ನುಡಿದಂತೆ ನಡೆಯುತ್ತಿರುವ ಅಲ್ಲು ಅರ್ಜುನ್
ಕೆಲವೇ ದಿನಗಳ ಹಿಂದೆಯಷ್ಟೇ ‘ಪುಷ್ಪ: ದಿ ರೈಸ್’ ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಅಲ್ಲು ಅರ್ಜುನ್ ಆಗಮಿಸಿದ್ದರು. ಆಗ, ಪುನೀತ್ ರಾಜ್‌ಕುಮಾರ್ ಮನೆಗೆ ಭೇಟಿ ನೀಡುತ್ತೀರಾ ಎಂದು ಮಾಧ್ಯಮಗಳು ಪ್ರಶ್ನೆ ಮಾಡಿದ್ದಾಗ, ‘’ಪುನೀತ್ ರಾಜ್‌ಕುಮಾರ್ ಅವರ ಕುಟುಂಬವನ್ನು ನಾನು ಭೇಟಿ ಮಾಡುತ್ತೇನೆ. ‘ಪುಷ್ಪ’ ಸಿನಿಮಾದ ಕೆಲಸಗಳಿಂದಾಗಿ ನಾನು ಬೆಂಗಳೂರಿಗೆ ಬರೋಕೆ ಆಗಿರಲಿಲ್ಲ. ಈಗ ‘ಪುಷ್ಪ’ ಸಿನಿಮಾದ ಪ್ರಮೋಷನ್‌ಗಾಗಿ ಬೆಂಗಳೂರಿಗೆ ಬಂದಿದ್ದೇನೆ. ಈ ಸಂದರ್ಭದಲ್ಲಿ ನಾನು ಅಲ್ಲಿಗೆ ಹೋಗುವುದು ಸರಿ ಅಲ್ಲ. ‘ಪುಷ್ಪ’ ರಿಲೀಸ್ ಆದ ಬಳಿಕ ನಾನು ಇನ್ನೊಮ್ಮೆ ಬೆಂಗಳೂರಿಗೆ ಬರುತ್ತೇನೆ. ಪುನೀತ್ ಕುಟುಂಬಸ್ಥರನ್ನು ಭೇಟಿ ಮಾಡುತ್ತೇನೆ. ಇದು ನನ್ನ ಕರ್ತವ್ಯ’’ ಎಂದು ಅಲ್ಲು ಅರ್ಜುನ್ ಹೇಳಿದ್ದರು.
ಅಂದು ಹೇಳಿದಂತೆಯೇ ಇಂದು ಪುನೀತ್ ರಾಜ್‌ಕುಮಾರ್ ಕುಟುಂಬಸ್ಥರನ್ನು ಭೇಟಿ ಮಾಡಲು ಅಲ್ಲು ಅರ್ಜುನ್ ಬೆಂಗಳೂರಿಗೆ ಬರುತ್ತಿದ್ದಾರೆ. ಹೈದರಾಬಾದ್‌ನಿಂದ ಬೆಂಗಳೂರಿಗೆ ಪ್ರೈವೇಟ್ ಜೆಟ್‌ನಲ್ಲಿ ಅಲ್ಲು ಅರ್ಜುನ್ ಆಗಮಿಸುತ್ತಿದ್ದಾರೆ.
ತೀವ್ರ ಸಂತಾಪ ವ್ಯಕ್ತಪಡಿಸಿದ್ದ ಅಲ್ಲು ಅರ್ಜುನ್
ಪುನೀತ್ ರಾಜ್‌ಕುಮಾರ್ ನಿಧನರಾದಾಗ ತೆಲುಗು ನಟ ಅಲ್ಲು ಅರ್ಜುನ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದರು. ‘ಪುಷ್ಪಕ ವಿಮಾನಂ’ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿದ್ದ ಅಲ್ಲು ಅರ್ಜುನ್, ಪುನೀತ್ ರಾಜ್‌ಕುಮಾರ್ ಬಗ್ಗೆ ಮಾತನಾಡಿದ್ದರು. ಅದೇ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ಮೌನಾಚರಣೆ ಮಾಡುವ ಮೂಲಕ ಅಪ್ಪು ಆತ್ಮಕ್ಕೆ ಶಾಂತಿ ಕೋರಿದ್ದರು.
ಅಂದು ಅಲ್ಲು ಅರ್ಜುನ್ ಹೇಳಿದ್ದೇನು?
ಅಕ್ಟೋಬರ್ 29 ರಂದು ಹಠಾತ್ ಸಾವಿಗೀಡಾದ ಕನ್ನಡ ನಟ ಪುನೀತ್ ರಾಜ್‌ಕುಮಾರ್ ಬಗ್ಗೆ ತೆಲುಗಿನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಭಾವುಕರಾಗಿ ಮಾತನಾಡಿದ್ದರು. ಆನಂದ್ ದೇವರಕೊಂಡ ನಟನೆಯ ‘ಪುಷ್ಪಕ ವಿಮಾನಂ’ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಲ್ಲು ಅರ್ಜುನ್, ಅದೇ ಸಿನಿಮಾದ ವೇದಿಕೆ ಮೇಲೆ ಪುನೀತ್ ರಾಜ್‌ಕುಮಾರ್ ಅವರನ್ನು ಸ್ಮರಿಸಿದ್ದರು.
‘’ನನಗೆ ಪುನೀತ್ ರಾಜ್‌ಕುಮಾರ್ ಬಹಳ ವರ್ಷಗಳಿಂದ ಪರಿಚಯ. ನಮ್ಮ ಮನೆಗೆ ಬಂದಿದ್ದಾರೆ. ಒಟ್ಟಿಗೆ ಊಟ ಮಾಡಿದ್ದೇವೆ. ನಾನು ಬೆಂಗಳೂರಿಗೆ ಹೋಗಿದ್ದಾಗ, ಅವರ ಮನೆಗೆ ಹೋಗಿದ್ದೇನೆ, ಊಟ ಮಾಡಿದ್ದೇನೆ. ನಮ್ಮಿಬ್ಬರಿಗೂ ಪರಸ್ಪರ ಗೌರವ ಇದೆ. ಫಂಕ್ಷನ್‌ಗಳಲ್ಲಿ ಮೀಟ್ ಮಾಡಿದಾಗಲೂ ಮಾತನಾಡುತ್ತಿದ್ವಿ. ಒಂದು ಡ್ಯಾನ್ಸ್ ಕಾರ್ಯಕ್ರಮದಲ್ಲಿ ನಾವಿಬ್ಬರು ಜಡ್ಜ್ ಆಗಿದ್ವಿ. ಯಾವಾಗ ಮಾತನಾಡಿದರೂ ಬೆಂಗಳೂರಿಗೆ ಬನ್ನಿ.. ನಮ್ಮ ಮನೆಗೆ ಬನ್ನಿ.. ಅಂತ ಕರೆಯುತ್ತಿದ್ದರು. ಖಂಡಿತ ಬರ್ತೀನಿ ಅಂತ ನಾನೂ ಹೇಳುತ್ತಿದ್ದೆ. ಹೀಗೆ ಮಾತಾಡ್ತಾ, ಮಾತಾಡ್ತಾ ಸಡನ್ ಆಗಿ ಅವರು ಇಲ್ಲ ಅಂದ್ರೆ….’’
’ಇದ್ದಕ್ಕಿದ್ದ ಹಾಗೆ ಪುನೀತ್ ಅವರು ನಮ್ಮನ್ನೆಲ್ಲ ಅಗಲಿದರು. ಅವರ ನಿಧನವಾರ್ತೆ ಕೇಳಿದಾಗ ನನಗೆ ನಿಜಕ್ಕೂ ತುಂಬಾ ಶಾಕ್ ಆಯ್ತು. ಜೀವನ ಎಷ್ಟು ಅನಿರೀಕ್ಷಿತ… ಪುನೀತ್ ಹಠಾತ್ ಸಾವಿಗೀಡಾದರು. ನನಗೆ ತುಂಬಾ ಆಘಾತವಾಯಿತು. ಮಧ್ಯಾಹ್ನದಿಂದ ರಾನಾ ಕಡೆಯಿಂದ ನನಗೆ ತುಂಬಾ ಮಿಸ್ಡ್ ಕಾಲ್ಸ್ ಬಂದಿತ್ತು. ಶೂಟಿಂಗ್‌ನಲ್ಲಿದ್ದೆ ಏನು ಅಂತ ಕೇಳಿದ್ದಕ್ಕೆ, ‘’ಬಾವಾ ಜೀವನ ತುಂಬಾ ಅನಿರೀಕ್ಷಿತ. ಅನೇಕ ಬಾರಿ ನಿಮಗೆ ಫೋನ್ ಮಾಡಬೇಕು ಅಂದುಕೊಂಡಿದ್ದೆ. ಆದರೆ ಮಾಡಿರಲಿಲ್ಲ. ಇವತ್ತು ಯಾಕೋ ಮಾತನಾಡಬೇಕು ಅನಿಸಿತು’’ ಎಂದರು. ‘’ನನಗೂ ಅರ್ಥ ಆಯ್ತು. ನಾವೆಲ್ಲರೂ ಈಗ ಒಂದೇ ಝೋನ್‌ನಲ್ಲಿ ಇದ್ದೀವಿ’’
‘’ಜೀವನದಲ್ಲಿ ಹ್ಯಾಪಿ ಆಗಿರಿ. ಯಾಕಂದ್ರೆ, ಯಾವಾಗ ಏನಾಗುತ್ತೆ ಅಂತ ಹೇಳೋಕೆ ಆಗಲ್ಲ. ಪುನೀತ್ ರಾಜ್‌ಕುಮಾರ್ ಎಷ್ಟು ದೊಡ್ಡ ಸೂಪರ್ ಸ್ಟಾರ್. ಅವರ ಕೊಡುಗೆ ಕನ್ನಡ ಚಿತ್ರರಂಗಕ್ಕೆ ಅಪಾರ. ಅವರು ದಕ್ಷಿಣ ಭಾರತ ಮತ್ತು ಭಾರತೀಯ ಚಿತ್ರರಂಗದ ಹೆಮ್ಮೆ. ಪುನೀತ್ ರಾಜ್‌ಕುಮಾರ್‌ಗಾಗಿ ದಯವಿಟ್ಟು ಎಲ್ಲರೂ ಎದ್ದು ನಿಂತು ಎರಡು ನಿಮಿಷ ಮೌನಾಚರಣೆ ಮಾಡೋಣ’’ ಎಂದು ಅಂದು ಅಲ್ಲು ಅರ್ಜುನ್ ಹೇಳಿದ್ದರು.
Read more
[wpas_products keywords=”deal of the day party wear dress for women stylish indian”]