Karnataka news paper

ಪರಿಷತ್ ಚುನಾವಣೆ ಫಲಿತಾಂಶ: ಆಡಳಿತರೂಢ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರ; ಕಾಂಗ್ರೆಸ್ ಶಾಸಕಾಂಗ ಸಭೆ


Source : Online Desk

ಬೆಳಗಾವಿ: ವಿಧಾನ ಮಂಡಲ ಅಧಿವೇಶನವಿದ್ದರೂ ಮೇಲ್ಮನೆ ಚುನಾವಣೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದ ಕಾಂಗ್ರೆಸ್,  ಫಲಿತಾಂಶದಲ್ಲಿ ಬಿಜೆಪಿಗೆ ಸಮಬಲವನ್ನು ಸಾಬೀತು ಪಡಿಸಿ ಸದ್ಯ ಫಲಿತಾಂಶ ನಿರಾಳತೆಯನ್ನು ನೀಡಿದಂತಿದೆ. ಹೀಗಿದ್ದರೂ ಎರಡೂ ಸದನಗಳಲ್ಲಿ ಬಿಜೆಪಿಯನ್ನು ಕಟ್ಟಿಹಾಕಬೇಕೆಂಬ ವಿಪಕ್ಷದ ತಂತ್ರ ಇದ್ದೇಯಿದೆ.

ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ‌ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಸಿ ಬಿಜೆಪಿಯನ್ನು ಕಟ್ಟಿಹಾಕಲು ಯೋಜನೆ ರೂಪಿಸಲಾಗಿದೆ. ಸಭೆಯಲ್ಲಿ ಮೇಲ್ಮನೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕೈ ಅಭ್ಯರ್ಥಿಗಳಿಗೆ ಪಕ್ಷದ ವತಿಯಿಂಸ ಧನ್ಯವಾದ ಸಲ್ಲಿಸಿ ಅಭಿನಂದಿಸಲಾಯಿತು.

ಶಾಸಕಾಂಗ ಸಭೆಯಲ್ಲಿ ಉಭಯ ಸದನಗಳಲ್ಲಿ ಚರ್ಚಿಸಿಬೇಕಾದ, ವಿರೋಧಿಸಬೇಕಾದ ವಿಷಯಗಳ ಬಗ್ಗೆ ಚರ್ಚೆ‌ನಡೆಸಿದ ನಾಯಕರು ಬಿಜೆಪಿ‌ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು‌ ಸಮರ್ಥ ವಿಷಯ ಮಂಡನೆ‌- ವಾದ ಮಾಡುವ ಬಗ್ಗೆಯೂ ಚರ್ಚೆ ನಡೆಸಿದರೆನ್ನಲಾಗಿದೆ.

ಮುಖ್ಯವಾಗಿ ಈ ಬಾರಿ ಬಿಜೆಪಿ‌ ಸರ್ಕಾರ ಮಂಡಿಸಲಿರುವ ಮತಾಂತರ ವಿಧೇಯಕವನ್ನು ಬಲವಾಗಿ ವಿರೋಧಿಸುವುದು, ಬಿಟ್ ಕಾಯಿನ್ ವಿಷಯ ಪ್ರಸ್ತಾಪಿಸುವುದು‌‌ಸೇರಿದಂತೆ ಇನ್ನುಳಿದ ವಿಷಯಗಳ ಬಗ್ಗೆ ಹೇಗೆ ನಡೆಯಿಡಬೇಕು ಎಂಬುದು ಚರ್ಚೆಯ ವಿಷಯವಾಗಿತ್ತು.

ಇದನ್ನೂ ಓದಿ: 12 ಕ್ಷೇತ್ರದಲ್ಲಿ ಗೆಲ್ಲುವ ನಿರೀಕ್ಷೆಯಿತ್ತು; ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದೆ: ವಿಪಕ್ಷ ನಾಯಕ ಸಿದ್ದರಾಮಯ್ಯ

ಇತ್ತೀಚಿನ ದಿನಗಳಲ್ಲಿ ಮುನಿಸುಗೊಂಡು‌ ಕಾಂಗ್ರೆಸ್ ವೇದಿಕೆಗಳಿಂದ‌ ದೂರ ಉಳಿದಿದ್ದ ಸಿಎಂ ಇಬ್ರಾಹಿಂ ಸಭೆಯಲ್ಲಿ ಭಾಗವಹಿಸಿರುವುದು ಸಹ ಗಮನ‌ ಸೆಳೆಯಿತು.ಹೀಗೆ ಭಾಗವಹಿಸಿರುವುದು ಇಬ್ರಾಹಿಂ ತೆನೆಹೊತ್ತ ಮಹಿಳೆಯ ಸಾಂಗತ್ಯದಿಂದ ದೂರವಿರಲೆತ್ನಿಸುತ್ತಿದ್ದಾರೆ ಎಂಬ ಸೂಚನೆಯನ್ನು ರವಾನಿಸುವಂತಿತ್ತು. ಚರ್ಚೆ ವೇಳೆ ಎರಡೂ ಸದನಗಳಲ್ಲಿ ಕಾಂಗ್ರೆಸ್ ಸದಸ್ಯರು ಕಡ್ಡಾಯ ಹಾಜರಿರಬೇಕು, ಒಗ್ಗಟ್ಟು ಪ್ರದರ್ಶಿಸಬೇಕು. ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಅದಕ್ಕೆ ಬೇಕಾದ ಅಂಶಗಳ ಸಿದ್ಧತೆಯಿರಬೇಕೆಂದು ಸಿದ್ದರಾಮಯ್ಯ ಸಭೆಯಲ್ಲಿ ಸೂಚಿಸಿದ್ದರೆನ್ನಲಾಗಿದೆ.

 

 



Read more