Karnataka news paper

ಲಾಠಿಚಾರ್ಜ್‌ ಬಳಿಕ ಉಪ್ಪಿನಂಗಡಿಯಲ್ಲಿ ಪೊಲೀಸ್‌ ಸರ್ಪಗಾವಲು; ಸಹಜ ಸ್ಥಿತಿಗೆ ಮರಳಿದ ಪೇಟೆ


ಉಪ್ಪಿನಂಗಡಿ: ಮಂಗಳವಾರ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಲಾಠಿ ಚಾರ್ಚ್‌ಗೆ ಕಾರಣವಾಗಿದ್ದ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಇಂದು ಕೂಡ 144ನೇ ಸೆಕ್ಷನ್ ಜಾರಿಯಲ್ಲಿದ್ದು, ಪೇಟೆ ಶಾಂತ ಸ್ಥಿತಿಯಲ್ಲಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಉಪ್ಪಿನಂಗಡಿಗೆ ಉಡುಪಿ ಜಿಲ್ಲೆ ಸೇರಿದಂತೆ ವಿವಿಧ ಕಡೆಗಳಿಂದ ಪೊಲೀಸರನ್ನು ಕರೆಸಲಾಗಿದ್ದು, ಬಿಗಿ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇಲ್ಲಿನ ಹಳೆಗೇಟ್‌ನ ಸುಬ್ರಹ್ಮಣ್ಯ ಕ್ರಾಸ್ ಬಳಿ ತಲವಾರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದ ಮೂವರು ಪಿಎಫ್‌ಐ ಮುಖಂಡರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಮಂಗಳವಾರ ಬೆಳಗ್ಗೆಯಿಂದಲೇ ಉಪ್ಪಿನಂಗಡಿಯಲ್ಲಿ ಪೊಲೀಸ್ ಠಾಣೆಯ ಮುಂಭಾಗ ಪಿಎಫ್‌ಐ ಕಾರ್ಯಕರ್ತರು ಪ್ರತಿಭಟನೆಯಲ್ಲಿ ನಿರತರಾಗಿದ್ದರು.

ರಾತ್ರಿ ವಶಕ್ಕೆ ಪಡೆದವರಲ್ಲಿ ಓರ್ವ ಮುಖಂಡನನ್ನು ಬಿಡುಗಡೆಗೊಳಿಸಲಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತೆರಳದಂತೆ ಮುನ್ನೆಚ್ಚರಿಕಾ ಕ್ರಮವಾಗಿ ತಹಶೀಲ್ದಾರ್ ಉಪ್ಪಿನಂಗಡಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದಾರೆ. ರಾತ್ರಿ 9.30ರ ಸುಮಾರಿಗೆ ಆಕ್ರೋಶಿತ ಪಿಎಫ್‌ಐ ಕಾರ್ಯಕರ್ತರ ಗುಂಪು ಮತ್ತಿಬ್ಬರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಪೊಲೀಸ್ ಠಾಣೆಯ ಮುಂಭಾಗ ಜಮಾಯಿಸಿದ್ದು, ಪರಿಸ್ಥಿತಿ ಕೈಮೀರುವ ಹಂತದಲ್ಲಿದ್ದಾಗ ಪೊಲೀಸರು ಲಾಠಿ ಚಾರ್ಚ್ ನಡೆಸಿದರು.
ಪಿಎಫ್‌ಐ ಮುಖಂಡರನ್ನು ವಶಕ್ಕೆ ಪಡೆದ ಉಪ್ಪಿನಂಗಡಿ ಪೊಲೀಸರ ವಿರುದ್ಧ ಪ್ರತಿಭಟನೆ: ಲಾಠಿ ಚಾರ್ಜ್, ನಿಷೇಧಾಜ್ಞೆ ಜಾರಿ..!
ನಾಲ್ವರು ಪೊಲೀಸರಿಗೆ ಗಾಯ:
ಲಾಠಿ ಚಾರ್ಚ್ ಸಂದರ್ಭ ಗುಂಪಿನ ಆಕ್ರೋಶಕ್ಕೆ ಸಿಲುಕಿ ಎಸ್‌ಐಗಳಾದ ಸಂದೇಶ್, ವಾಮನ ಹಾಗೂ ಪೊಲೀಸ್ ಸಿಬ್ಬಂದಿಗಳಾದ ರುದ್ರಪ್ಪ ಹಾಗೂ ರೇಣುಕಾ ಅವರಿಗೆ ಗಾಯಗಳಾಗಿದ್ದು, ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಪಿನಲ್ಲಿದ್ದ ಸುಮಾರು 10ಕ್ಕೂ ಅಧಿಕ ಮಂದಿಗೆ ಈ ಸಂದರ್ಭ ಗಾಯಗಳಾಗಿವೆ.

ಒಡೆದ ಗಾಜು, ಚಪ್ಪಲಿ: ಪೊಲೀಸ್ ಠಾಣೆಯ ಮುಂಭಾಗದ ರಸ್ತೆಯಲ್ಲಿ ಚಪ್ಪಲಿ, ನೀರಿನ ಬಾಟಲಿಗಳು, ವಾಹನಗಳ ಒಡೆದ ಗಾಜಿನ ಚೂರುಗಳು ಅಲ್ಲಲ್ಲಿ ಬಿದ್ದಿದೆ. ಪಕ್ಕದ ಉಡುಪಿ ಜಿಲ್ಲೆಯಿಂದಲೂ ಪೊಲೀಸ್ ಪಡೆಯನ್ನು ಕರೆಸಲಾಗಿದ್ದು, ಇವರೊಂದಿಗೆ ಜಿಲ್ಲಾ ಹಾಗೂ ರಾಜ್ಯ ಮೀಸಲು ಪಡೆ, ವಿವಿಧ ಠಾಣಾ ಪೊಲೀಸ್ ಉಪ ನಿರೀಕ್ಷಕರು, ಸಿಬ್ಬಂದಿ ಉಪ್ಪಿನಂಗಡಿಯಲ್ಲಿದ್ದು, ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

ಸಹಜ ಸ್ಥಿತಿಯಲ್ಲಿ ಪೇಟೆ
ಸ್ವಲ್ಪ ಮಟ್ಟಿನ ಜನರ ವಿರಳತೆ, ಕೆಲವು ಅಂಗಡಿಗಳು ಬಾಗಿಲು ಹಾಕಿರುವುದು ಬಿಟ್ಟರೆ, ಇನ್ನುಳಿದಂತೆ ಪೇಟೆ ಸಹಜ ಸ್ಥಿತಿಯಲ್ಲಿದ್ದು, ಎಂದಿನಂತೆ ವ್ಯವಹಾರ, ವ್ಯಾಪಾರಗಳು ನಡೆಯುತ್ತಿವೆ. ಅಡಿಷನಲ್ ಎಸ್ಪಿಯವರು ನಿನ್ನೆಯಿಂದಲೇ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದಾರೆ.



Read more