತ್ಯಾಸಗಳೇ ಹೆಚ್ಚು. ನಾಟಕದಲ್ಲಿ ರೀಟೇಕ್ ಇರಲ್ಲ. ಸ್ಕ್ರಿಪ್ಟ್ ನಲ್ಲಿ ಇರುವಂತೆಯೇ ಸೀನ್ ಬೈ ಸೀನ್ ನಟಿಸುತ್ತಾ ಹೋಗಬೇಕು. ಆದರೆ ಸಿನಿಮಾದಲ್ಲಿ ಯಾವ ಸೀನನ್ನು ಯಾವಾಗ ಬೇಕಾದರೂ ಶೂಟ್ ಮಾಡಬಹುದು. ಆರ್ಡರ್ ಇಲ್ಲ. ಒಬ್ಬ ಕಲಾವಿದನಿಗೆ ಅದು ದೊಡ್ಡ ಸವಾಲು ಕೂಡಾ. ಆಯಾ ಸೀನಿಗೆ ಅಗತ್ಯವಿರುವ ಮಾನಸಿಕ ತಯಾರಿಯನ್ನು ಆತ ಕಾಪಿಟ್ಟುಕೊಂಡಿರಬೇಕು.
ಸಿನಿಮಾದಿಂದ ಸಿನಿಮಾಗೆ ನೀವು ಯಂಗ್ ಆಗ್ತಾ ಇದ್ದೀರಿ, ಯುವ ನಿರ್ದೇಶಕರ ಜೊತೆ ಕೆಲಸ ಮಾಡುತ್ತಿರುವುದರ ಫಲವೇ ಅದು?
ಅದೂ ಒಂದು ಕಾರಣವಿರಬಹುದು. ಅದಕ್ಕಿಂತ ಸಮಂಜಸವಾದ ಕಾರಣವೂ ಇದೆ. ಹಿಂದೆ ರಂಗಭೂಮಿಯಲ್ಲಿದ್ದಾಗ ನಾನು ದುಡ್ಡಿನ ಮುಖ ನೋಡಿದವನೇ ಅಲ್ಲ. ಸಿನಿಮಾರಂಗಕ್ಕೆ ಬಂದಮೇಲೆಯೇ ದುಡ್ಡು ಕಂಡಿದ್ದು. ಹೀಗಾಗಿ ನಮ್ಮ ಮೇಲೆ ಸಿನಿಮಾ ತಯಾರಕರೊಬ್ಬರು ಹಣ ಹೂಡುತ್ತಿದ್ದಾರೆ ಎಂದರೆ ಆ ದುಡ್ಡಿಗೆ ಮೋಸ ಮಾಡಬಾರದು ಅನ್ನೋದು ಮನಸ್ಸಿಗೆ ಬಂದುಬಿಟ್ಟಿತು. ಅಲ್ಲಿಂದ ಡಯೆಟ್, ಫಿಟ್ನೆಸ್, ಒಳ್ಳೆ ನಿದ್ದೆ ಕಡೆ ಒಂಚೂರು ಗಮನಹರಿಸುತ್ತಿದ್ದೇನೆ.
ಒನ್ ಕಟ್ ಟೂ ಕಟ್ ಸಿನಿಮಾದಲ್ಲಿ ನಿಮ್ಮ ಸಹೋದರಿ ಸುಧಾ ಬೆಳವಾಡಿ ಪುತ್ರಿ ಸಂಯುಕ್ತಾ ಜೊತೆ ನಟಿಸಿದ್ದೀರಿ. ಆ ಅನುಭವ ಹೇಗಿತ್ತು?
ಸಂಯುಕ್ತಾ ಜೊತೆ ಆಕ್ಟ್ ಮಾಡೋದೇ ತುಂಬಾ ಕಷ್ಟವಾಗಿತ್ತು. ಇಬ್ಬರಲ್ಲೊಬ್ಬರಿಗೆ ನಗು ಬಂದುಬಿಡೋದು. ಆಮೇಲೆ ಅರ್ಧ ಗಂಟೆ ಶೂಟಿಂಗ್ ತಟಸ್ಥವಾಗಿಬಿಡೋದು. ದಾನಿಶ್ ಜೊತೆ ಸೀನ್ ಇದ್ದಾಗಲೂ ಅಷ್ಟೆ. ಅವರ ಮುಖಾಭಿಯ, ದನಿ ಕೇಳಿ ನಗು ಬರೋದು. ಹಿಂದೊಮ್ಮೆ ಸಾಧು ಕೋಕಿಲ ಜೊತೆ ಆಕ್ಟ್ ಮಾಡುವಾಗಲೂ ಹಾಗೇ ಆಗಿತ್ತು. ನನ್ನ ಮುಖ ನೋಡಿಕೊಂಡು ಡಯಲಾಗ್ ಹೇಳಬೇಡಿ ಅಂತ ರಿಕ್ವೆಸ್ಟ್ ಮಾಡಿಕೊಂಡಿದ್ದೆ. ಅಷ್ಟು ನಗು.
Read more…
[wpas_products keywords=”party wear dress for women stylish indian”]