ಉಡುಪಿ: ಕುಂದಾಪುರ ಸರ್ಕಾರಿ ಜೂನಿಯರ್ ಕಾಲೇಜಿಗೆ ಗುರುವಾರ ಹಿಜಾಬ್ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಲಾಗಿದೆ.
26 ವಿದ್ಯಾರ್ಥಿನಿಯರು ಎಂದಿನಂತೆ ಹಿಜಾಬ್ ಧರಿಸಿ ಕಾಲೇಜಿಗೆ ಬಂದ ಸಂದರ್ಭ ಗೇಟಿನಲ್ಲಿಯೇ ಅವರನ್ನು ತಡೆದ ಪ್ರಾಂಶುಪಾಲ ಬಿ.ಜಿ.ರಾಮಕೃಷ್ಣ, ಹಿಜಾಬ್ ಇಲ್ಲದೆ ಬಂದರೆ ಮಾತ್ರ ಪ್ರವೇಶ ನೀಡುವುದಾಗಿ ಪಟ್ಟು ಹಿಡಿದರು.
ಇದರಿಂದ ಅಸಮಾಧಾನಗೊಂಡ ವಿದ್ಯಾರ್ಥಿನಿಯರು ಪ್ರಾಂಶುಪಾಲರೊಂದಿಗೆ ವಾಗ್ವಾದಕ್ಕಿಳಿದು ಕಾಲೇಜಿನ ಒಳಬಿಡುವಂತೆ ಪರಿಪರಿಯಾಗಿ ಬೇಡಿ, ಕಣ್ಣೀರು ಹಾಕಿದರೂ ಪ್ರಾಂಶುಪಾಲರು ಅನುಮತಿ ನೀಡಲಿಲ್ಲ.
ಕಡ್ಡಾಯವಾಗಿ ವಸ್ತ್ರ ಸಂಹಿತೆ ಪಾಲಿಸುವಂತೆ ಸರ್ಕಾರದ ನಿರ್ದೇಶನವಿದ್ದು ಪಾಲಿಸಿದರೆ ಮಾತ್ರ ಕಾಲೇಜಿಗೆ ಪ್ರವೇಶ ನೀಡಲಾಗುವುದು. ಬುಧವಾರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸದೆ ಸಮವಸ್ತ್ರ ಮಾತ್ರ ಹಾಕಿಕೊಂಡು ಕಾಲೇಜಿಗೆ ಬರಬೇಕು ಎಂಬ ನಿರ್ಣಯ ತೆಗೆದುಕೊಳ್ಳಲಾಗಿದೆ. ವಿದ್ಯಾರ್ಥಿಗಳು ನಿರ್ಣಯವನ್ನು ಪಾಲಿಸಲೇಬೇಕು ಎಂದು ತಿಳಿಸಿದರು.
ಕಾಲೇಜಿನಲ್ಲಿ ಹಿಜಾಬ್ಗೆ ಅವಕಾಶವಿಲ್ಲ: ಉಡುಪಿ ಶಾಸಕ ರಘುಪತಿ ಭಟ್
ಪ್ರಾಂಶುಪಾಲರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿದ್ಯಾರ್ಥಿನಿಯರು, ‘ವಸ್ತ್ರ ಸಂಹಿತೆಯಲ್ಲಿ ಯಥಾಸ್ಥಿತಿ ಕಾಪಾಡುವಂತೆ ಸರ್ಕಾರ ಈಚೆಗೆ ಹೊರಡಿಸಿರುವ ಆದೇಶ ಉಡುಪಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಮಾತ್ರ ಸೀಮಿತವಾಗಿದ್ದು, ಕುಂದಾಪುರ ಜ್ಯೂನಿಯರ್ ಕಾಲೇಜಿನ ಉಲ್ಲೇಖ ಮಾಡಿಲ್ಲ. ಹಾಗಾಗಿ, ಹಿಂದಿನಂತೆಯೇ ಹಿಜಾಬ್ ಧರಿಸಿ ಕಾಲೇಜಿಗೆ ಬರಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.
ಪ್ರವೇಶ ಪಡೆಯುವಾಗಲೇ ಹಿಜಾಬ್ ಧರಿಸುವಂತಿಲ್ಲ ಎಂಬ ನಿಯಮ ಹಾಕಿದ್ದರೆ ಬೇರೆ ಕಾಲೇಜು ಸೇರುತ್ತಿದ್ದೆವು. ಪರೀಕ್ಷೆ ಎರಡು ತಿಂಗಳು ಇರುವಾಗ ಏಕಾಏಕಿ ಹಿಜಾಬ್ ಧರಿಸುವಂತಿಲ್ಲ ಎಂದರೆ ಹೇಗೆ’ ಎಂದು ವಿದ್ಯಾರ್ಥಿನಿಯರು ಪ್ರಾಂಶುಪಾಲರನ್ನು ಪ್ರಶ್ನಿಸಿದರು.
‘ನಮಗೆ ಶಿಕ್ಷಣವೂ ಬೇಕು, ಹಿಜಾಬ್ ಸಹ ಬೇಕು ಎಂದು ಪಟ್ಟು ಹಿಡಿದರು.
ವಿದ್ಯಾರ್ಥಿನಿಯರ ಮನವಿಗೆ ಪ್ರಾಂಶುಪಾಲರು ಕಿವಿಗೊಡದೆ ಕಾಲೇಜು ಗೇಟ್ ಹಾಕಿದರು. ಕಾಲೇಜಿಗೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
Read more from source
[wpas_products keywords=”deal of the day sale today kitchen”]