Karnataka news paper

ಜಿಲ್ಲಾ ಮಟ್ಟದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ರಾಜ್ಯಗಳಿಗೆ ಕೇಂದ್ರ ಸೂಚನೆ


ಹೈಲೈಟ್ಸ್‌:

  • ದೇಶದ 3 ರಾಜ್ಯಗಳ 8 ಜಿಲ್ಲೆಗಳಲ್ಲಿ ಶೇ. 10ಕ್ಕಿಂತ ಹೆಚ್ಚು ಕೊರೊನಾ ಪಾಸಿಟಿವಿಟಿ ದರ ಕಾಣಿಸಿಕೊಂಡಿರುವ ಹಿನ್ನೆಲೆ
  • ಜಿಲ್ಲೆಗಳ ಮಟ್ಟದಲ್ಲಿಯೇ ಕೊರೊನಾ ಪರಿಸ್ಥಿತಿಗಳ ಬಗ್ಗೆ ತೀವ್ರ ನಿಗಾ ಇಡುವಂತೆ ಕೇಂದ್ರ ಸೂಚನೆ
  • ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರಕಾರದಿಂದ ಸೂಚನೆ

ಹೊಸದಿಲ್ಲಿ: ದೇಶದ ಮೂರು ರಾಜ್ಯಗಳ 8 ಜಿಲ್ಲೆಗಳಲ್ಲಿ ಶೇ. 10ಕ್ಕಿಂತ ಹೆಚ್ಚು ಕೊರೊನಾ ಪಾಸಿಟಿವಿಟಿ ದರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಕೊರೊನಾ ಪರಿಸ್ಥಿತಿಗಳ ಬಗ್ಗೆ ತೀವ್ರ ನಿಗಾ ಇಡುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರಕಾರ ಶನಿವಾರ ಸೂಚನೆ ನೀಡಿದೆ.

ಕಳೆದ ಎರಡು ವಾರಗಳಲ್ಲಿ ಕೇರಳ, ಮಿಜೋರಾಂ, ಅರುಣಾಚಲ ಪ್ರದೇಶ, ಪುದುಚೆರಿ, ಮಣಿಪುರ, ಪಶ್ಚಿಮ ಬಂಗಾಳ ಮತ್ತು ನಾಗಾಲ್ಯಾಂಡ್‌ನ 19 ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ. 5 – 10ರ ನಡುವೆ ಇದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಮಿಝೋರಾಂ, ಕೇರಳ ಮತ್ತು ಸಿಕ್ಕಿಂನ 8 ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ. 10ಕ್ಕಿಂತ ಹೆಚ್ಚು ಇದೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ದೇಶದಲ್ಲಿ 25 ಓಮಿಕ್ರಾನ್‌ ಕೇಸ್‌ ಪತ್ತೆ, ಎಲ್ಲರಲ್ಲೂ ಸೌಮ್ಯ ರೋಗ ಲಕ್ಷಣ – ಕೇಂದ್ರ ಮಾಹಿತಿ
ಇದರೊಂದಿಗೆ ಒಟ್ಟು 27 ಜಿಲ್ಲೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುವ ಅಗತ್ಯವಿದೆ ಎಂದು ರಾಜೇಶ್‌ ಭೂಷಣ್‌ ತಿಳಿಸಿದ್ದು, ಜತೆಗೆ ಹೊಸ ಕೋವಿಡ್-19 ಪ್ರಕರಣಗಳ ನಿಯಂತ್ರಣಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಪರಿಸ್ಥಿತಿಯ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸುವುದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ.

ಯಾವುದೇ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೆ ಅಥವಾ ಪಾಸಿಟಿವಿಟಿ ದರದಲ್ಲಿ ಏರಿಕೆ ಕಂಡುಬಂದಲ್ಲಿ, ಕಂಟೈನ್‌ಮೆಂಟ್‌ ಫ್ರೇಮ್‌ ವರ್ಕ್‌ ಪ್ರಕಾರ ಕಠಿಣ ಕ್ರಮ ಮತ್ತು ಸ್ಥಳೀಯ ನಿಯಂತ್ರಣವನ್ನು ಪ್ರಾರಂಭಿಸಬೇಕು ಎಂದು ರಾಜೇಶ್‌ ಭೂಷಣ್‌ ಸಲಹೆ ನೀಡಿದ್ದಾರೆ.

ಒಂದೊಮ್ಮೆ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ. 10ನ್ನು ದಾಟಿದರೆ ಅಥವಾ ಒಟ್ಟು ಬೆಡ್‌ಗಳಲ್ಲಿ ಶೇ. 60ಕ್ಕಿಂತ ಹೆಚ್ಚಿನ ಬೆಡ್‌ಗಳಲ್ಲಿ ರೋಗಿಗಳಿದ್ದರೆ ರಾತ್ರಿ ಕರ್ಫ್ಯೂ ಜಾರಿ, ಜನರು ಒಟ್ಟಾಗಿ ಸೇರುವುದನ್ನು ನಿರ್ಬಂಧಿಸುವುದು, ಸಭೆಗಳ ನಿಷೇಧ (ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ, ಹಬ್ಬ ಸೇರಿ ಇತರ), ಮದುವೆಗಳು ಮತ್ತು ಅಂತ್ಯಕ್ರಿಯೆಗಳಲ್ಲಿ ಜನ ಪಾಲ್ಗೊಳ್ಳುವುದನ್ನು ನಿಯಂತ್ರಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಆದೇಶಿಸಿದ್ದಾರೆ.



Read more

Leave a Reply

Your email address will not be published. Required fields are marked *