Source : The New Indian Express
ತಿರುಪತಿ: ಶಾಸಕಿ ಹಾಗೂ ನಟಿ ರೋಜಾ ಮತ್ತು ಟಿಡಿಪಿ ಮುಖಂಡ, ಮಾಜಿ ಸಚಿವ ಯನಮ ರಾಮಕೃಷ್ಣುಡು ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಲ್ಯಾಂಡಿಂಗ್ ಸಮಸ್ಯೆ ಕಾಣಿಸಿಕೊಂಡಿದೆ. ತಿರುಪತಿಯಲ್ಲಿ ಇಳಿಯಬೇಕಾದ ವಿಮಾನ ಕಡೆಗೆ ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ
ನಗರಿ ವಿಧಾನಸಭಾ ಕ್ಷೇತ್ರದ ಶಾಸಕಿ ಆರ್.ಕೆ. ರೋಜಾ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ಕೇಳಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ಸ್ಪಲ್ಪದರಲ್ಲೇ ಭಾರಿ ವಿಮಾನ ದುರಂತ ತಪ್ಪಿದೆ.
ರಾಜಮಂಡ್ರಿಯಿಂದ ತಿರುಪತಿಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಲ್ಯಾಂಡಿಂಗ್ ಸಮಸ್ಯೆ ಎದುರಾಗಿದೆ. ವಿಮಾನ ಸುಮಾರು ಒಂದು ಗಂಟೆ ಕಾಲ ಗಾಳಿಯಲ್ಲಿಯೇ ಸುತ್ತಿದೆ. ನಂತರ ಪೈಲಟ್ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಸಿದ್ದಾರೆ.. ಹಾಗಾಗಿ ಯಾವುದೇ ತೊಂದರೆ ಉಂಟಾಗಿಲ್ಲ. ವಿಮಾನದಲ್ಲಿ ಉಂಟಾದ ಬಿಗುವಿನ ಪರಿಸ್ಥಿತಿ ಬಗ್ಗೆ ವಿಡಿಯೋ ಮೂಲಕ ರೋಜಾ ಅವರು ಮಾಹಿತಿ ಹಂಚಿಕೊಂಡರು. ಎಲ್ಲ 70 ಮಂದಿ ಪ್ರಯಾಣಿಕರು ಸೇಫ್ ಆಗಿದ್ದಾರೆ ಎಂಬ ವಿಷಯ ತಿಳಿದು ನಿಟ್ಟುಸಿರು ಬಿಡುವಂತಾಗಿದೆ.
ಹವಾಮಾನ ಸಮಸ್ಯೆ ಅಥವಾ ತಾಂತ್ರಿಕ ಸಮಸ್ಯೆಯೇ ಕಾರಣದಿಂದ ಈ ಅನಾಹುತವಾಗಿದೆಯಾ ಎಂಬುದನ್ನು ಇನ್ನು ಸಂಸ್ಥೆಯ ಯಾವ ಸಿಬ್ಬಂದಿ ಕೂಡ ಸ್ಪಷ್ಟಪಡಿಸಿಲ್ಲ. ಕೆಲ ಗಂಟೆಗಳ ಕಾಲ ವಿಮಾನದ ಬಾಗಿಲು ಮುಚ್ಚಿದ ಕಾರಣ ಎಲ್ಲ ಪ್ರಯಾಣಿಕರು ಉಸಿರುಗಟ್ಟುವ ವಾತವಾರಣ ನಿರ್ಮಾಣ ಆಯಿತು. ಲ್ಯಾಂಡಿಂಗ್ ಆದ ಬಳಿಕವೂ ಪ್ರಯಾಣಿಕರಿಗೆ ಸುರಕ್ಷತೆಗೆ ಸಂಸ್ಥೆ ಆದ್ಯತೆ ನೀಡಿಲ್ಲ. ಅವರ ಆರೋಗ್ಯ ವಿಚಾರ ಕುರಿತು ಕಾಳಜಿವಹಿಸಿಲ್ಲ ಎಂದು ಶಾಸಕಿ ರೋಜಾ ಕಿಡಿಕಾರಿದ್ದಾರೆ.
ತಾಂತ್ರಿಕ ದೋಷದಿಂದ ವಿಮಾನ ಬೆಂಗಳೂರಿಗೆ ಬಂದಿಳಿಸಲು ಪ್ರಯಾಣಿಕರಿಂದ ಬಲವಂತವಾಗಿ 5 ಸಾವಿರ ವಸೂಲಿ ಮಾಡಿದ್ದಾರೆ. ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲು ಹತ್ತುತ್ತೇನೆ. ವಿಮಾನ ಸಂಸಥೆ ಪ್ರಯಾಣಿಕರೊಂದಿಗೆ ನಡೆದುಕೊಳ್ಳುವ ರೀತಿ ತುಂಬಾ ಕೆಟ್ಟದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೊದಲೇ ನಿಗದಿ ಆದಂತೆ ಬೆಳಗ್ಗೆ 10.30ಕ್ಕೆ ಈ ವಿಮಾನ ತಿರುಪತಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ದೇವನಹಳ್ಳಿಯಲ್ಲಿ ಲ್ಯಾಂಡ್ ಆದ ಬಳಿಕ ತಾಂತ್ರಿಕ ದೋಷ ಸರಿಪಡಿಸಿಕೊಂಡು ತಿರುಪತಿಗೆ ತೆರಳಲಿ ಸಿದ್ಧತೆ ಮಾಡಲಾಯಿತು.