ಹೈಲೈಟ್ಸ್:
- ಸೂರ್ಯನ ವಾಯುಮಂಡಲ ಪ್ರವೇಶಿಸಿದ ಪಾರ್ಕರ್ ಸೋಲಾರ್ ಪ್ರೋಬ್ ನೌಕೆ
- ಕೊರೊನಾ ಭಾಗದಲ್ಲಿನ ಕಣಗಳ ಮಾದರಿ ಸಂಗ್ರಹಿಸಿದ ನಾಸಾದ ನೌಕೆಯ ಸಾಧನೆ
- ಸೂರ್ಯನ ಹುಟ್ಟು, ಸೌರ ವ್ಯವಸ್ಥೆ ಮೇಲಿನ ಪರಿಣಾಮಗಳ ಅಧ್ಯಯನಕ್ಕೆ ಸಹಕಾರಿ
- ಮೂರು ವರ್ಷದ ಹಿಂದಿಗಿಂತ ಸೂರ್ಯನಿಗೆ ಹೆಚ್ಚು ಸಮೀಪಕ್ಕೆ ತೆರಳಿದ ನಾಸಾ
ಪಾರ್ಕರ್ ಸೋಲಾರ್ ಪ್ರೋಬ್ ನೌಕೆಯ ಈ ಐತಿಹಾಸಿಕ ಸಾಧನೆ ಸೌರ ವ್ಯವಸ್ಥೆಯ ರಚನೆ, ಉಗಮದ ಕುರಿತಾದ ಅಧ್ಯಯನಕ್ಕೆ ಮಹತ್ವದ ಮೈಲುಗಲ್ಲು ಆಗಲಿದೆ. ಚಂದ್ರನ ಅಂಗಳದಲ್ಲಿ ಕಾಲಿರಿಸುವ ಮೂಲಕ ಅದರ ಹುಟ್ಟು ಹಾಗೂ ರಚನೆಯ ಬಗ್ಗೆ ಅಧ್ಯಯನದಲ್ಲಿ ಮುಂದುವರಿಯಲು ವಿಜ್ಞಾನಿಗಳಿಗೆ ಸಾಧ್ಯವಾಗಿದೆ. ಈಗ ಭೂಮಿಗೆ ಅತಿ ಹತ್ತಿರವಿರುವ ನಕ್ಷತ್ರ, ಸುಡು ಸೂರ್ಯನ ಕುರಿತಾದ ಬಹಳ ಪ್ರಮುಖವಾದ ಮಾಹಿತಿಗಳು ಮತ್ತು ಸೌರ ವ್ಯವಸ್ಥೆಯಲ್ಲಿನ ಅದರ ಪ್ರಭಾವದ ಬಗ್ಗೆ ಅಧ್ಯಯನಕ್ಕೆ ನೆರವಾಗಲಿದೆ.
“ಪಾರ್ಕರ್ ಸೋಲಾರ್ ಪ್ರೋಬ್ ‘ಸೂರ್ಯನನ್ನು ಸ್ಪರ್ಶಿಸಿರುವುದು’ ಸೌರ ವಿಜ್ಞಾನದಲ್ಲಿ ಚಾರಿತ್ರಿಕ ಗಳಿಗೆಯಾಗಿದೆ. ಹಾಗೆಯೇ ನಿಜಕ್ಕೂ ಗಮನಾರ್ಹ ಸಾಧನೆಯಾಗಿದೆ” ಎಂದು ವಾಷಿಂಗ್ಟನ್‌ನಲ್ಲಿರುವ ನಾಸಾ (NASA) ಕೇಂದ್ರ ಕಚೇರಿಯ ಸೈನ್ಸ್ ಮಿಷನ್ ನಿರ್ದೇಶನಾಲಯದ ಸಹಾಯಕ ಆಡಳಿತಗಾರ ಥಾಮಸ್ ಜುರ್ಬುಚೆನ್ ಬಣ್ಣಿಸಿದ್ದಾರೆ.
“ಈ ಮೈಲುಗಲ್ಲು ನಮಗೆ ಸೂರ್ಯನ ವಿಕಸನ ಮತ್ತು ನಮ್ಮ ಸೌರ ವ್ಯವಸ್ಥೆ ಮೇಲಿನ ಅದರ ಪರಿಣಾಮಗಳ ಬಗ್ಗೆ ಆಳವಾದ ಒಳನೋಟಗಳನ್ನು ನೀಡುವುದು ಮಾತ್ರವಲ್ಲ, ಜತೆಗೆ ನಮ್ಮದೇ ನಕ್ಷತ್ರದ ಬಗ್ಗೆ ನಾವು ತಿಳಿದುಕೊಳ್ಳುವ ಪ್ರತಿ ಅಂಶವೂ ಸೌರ ಮಂಡಲದ ಉಳಿತ ಇನ್ನಷ್ಟು ನಕ್ಷತ್ರಗಳ ಬಗ್ಗೆ ತಿಳಿಯುವುದನ್ನೂ ಕಲಿಸುತ್ತದೆ” ಎಂದು ಹೇಳಿದ್ದಾರೆ.
ಪಾರ್ಕರ್ ನೌಕೆಯು ಸೌರ ಮೇಲ್ಮೈ ಸಮೀಪದಲ್ಲಿ ಸುತ್ತು ಹಾಕಿದಾಗ, ಇತರೆ ಬಾಹ್ಯಾಕಾರ ನೌಕೆಗಳು ಕಂಡುಕೊಳ್ಳಲು ಸಾಧ್ಯವಾಗಿರದ ಹೊಸ ವಿಷಯಗಳನ್ನು ಆವಿಷ್ಕರಿಸಿದೆ.