ವರನಟ ಡಾ.ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಆರಂಭಿಸಿದ ಸಂಸ್ಥೆ ಶಕ್ತಿಧಾಮ. ಮೈಸೂರಿನಲ್ಲಿರುವ ಶಕ್ತಿಧಾಮದ ಹೆಣ್ಣು ಮಕ್ಕಳು ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಬೆಂಗಳೂರು ಹಾಗೂ ಚಿಕ್ಕಬಳ್ಳಾಪುರದ ಪ್ರವಾಸ ಕೈಗೊಂಡಿದ್ದಾರೆ.
ಹೌದು, ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಮುಂದಾಳತ್ವದಲ್ಲಿ ಇವತ್ತು ಶಕ್ತಿಧಾಮದ ಹೆಣ್ಣು ಮಕ್ಕಳು ಭೋಗನಂದೀಶ್ವರ ದೇವಾಲಯ ಮತ್ತು ನಂದಿ ಬೆಟ್ಟಕ್ಕೆ ಪ್ರಯಾಣ ಮಾಡಿದರು.
ಇಂದು ಬೆಳಗ್ಗೆ ಜಗದ್ವಿಖ್ಯಾತ ಭೋಗ ನಂದೀಶ್ವರ ದೇವಾಲಯಕ್ಕೆ ಬಂದಿದ್ದ ಮಕ್ಕಳು ಸಾಲಿನಲ್ಲಿ ಹೋಗಿ ದೇವರ ದರ್ಶನ ಪಡೆದರು. ಮಕ್ಕಳೊಂದಿಗೆ ಶಿವರಾಜ್ ಕುಮಾರ್ ಮತ್ತು ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಕೂಡ ದೇವರ ದರ್ಶನ ಪಡೆದರು. ದೇವರ ದರ್ಶನ ಪಡೆದ ನಂತರ ಮಾತನಾಡಿದ ಶಿವರಾಜ್ ಕುಮಾರ್, ‘’ಶಕ್ತಿಧಾಮದ ಹೆಣ್ಣುಮಕ್ಕಳಿಗೆ ನಾವು ಬೇರೆಯವರು, ನಾವೇ ಬೇರೆ ಎಂಬ ಕಲ್ಪನೆ ಬರಬಾರದು ಎಂಬ ಕಾರಣಕ್ಕೆ ನಾವೂ ಅವರ ಜೊತೆಗೆ ಬಂದಿದ್ದೇವೆ. ನಾವು ಮಾತ್ರವಲ್ಲ. ಇಡೀ ರಾಜ್ ಕುಮಾರ್ ಕುಟುಂಬ ಸೇರಿದಂತೆ ಹಲವರ ಆಶೀರ್ವಾದ ಈ ಮಕ್ಕಳ ಮೇಲೆ ಇದೆ. ಮಕ್ಕಳಿಗೆ ಅರಿವು ಮೂಡಿಸುವ ಸಲುವಾಗಿ ಪ್ರವಾಸ ಕೈಗೊಳ್ಳಲಾಗಿದೆ’’ ಎಂದರು.
ಶಕ್ತಿಧಾಮ
1999ರಲ್ಲಿ ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರು ಹುಟ್ಟು ಹಾಕಿದ ಸಂಸ್ಥೆ ಶಕ್ತಿಧಾಮ. ಹೆಣ್ಣು ಮಕ್ಕಳಿಗಾಗಲೇ ಇರುವ ಸಂಸ್ಥೆ ಇದು. ಹೆಣ್ಣು ಮಕ್ಕಳಿಗೆ ವಸತಿ ಸೇರಿದಂತೆ ಎಲ್ಲ ವ್ಯವಸ್ಥೆಯನ್ನೂ ಶಕ್ತಿಧಾಮದಲ್ಲಿ ಮಾಡಲಾಗಿದೆ. ‘’ಆ ಮಕ್ಕಳಿಗೆ ಅನಾಥ ಪ್ರಜ್ಞೆ ಕಾಡಬಾರದು ಎಂಬ ಕಾರಣಕ್ಕೆ ನಾವು ಆಗಾಗ್ಗೆ ಈ ರೀತಿಯ ಶಿಕ್ಷಣೇತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ಅವರಲ್ಲಿ ಆ ರೀತಿಯ ಭಾವನೆಯೇ ಬರಬಾರದು ಎಂಬುದು ನಮ್ಮ ಉದ್ದೇಶ’’ ಎಂದರು ನಟ ಶಿವರಾಜ್ ಕುಮಾರ್.
‘’ಶಕ್ತಿಧಾಮದಲ್ಲಿ ಈಗ 150 ಹೆಣ್ಣು ಮಕ್ಕಳಿದ್ದಾರೆ. ಮುಂದಿನ ವರ್ಷ ಈ ಸಂಖ್ಯೆ 200ಕ್ಕೆ ಏರಿಕೆಯಾಗಲಿದೆ. ನಮ್ಮ ಇಡೀ ಕುಟುಂಬ ಅವರನ್ನು ನೋಡಿಕೊಳ್ಳಲಿದೆ’’ ಅಂತಲೂ ಶಿವರಾಜ್ ಕುಮಾರ್ ತಿಳಿಸಿದ್ದಾರೆ. ಸದ್ಯ ಶಕ್ತಿಧಾಮದ ಮಕ್ಕಳು ನಂದಿ ಗಿರಿಧಾಮದ ವೀಕ್ಷಣೆಗೆ ಬಂದಿದ್ದಾರೆ. ಇಂದು ನಂದಿಗಿರಿಧಾಮದಲ್ಲಿದ್ದು ನಾಳೆ ಮೈಸೂರಿಗೆ ವಾಪಸ್ ಆಗಲಿದ್ದಾರೆ ಎಂದು ಶಿವರಾಜ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇಂದು ಶಿವಣ್ಣ, ಅಪ್ಪು ಮನೆಗೆ ಅಲ್ಲು ಅರ್ಜುನ್
ಇವತ್ತು ತೆಲುಗು ನಟ ಅಲ್ಲು ಅರ್ಜುನ್ ಬೆಂಗಳೂರಿಗೆ ಬಂದಿದ್ದರು. ಪುನೀತ್ ರಾಜ್‌ಕುಮಾರ್ ಕುಟುಂಬಕ್ಕೆ ಸಾಂತ್ವನ ಹೇಳುವ ಸಲುವಾಗಿ ಹೈದರಾಬಾದ್‌ನಿಂದ ಬೆಂಗಳೂರಿಗೆ ಅಲ್ಲು ಅರ್ಜುನ್ ಬಂದಿದ್ದರು. ಹೈದರಾಬಾದ್‌ನಿಂದ ಪ್ರೈವೇಟ್ ಜೆಟ್‌ನಲ್ಲಿ ಎಚ್‌ಎಎಲ್ ಏರ್‌ಪೋರ್ಟ್ ತಲುಪಿದ ಅಲ್ಲು ಅರ್ಜುನ್, ನೇರವಾಗಿ ನಾಗವಾರದಲ್ಲಿರುವ ಶಿವರಾಜ್ ಕುಮಾರ್ ಮನೆ ತಲುಪಿದರು.
ಶಿವರಾಜ್ ಕುಮಾರ್ ಅವರಿಗೆ ಸಾಂತ್ವನ ಹೇಳಿದ ಅಲ್ಲು ಅರ್ಜುನ್ ಬಳಿಕ ಸದಾಶಿವನಗರದಲ್ಲಿರುವ ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಭೇಟಿ ನೀಡಿದರು. ಅಲ್ಲಿ ಅಪ್ಪು ಅವರ ಭಾವಚಿತ್ರವನ್ನು ಮುಟ್ಟಿದ ಅಲ್ಲು ಅರ್ಜುನ್ ಭಾವುಕರಾದರು. ಬಳಿಕ ಅಪ್ಪು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಪುನೀತ್ ಪತ್ನಿ ಅಶ್ವಿನಿಗೆ ಸಾಂತ್ವನದ ಮಾತುಗಳನ್ನಾಡಿದರು. ನಂತರ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್‌ಕುಮಾರ್ ಅವರ ಸಮಾಧಿ ಸ್ಥಳಕ್ಕೆ ಅಲ್ಲು ಅರ್ಜುನ್ ಭೇಟಿ ಕೊಟ್ಟರು. ಅಪ್ಪು ಪುಣ್ಯಭೂಮಿಗೆ ಅಲ್ಲು ಅರ್ಜುನ್ ಪುಷ್ಪ ನಮನ ಸಲ್ಲಿಸಿದರು. ಕಂಠೀರವ ಸ್ಟುಡಿಯೋದಲ್ಲೇ ಇರುವ ಡಾ.ರಾಜ್‌ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್ ಹಾಗೂ ಅಂಬರೀಶ್ ಸಮಾಧಿಗೂ ಅಲ್ಲು ಅರ್ಜುನ್ ನಮಿಸಿದರು.
Read more
[wpas_products keywords=”deal of the day party wear dress for women stylish indian”]