ಹೈಲೈಟ್ಸ್:
- ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳಲ್ಲಿ ಮದುವೆ ಸೇರಿದಂತೆ ಇತರೆ ಸಮಾರಂಭ ಕಾರ್ಯಗಳು ಗರಿಗೆದರಿದೆ
- ದೇವಾಲಯ, ಕಲ್ಯಾಣ ಮಂಟಪದ ಜತೆಗೆ ಫಂಕ್ಷನ್ ಹಾಲ್‌ಗಳಲ್ಲಿ ಸಭೆ ಸಮಾರಂಭಗಳ ಆಯೋಜನೆ ಹೆಚ್ಚುತ್ತಿದೆ
- ಡಿಸೆಂಬರ್ ತಿಂಗಳಲ್ಲಿ ಮೂಹೂರ್ತಗಳು ಚೆನ್ನಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮದುವೆ, ನಾಮಕರಣದಂತಹ ಕಾರ್ಯಕ್ರಮಗಳು ನಡೆಯಲಿದೆ
ಬೆಂಗಳೂರು ಗ್ರಾಮಾಂತರ: ರಾಜ್ಯದಲ್ಲಿ ಓಮಿಕ್ರಾನ್ ಸೋಂಕು ಕಡಿಮೆ ಇದ್ದರೂ ಜನರಲ್ಲಿ ಕೊರೊನಾ 3ನೇ ಅಲೆಯ ಭೀತಿ ಎದುರಾಗಿದೆ. ಇದರಿಂದ ಮದುವೆ, ನಾಮಕರಣ, ಕನ್ನಡ ರಾಜ್ಯೋತ್ಸವದಂತಹ ಸಮಾರಂಭಗಳು ತ್ವರಿತವಾಗಿ ನಡೆಸಲು ಜನರು ಮುಂದಾಗುತ್ತಿದ್ದಾರೆ.
ಜಿಲ್ಲೆಯ 4 ತಾಲೂಕುಗಳಲ್ಲಿ ಮದುವೆ ಸೇರಿದಂತೆ ಇತರೆ ಸಮಾರಂಭ ಕಾರ್ಯಗಳು ಗರಿಗೆದರಿದೆ. ಸಮಾರಂಭಕ್ಕೆ ಅಗತ್ಯವಾದ ಬಟ್ಟೆ, ಒಡವೆ, ದಿನಸಿ ವಸ್ತುಗಳ ಖರೀದಿ ಜೋರಾಗಿದೆ. ದೇವಾಲಯ, ಕಲ್ಯಾಣ ಮಂಟಪದ ಜತೆಗೆ ಫಂಕ್ಷನ್ ಹಾಲ್‌ಗಳಲ್ಲಿ ಸಭೆ ಸಮಾರಂಭಗಳ ಆಯೋಜನೆ ಹೆಚ್ಚುತ್ತಿದೆ. ಕೊರೊನಾ 3ನೇ ಅಲೆ ಬರುವಷ್ಟರಲ್ಲಿ ಮದುವೆ ಮುಗಿಸಲು ಬಹುತೇಕ ಜನರು ಪ್ರಯತ್ನಿಸುತ್ತಿದ್ದಾರೆ.
ತರಾತುರಿ ಮದುವೆ
ಕಳೆದೆರಡು ವರ್ಷಗಳಿಂದ ಕೊರೊನಾಂತಕದಲ್ಲಿಯೇ ಕಳೆಯುವಂತಾಗಿದೆ. ಕಳೆದ ಬಾರಿ 2 ನೇ ಅಲೆಯಿಂದ ಲಾಕ್‌ಡೌನ್ ಹೇರಲಾಗಿತ್ತು. ಇದರಿಂದ ಮದುವೆಗಳನ್ನು ಮುಂದೂಡಬೇಕಾದ ಪರಿಸ್ಥಿತಿ ಎದುರಾಗಿತ್ತು. ಇದೀಗ ಕೊರೊನಾ 3ನೇ ಅಲೆಯ ಭೀತಿ ಕಾಣಿಸುತ್ತಿದೆ. ಇದರಿಂದ ಮತ್ತೆ ಲಾಕ್‌ಡೌನ್ ಹಾಗೂ ನಿರ್ಬಂಧಗಳು ಆರಂಭವಾದರೆ ಮದುವೆ ಸಮಾರಂಭಗಳಿಗೆ ಸಮಸ್ಯೆಯಾಗಲಿದೆ. ಇದರಿಂದ ಮದುವೆಗಳನ್ನು ಆದಷ್ಟು ಬೇಗ ಮುಗಿಸಿಕೊಳ್ಳಲು ಜನರು ಮುಂದಾಗುತ್ತಿದ್ದಾರೆ.
ಡಿಸೆಂಬರ್‌ನಲ್ಲಿ ಹೆಚ್ಚಿನ ಮದುವೆ
ಜಿಲ್ಲೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ಹೆಚ್ಚಿನ ಕಾರ್ಯಕ್ರಮಗಳು ನಡೆಯುತ್ತಿದೆ. ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಒಳ್ಳೆಯ ಮುಹೂರ್ತಗಳು ಕಡಿಮೆ ಇದೆ. ಡಿಸೆಂಬರ್ ತಿಂಗಳಲ್ಲಿ ಮೂಹೂರ್ತಗಳು ಚೆನ್ನಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮದುವೆ, ನಾಮಕರಣದಂತಹ ಕಾರ್ಯಕ್ರಮಗಳು ನಡೆಯಲಿದೆ. ಕಳೆದ ಬಾರಿ ಕೊರೊನಾ ಭೀತಿಯಿಂದ ಮುಂದೂಡಲ್ಪಟ್ಟಂತಹ ಕಾರ್ಯಕ್ರಮಗಳು ಹಾಗೂ ಈ ಬಾರಿ ಕಾರ್ಯಕ್ರಮಗಳು ನಡೆಯುತ್ತಿದೆ. ಇದರಿಂದ ಎಲ್ಲೆಡೆ ಮದುವೆ ಕಾರ್ಯಕ್ರಮಗಳು ಹೆಚ್ಚಿದೆ.
ದುಬಾರಿ ಖರೀದಿ
ಕಳೆದ ತಿಂಗಳಿಂದ ಸುರಿದ ಮಳೆಯಿಂದ ಅನೇಕ ಅವಾಂತರ ಸೃಷ್ಟಿಯಾಗಿದೆ. ಜಿಲ್ಲೆಯಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿದೆ. ಇದರಿಂದ ತರಕಾರಿ, ಹಣ್ಣು , ಹೂಗಳ ಪೂರೈಕೆ ಕುಸಿತ ಕಂಡಿದೆ. ಇದೀಗ ಸಮಾರಂಭಗಳ ಹೆಚ್ಚುತ್ತಿದ್ದು ತರಕಾರಿ, ಹೂಹಣ್ಣುಗಳ ಬೇಡಿಕೆ ಹೆಚ್ಚಿದೆ. ಆದರೆ ಪೂರೈಕೆ ಕುಸಿತದಿಂದ ಅಗತ್ಯ ವಸ್ತುಗಳ ದರದಲ್ಲಿ ಏರಿಕೆ ಕಂಡಿದ್ದು ಮದುವೆ ಖರೀದಿ ದುಬಾರಿಯಾಗಿದೆ.
ಶಾಮಿಯಾನಕ್ಕೆ ಬೇಡಿಕೆ
ಮದುವೆ ಸೇರಿದಂತೆ ಶುಭ ಕಾರ್ಯಗಳು ಹೆಚ್ಚಾಗಿ ನಡೆಯುತ್ತಿರುವ ಹಿನ್ನೆಲೆ ಶಾಮಿಯಾನ, ಅಡುಗೆಯವರಿಗೆ, ಡೆಕೋರೇಷನ್ ಮಾಡುವವರಿಗೆ ಬೇಡಿಕೆ ಹೆಚ್ಚಿದೆ. ಕೊರೊನಾ ಹೆಚ್ಚಾದರೆ ಕಾರ್ಯಕ್ರಮ ನಡೆಸುವುದು ಕಷ್ಟವಾಗಲಿದೆ. ಇದರಿಂದ ಕಾರ್ಯಕ್ರಮ ಈಗಾಗಲೇ ನಡೆಸಲು ಜನರು ಮುಂದಾಗುತ್ತಿದ್ದಾರೆ.