ರಾಹುಲ್ ಗಾಂಧಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕದ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ನೆಡ್ ಪ್ರೈಸ್, ಅಮೆರಿಕ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಅನುಮೋದಿಸುವುದಿಲ್ಲ ಎಂದು ಹೇಳಿದ್ದಾರೆ.
ತಮ್ಮ ಗಟ್ಟಿ ರಾಜತಾಂತ್ರಿಕ ಸಂಬಂಧದ ಬಗ್ಗೆ ಪಾಕಿಸ್ತಾನ ಮತ್ತು ಚೀನಾ ದೇಶಗಳೇ ಪ್ರತಿಕ್ರಿಯೆ ನೀಡಬೇಕು. ಈ ವಿಷಯದಲ್ಲಿ ಅಮೆರಿಕ ಯಾವುದೇ ಹೇಳಿಕೆ ನೀಡುವುದಿಲ್ಲ. ಅದರೆ ಭಾರತದ ಸಂಸತ್ತಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಡಿರುವ ಮಾತುಗಳನ್ನು ಅಮೆರಿಕ ಅನುಮೋದಿಸುವುದಿಲ್ಲ ಎಂಬುದನ್ನಷ್ಟೇ ನಾನು ಹೇಳಬಲ್ಲೆ ಎಂದು ನೆಡ್ ಪ್ರೈಸ್ ಸ್ಪಷ್ಟಪಡಿಸಿದ್ದಾರೆ.
ಯಾವುದೇ ರಾಷ್ಟ್ರ ಮತ್ತೊಂದು ರಾಷ್ಟ್ರದೊಂದಿಗೆ ಘನಿಷ್ಠ ರಾಜತಾಂತ್ರಿಕ ಸಂಬಂಧ ಹೊಂದುವುದನ್ನು ಅಮೆರಿಕ ವಿರೋಧಿಸುವುದಿಲ್ಲ. ಆದರೆ ಅಮೆರಿಕಕ್ಕೆ ಹತ್ತಿರವಾದರೆ ಆಗುವ ಲಾಭಗಳೇನು ಎಂಬುದು ಆಯಾ ರಾಷ್ಟ್ರಗಳೇ ನಿರ್ಧರಿಸಬೇಕು. ಅಮೆರಿಕ ಮತ್ತು ಚೀನಾ ನಡುವೆ ಒಂದು ರಾಷ್ಟ್ರವನ್ನು ಆಯ್ಕೆ ಮಾಡಬೇಕು ಎಂಬ ನಿಯಮವೇನೂ ಇಲ್ಲ ಎಂದು ನೆಡ್ ಪ್ರೈಸ್ ಮಾರ್ಮಿಕವಾಗಿ ಹೇಳಿದ್ದಾರೆ.
ಮೋದಿ ಸರ್ಕಾರದ ವಿದೇಶಾಂಗ ನೀತಿ ಬಗ್ಗೆ ರಾಹುಲ್ ಗಾಂಧಿ ಆಡಿರುವ ಮಾತುಗಳು ಆ ರಾಷ್ಟ್ರದ ಆಂತರಿಕ ರಾಜಕೀಯ ವಿಚಾರ. ಭಾರತ ಮತ್ತು ಅಮೆರಿಕದ ಘನಿಷ್ಠ ಮಿತೃತ್ವಕ್ಕೆ ಎಳ್ಳಷ್ಟೂ ಧಕ್ಕೆ ಬಂದಿಲ್ಲ ಎಂಬುದು ಮಾತ್ರ ಸತ್ಯ. ನಾವು ಭಾರತವನ್ನು ನಮ್ಮೊಂದಿಗೆ ಹೊಂದಿರುವ ಸಂಬಂಧದ ಆಧಾರದ ಮೇಲೆ ಅಳೆಯುತ್ತೇವೆಯೇ ಹೊರತು, ಆ ರಾಷ್ಟ್ರ ಮತ್ತೊಂದು ರಾಷ್ಟ್ರದೊಂದಿಗೆ ಹೊಂದಿರುವ ಸಂಬಂಧದ ಮೇಲಲ್ಲ ಎಂದು ನೆಡ್ ಪ್ರೈಸ್ ಹೇಳಿದ್ದಾರೆ.
ಲೋಕಸಭೆಯಲ್ಲಿ ರಾಷ್ಟ್ರಪತಿಗಳ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ್ದ ರಾಹುಲ್ ಗಾಂಧಿ, ಮೋದಿ ಸರ್ಕಾರದ ವಿದೇಶಾಂಗ ನೀತಿಯ ವೈಫಲ್ಯತೆಯಿಂದಾಗಿ ದೇಶ ಬಳಲುವಂತಾಗಿದೆ. ಪಾಕಿಸ್ತಾನ ಮತ್ತು ಚೀನಾ ಈ ಹಿಂದೆಂದಿಗಿಂತಲೂ ಹತ್ತಿರವಾಗಿದ್ದು, ನಮ್ಮ ಗಡಿಗಳು ಎರಡೂ ಕಡೆಯಿಂದ ಅಸುರಕ್ಷಿತವಾಗಿವೆ ಎಂದು ಕಿಡಿಕಾರಿದ್ದರು.
ಪಾಕಿಸ್ತಾನ ಮತ್ತು ಚೀನಾ ಪರಸ್ಪರ ಹತ್ತಿರವಾಗದಂತೆ ನೋಡಿಕೊಳ್ಳುವುದು ಭಾರತದ ವಿದೇಶಾಂಗ ನೀತಿಯ ಪ್ರಮುಖ ಭಾಗವಾಗಿತ್ತು. ಆದರೆ ಮೋದಿ ಸರ್ಕಾರ ಈ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.
Read more
[wpas_products keywords=”deal of the day sale today offer all”]