
ಜಿನೀವಾ: ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ಓಮೈಕ್ರಾನ್ ಸೋಂಕು ಬಹುತೇಕ ಎಲ್ಲ ರಾಷ್ಟ್ರಗಳಿಗೂ ಹಿಂದೆಂದೂ ಕಾಣದ ರೀತಿಯಲ್ಲಿ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಚ್ಚರಿಸಿದೆ.
ಈ ಕುರಿತು ಮಾಹಿತಿ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧನಾಮ್ ಗೆಬ್ರೇಷಿಯಸ್, ‘ಕೊರೊನಾ ವೈರಸ್‌ನ ಓಮೈಕ್ರಾನ್ ರೂಪಾಂತರ ತಳಿ 77 ರಾಷ್ಟ್ರಗಳಲ್ಲಿ ವರದಿಯಾಗಿದೆ. ಬಹುಶಃ ಹಿಂದೆಂದೂ ಯಾವ ರೂಪಾಂತರ ತಳಿಯಲ್ಲೂ ಕಾಣದ ರೀತಿಯಲ್ಲಿ ಹೆಚ್ಚಿನ ರಾಷ್ಟ್ರಗಳಿಗೆ ಪತ್ತೆಹಚ್ಚಲಾಗದ ರೀತಿಯಲ್ಲಿ ಹರಡಿದೆ’ ಎಂದು ಹೇಳಿದ್ದಾರೆ.
ಅದೇ ಹೊತ್ತಿನಲ್ಲಿ ಓಮೈಕ್ರಾನ್ ಹರಡುವುದನ್ನು ನಿಯಂತ್ರಿಸಲು ಮತ್ತು ಆರೋಗ್ಯ ವ್ಯವಸ್ಥೆಯನ್ನು ರಕ್ಷಿಸಲು ತ್ವರಿತವಾಗಿ ಕಾರ್ಯಪ್ರವೃತರಾಗಲು ರಾಷ್ಟ್ರಗಳಿಗೆ ಡಬ್ಲ್ಯುಎಚ್‌ಒ ಸೂಚಿಸಿದೆ.
ಸೌಮ್ಯ ಲಕ್ಷಣಗಳನ್ನು ಹೊಂದಿರುವ ಓಮೈಕ್ರಾನ್ ಕಡಿಮೆ ಅಪಾಯಕಾರಿ ಎಂಬ ನಿಲುವಿಗೆ ಬರುವುದರ ವಿರುದ್ಧ ಡಬ್ಲ್ಯುಎಚ್‌ಒ ತಜ್ಞ ಬ್ರೂಸ್ ಐಲ್ವಾರ್ಡ್ ಎಚ್ಚರಿಸಿದ್ದಾರೆ. ಇದರಿಂದ ‘ನಾವು ಅತ್ಯಂತ ಅಪಾಯಕಾರಿ ಸನ್ನಿವೇಶವನ್ನು ಸೃಷ್ಟಿ ಮಾಡುತ್ತಿರಬಹುದು’ ಎಂದು ಹೇಳಿದ್ದಾರೆ.
ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಪ್ರಮಾಣ ಕಡಿಮೆ ಇರುವ ಆಫ್ರಿಕಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ಹುಟ್ಟಲು ಅವಕಾಶವನ್ನು ಒದಗಿಸಿದಂತಾಗಿದೆ ಎಂದು ಹೇಳಿದ್ದಾರೆ.
ಓಮೈಕ್ರಾನ್ ಪ್ರಕರಣವನ್ನು ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆ ಹಚ್ಚಲಾಗಿತ್ತು. ಇದು ಅತಿ ವೇಗದಲ್ಲಿ ಹರಡುತ್ತಿದ್ದರೂ ಸಾವಿನ ಸಂಖ್ಯೆ ಕಡಿಮೆ ವರದಿಯಾಗಿದೆ. ಆದರೂ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ವಿಪರೀತ ಏರಿಕೆಯನ್ನು ಕಂಡಿದೆ. ಅಲ್ಲದೆ ಭಾರತದಲ್ಲಿ ಮೊದಲು ಪತ್ತೆಯಾಗಿರುವ ಡೆಲ್ಟಾ ರೂಪಾಂತರ ತಳಿಗಿಂತಲೂ ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ.