ಕಾಸರಗೋಡು: ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಪೀಡಿತರ ಮರಣ ಸರಣಿ ಮುಂದುವರಿದಿದೆ. ಇದೀಗ ಕುಂಬ್ಡಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆರಿಂಜೆಯಲ್ಲಿರುವ ಮೋಹನ – ಉಷಾ ದಂಪತಿಯ ಪುತ್ರಿ ಹರ್ಷಿತಾ (2) ಬಲಿಯಾಗಿದ್ದಾರೆ.
ಈ ಪ್ರದೇಶಗಳಲ್ಲಿರುವ ಅದೆಷ್ಟೋ ಎಂಡೋ ಪೀಡಿತರಿಗೆ ಸೂಕ್ತ ಚಿಕಿತ್ಸೆ ಲಭಿಸದಿರುವುದು ಮತ್ತು ಬಡ ಕುಟುಂಬಗಳಿಗೆ ಸರಿಯಾದ ರೀತಿಯ ಆರ್ಥಿಕ ಸಹಾಯ, ಮಾರ್ಗದರ್ಶನ ದೊರೆಯದಿರುವುದೇ ಇಂತಹ ಅನಾಹುತಗಳಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಎಂಡೋ ಪೀಡಿತ ಪ್ರದೇಶವಾದಲ್ಲಿ ಸರಕಾರ ಆನೇಕ ಸೌಲಭ್ಯಗಳನ್ನು ಘೋಷಿಸಿದರೂ ಅದು ಕಟ್ಟಕಡೆಯ ವ್ಯಕ್ತಿಗೆ ತಲುಪುತ್ತಿಲ್ಲ. ಕೇವಲ ಜಿಲ್ಲಾ ಮಟ್ಟದ ಸಭೆಗಳಲ್ಲಿ ಘೋಷಣೆಯಲ್ಲಿಯೇ ಮುಗಿಯುತ್ತದೆ. ಎಂಡೋ ಯಾದಿಯಲ್ಲಿ ಒಳಪಡಿಸಲು ರೋಗ ಇದ್ದರೆ ಸಾಲದು, ಅದೆಷ್ಟೋ ವೈದ್ಯಕೀಯ ಶಿಬಿರಗಳಲ್ಲಿ ಹಾಜರಾಗಿ ಕಾದು ಕುಳಿತುಕೊಳ್ಳಬೇಕಾದ ಸ್ಥಿತಿ ಇದೆ. ಇದರಿಂದಲೇ ಸರಕಾರದ ಸಹಾಯ ಧನ, ಚಿಕಿತ್ಸಾ ಸೌಲಭ್ಯ ಲಭಿಸದೇ ಸಂತ್ರಸ್ತರು ಬಲಿಯಾಗುತ್ತಿದ್ದಾರೆ.
ಕುಂಬ್ಡಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆರಿಂಜೆಯ ಬಡ ದಂಪತಿ ಕೂಲಿ ಕಾರ್ಮಿಕ ಮೋಹನ ಹಾಗೂ ಉಷಾ ಅವರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಮೂರನೇ ಮಗು ಹರ್ಷಿತಾ ಹುಟ್ಟಿನಿಂದಲೇ ಎಂಡೋ ಸಂತ್ರಸ್ತೆ.
2020ರಂದು ಜುಲೈ 19ರಂದು ಹುಟ್ಟಿದ ಕೂಡಲೇ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲೂ, ಕೋಝಿಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲೂ ಚಿಕಿತ್ಸೆ ನೀಡಲಾಗಿತ್ತು. ಈ ಮಗುವಿಗೆ ತಲೆ ದೊಡ್ಡದಾಗುವ ಮೆನಿಂಜೋ ಮೈಲೋಸಿಸ್ ಎಂಬ ರೋಗ ಬಾಧಿಸಿದೆ. ಎಂಡೋ ಪೀಡಿತ ಪ್ರದೇಶದಲ್ಲಿ ಹೆಚ್ಚಿನ ಮಕ್ಕಳಲ್ಲಿ ಈ ರೋಗ ಕಾಣಿಸಿಕೊಂಡಿದೆ.
ದಿನೇ ದಿನೇ ಮಗುವಿನ ತಲೆ ಬೆಳೆಯುವುದು, ಇದು ಮಗುವಿನ ಆರೋಗ್ಯದ ಮೇರೆ ಪರಿಣಾಮ ಬೀರುವುದಲ್ಲದೇ ಬಡ ಕುಟುಂಬದವರಿಗೆ ಆರಂಭದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಉನ್ನತ ಚಿಕಿತ್ಸೆಗಾಗಿ ಸರಕಾರದ ಸಹಾಯವಿದ್ದರೂ ಸರಿಯಾದ ಸಮಯಕ್ಕೆ ಲಭಿಸದಿರುವುದರಿಂದ ಚಿಕಿತ್ಸೆಯು ಮೊಟಕುಗೊಂಡು ಕೊನೆಗೆ ಸಾವಿಗೆ ಶರಣಾಗುತ್ತಾರೆ. ಇಂತಹ ಆನೇಕ ಪ್ರಕರಣಗಳು ಜಿಲ್ಲೆಯಲ್ಲಿ ಉಂಟಾಗಿದೆ. 2014ರಲ್ಲಿ ಪೆರ್ಲ ಪೆಲ್ತಾಜೆಯ ಲೋಹಿತ್ ಎಂಬ ಪೀಡಿತ ಮಗು ಮೃತಪಟ್ಟಿತ್ತು.
ಹರ್ಷಿತಾಳಿಗೆ ಕಳೆದ ದಿನ ರೋಗ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಆರಂಭದಲ್ಲಿ ಕೂಡಲೇ ಕಾಸರಗೋಡು ಜನರಲ್ ಆಸ್ಪತ್ರೆಗೂ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೋಝಿಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ. ಮೃತ ಹರ್ಷಿತಾಳಿಗೆ ತಂದೆ, ತಾಯಿ, ರಮೇಶ, ಉಮೇಶ ಇಬ್ಬರು ಸಹೋದರರು ಇದ್ದಾರೆ.
ಯುವ ಪೀಳಿಗೆ ಬಲಿ: ಸರಕಾರ ಎಂಡೋ ಸಲ್ಫಾನ್ ಸಿಂಡಪಡಿಸಿದ ಪರಿಣಾಮ ಹುಟ್ಟುವ ಮಕ್ಕಳು ಅಂಗ ವೈಕಲ್ಯದಿಂದ ಕೂಡಿರುತ್ತವೆ. ಸರಕಾರದ ತಪ್ಪು ನಿರ್ಧಾರಗಳಿಂದಾಗಿ ಯುವ ಪೀಳಿಗೆ ತನ್ನದಲ್ಲದ ತಪ್ಪಿಗಾಗಿ ಸಾವಿಗೆ ಶರಣಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ನೇರ ಹೊಣೆಯನ್ನು ಸರಕಾರವೇ ತೆಗೆದುಕೊಳ್ಳಬೇಕು ಎಂಬುವುದು ಸ್ಥಳೀಯರ ಆಗ್ರಹ.
Read more
[wpas_products keywords=”deal of the day sale today offer all”]