ಉಡುಪಿ: ಉಡುಪಿ ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿ 1,77,529 ಹಾಗೂ ನಗರ ಪ್ರದೇಶದಲ್ಲಿ 75,549 ಸಹಿತ ಒಟ್ಟು 2,53,078 ಕುಟುಂಬಗಳಿದ್ದರೆ, ವಾಹನಗಳ ಒಟ್ಟು ಸಂಖ್ಯೆ 4,90,179 ದಾಟಿದ್ದು, ಪ್ರತಿ ಕುಟುಂಬದ ಬಳಿ ಸರಾಸರಿ ಎರಡು ವಾಹನಗಳಿವೆ..!
2011ರ ಜನ ಗಣತಿ ಪ್ರಕಾರ 11.75 ಲಕ್ಷ ಜನ ಸಂಖ್ಯೆ ಹೊಂದಿದ ಉಡುಪಿ ಜಿಲ್ಲೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂದಾಜು ಪ್ರಕಾರ 2021ರಲ್ಲಿ ಹೆಚ್ಚುವರಿಯಾಗಿ 1.25 ಲಕ್ಷ ಜನರ ಸೇರ್ಪಡೆಯಾಗಿದೆ. ಪ್ರತಿ ವರ್ಷ ವಾಹನಗಳ ಸೇರ್ಪಡೆ ಸಂಖ್ಯೆ 15 ಸಾವಿರಕ್ಕೂ ಅಧಿಕವಿದೆ. 18 ವರ್ಷಕ್ಕಿಂತ ಮೇಲಿನ 9.50 ಲಕ್ಷ ಜನ ವಾಹನ ಚಲಾಯಿಸಲು ಅರ್ಹರಾಗಿದ್ದಾರೆ.
ಕುಂದಾಪುರಕ್ಕೆ ಎಆರ್‌ಟಿಒ ನನೆಗುದಿಗೆ: ಕುಂದಾಪುರ, ಬೈಂದೂರು ತಾಲೂಕಿನ ಜನತೆ ಉಡುಪಿಗೆ ಬಂದು ಹೋಗುವ ತಾಪತ್ರಯ ತಪ್ಪಿಸಲು ಕುಂದಾಪುರದಲ್ಲೂ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ (ಎಆರ್‌ಟಿಒ) ತೆರೆಯಬೇಕೆನ್ನುವ ಇಲಾಖಾ ಪ್ರಸ್ತಾವನೆ, ಜನರ ಬೇಡಿಕೆಗೆ 4 ವರ್ಷಗಳಿಂದ ಸರಕಾರದಿಂದ ಸ್ಪಂದನೆಯಿಲ್ಲ.
ವಾರ್ಷಿಕ ಸರಾಸರಿ 5,413 ವಾಹನಗಳಂತೆ ಒಟ್ಟು 1,29,900 ವಾಹನಗಳು ಕುಂದಾಪುರ, ಬೈಂದೂರು ವ್ಯಾಪ್ತಿಯಲ್ಲಿ ನೋಂದಣಿಯಾಗಿದ್ದು, ಎಆರ್‌ಟಿಒ ಕಚೇರಿ ಆರಂಭಕ್ಕೆ ಬೇಕಾದ ಮಾನದಂಡಗಳಿಗೆ ಅನುಗುಣವಾಗಿದೆ. ರಾಜ್ಯದ 31 ಜಿಲ್ಲೆಗಳಲ್ಲಿ ಈಗಾಗಲೇ 70 ಆರ್‌ಟಿಒ ಕಚೇರಿಗಳಿವೆ.
ವಾಹನಗಳ ದಟ್ಟಣೆ, ಆದಾಯವನ್ನೂ ಎಆರ್‌ಟಿಒ ಆರಂಭಕ್ಕೆ ಪರಿಗಣಿಸಲಾಗುತ್ತಿದೆ. ಹೆಬ್ರಿಯಲ್ಲಿ (ತಿಂಗಳ ಮೊದಲ ಶನಿವಾರ), ಕುಂದಾಪುರ (ವಾರದಲ್ಲಿ ಪ್ರತಿ ಮಂಗಳವಾರ), ಕಾರ್ಕಳ (ವಾರದಲ್ಲಿ ಪ್ರತಿ ಗುರುವಾರ), ಪಡುಬಿದ್ರಿ (ತಿಂಗಳ ಮೂರನೇ ಶನಿವಾರ) ವಾಹನ ಪರವಾನಗಿ ನವೀಕರಣ ಸಹಿತ ಅನ್ಯ ಕೆಲಸ ಕಾರ್ಯಗಳು ನಡೆಯುತ್ತಿವೆ. ಆರ್‌ಟಿಒ, ಇನ್‌ಸ್ಪೆಕ್ಟರ್ ಪಾಲ್ಗೊಳ್ಳುತ್ತಾರೆ.
36 ಕ್ಕೆ 14 ಕಾರ್ಯನಿರ್ವಹಣೆ: ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಗೆ 36 ಹುದ್ದೆಗಳು ಮಂಜೂರಾಗಿವೆ. ಹಿರಿಯ ಮೋಟಾರು ವಾಹನ ನಿರೀಕ್ಷಕರು (2), ಮೋಟಾರು ವಾಹನ ನಿರೀಕ್ಷಕರು (1), ಅಧೀಕ್ಷಕರು (3), ಪ್ರಥಮ ದರ್ಜೆ ಸಹಾಯಕರು (4), ದ್ವಿತೀಯ ದರ್ಜೆ ಸಹಾಯಕರು (6), ವಾಹನ ಚಾಲಕರು (2), ಗ್ರೂಪ್ ಡಿ ನೌಕರರು (4) ಸಹಿತ ಒಟ್ಟು 22 ಹುದ್ದೆಗಳು ಖಾಲಿಯಿವೆ. ವಾರ್ಷಿಕ 125 ಕೋಟಿ ರೂ.ಗಳಿಗೂ ಅಧಿಕ ಆದಾಯ ತರುವಲ್ಲಿ 14 ಮಂದಿ ಶ್ರಮಿಸುತ್ತಿದ್ದಾರೆ.
ಎಲೆಕ್ಟ್ರಿಕ್ ವಾಹನವೆಷ್ಟಿದೆ?: ಉಡುಪಿ ಜಿಲ್ಲೆಯಲ್ಲಿ 2021ರ ಜನವರಿ 1 ರಿಂದ ಒಟ್ಟು 812 ಎಲೆಕ್ಟ್ರಿಕ್ ವಾಹನಗಳ ನೋಂದಣಿಯಾಗಿದೆ. ದ್ವಿಚಕ್ರ: 772, ಕಾರು: 33, ತ್ರಿಚಕ್ರ: 1 (ಖಾಸಗಿ) ನೋಂದಣಿ ಬಳಿಕ ಮೂರು ವರ್ಷಗಳ ಕಾಲ ತೆರಿಗೆ ವಿನಾಯಿತಿ ಇದೆ. ಬಳಿಕ ಏನು, ಎತ್ತ ಎನ್ನುವ ನಿರ್ದೇಶನವಿನ್ನೂ ಇಲಾಖೆಯಿಂದ ಬಂದಿಲ್ಲ, ಸರಕಾರದ ಎಲೆಕ್ಟ್ರಿಕ್ ವಾಹನ ನೀತಿ ಏನೆನ್ನುವುದು ಇನ್ನೂ ಅನಾವರಣವಾಗಿಲ್ಲ.
ಉಡುಪಿಯಲ್ಲಿ 812 ಎಲೆಕ್ಟ್ರಿಕ್ ವಾಹನಗಳಿದ್ದರೂ ಒಂದೇ ಒಂದು ಚಾರ್ಜಿಂಗ್ ಸ್ಟೇಶನ್ ಇಲ್ಲ. ಮೆಸ್ಕಾಂ ವತಿಯಿಂದ ಸರಕಾರಿ ಸ್ಥಳದಲ್ಲಿ ಚಾರ್ಜಿಂಗ್ ಸ್ಟೇಶನ್ ನಿರ್ಮಾಣ ಯೋಜನೆ ಸ್ಥಳ ಗುರುತಿಸುವ ಹಂತದಲ್ಲಿದೆ. ಚಾರ್ಜಿಂಗ್ ಸದ್ಯಕ್ಕೆ ಮನೆಯಲ್ಲೇ ಮಾಡಲಾಗುತ್ತಿದೆ. ಎರಡು ಎಲೆಕ್ಟ್ರಿಕ್ ಬೈಕ್ ಸವಾರಿ ನಡುವೆ ಆಕಸ್ಮಿಕ ಬೆಂಕಿಯಿಂದ ಸುಟ್ಟಿದ್ದು ಬ್ಯಾಟರಿಯಲ್ಲಿರುವ ಆ್ಯಸಿಡ್/ಉಷ್ಣತೆ / ಬಿಸಿಲಿನ ಪರಿಣಾಮ ಇದುವೇ ಎನ್ನುವ ಅಧ್ಯಯನದಲ್ಲಿ ವಾಹನ ಕಂಪನಿಗಳು ನಿರತವಾಗಿವೆ.
ವಾಹನ ನೋಂದಣಿ ಎಷ್ಟು?
* ದ್ವಿಚಕ್ರ: 3,63,252
* ಕಾರು/ಜೀಪು: 68,762
* ಮ್ಯಾಕ್ಸಿ ಕ್ಯಾಬ್: 1,344
* ಮಜಲು ವಾಹನ: 1,202
* ತ್ರಿಚಕ್ರ ವಾಹನ: 22,214
* ಇತರೇ ವಾಹನ: 33,405
ಒಟ್ಟು ವಾಹನಗಳು: 4,90,179
‘ಉಡುಪಿ ಜಿಲ್ಲೆಯಲ್ಲಿ 4.90 ಲಕ್ಷ ವಾಹನಗಳ ನೋಂದಣಿಯಾಗಿದ್ದು ವಾಹನ ಚಾಲನೆ ಕಲಿಸುವ 65 ಶಾಲೆಗಳಿವೆ. ವಾರ್ಷಿಕ 151.55 ಕೋಟಿ ರೂ. ರಾಜಸ್ವ ಸಂಗ್ರಹದ ಗುರಿಗೆ ಪ್ರತಿಯಾಗಿ ಜನವರಿ 31ಕ್ಕೆ ಒಟ್ಟು 107.11 ಕೋಟಿ ರೂ. ಆದಾಯ ಗಳಿಸಿದೆ (ಶೇ. 84.81 ಪ್ರಗತಿ) 812 ಎಲೆಕ್ಟ್ರಿಕ್ ವಾಹನಗಳ ನೋಂದಣಿಯಾಗಿದೆ’ ಎಂದು ಮಣಿಪಾಲದಲ್ಲಿ ಇರುವ ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ. ಪಿ. ಗಂಗಾಧರ ಮಾಹಿತಿ ನೀಡಿದ್ದಾರೆ.
Read more
[wpas_products keywords=”deal of the day sale today offer all”]