ಬೆಂಗಳೂರು: 2021-22ನೇ ಸಾಲಿನ ಹಣಕಾಸು ವರ್ಷದ ಅಂತ್ಯಕ್ಕೆ ಎರಡು ತಿಂಗಳಷ್ಟೇ ಬಾಕಿ ಉಳಿದಿದ್ದು, ಬಿಬಿಎಂಪಿಯು ಆಸ್ತಿ ತೆರಿಗೆ ಸಂಗ್ರಹದ ನಿಗದಿತ ಗುರಿ ಮುಟ್ಟಲು ಸುಸ್ತಿದಾರರ ವಿರುದ್ಧ ಸಮರ ಸಾರಿದೆ. ಲಕ್ಷಾಂತರ ರೂ. ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾಲೀಕರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತಹ ‘ಅಸ್ತ್ರ’ ಪ್ರಯೋಗಿಸಲು ಮುಂದಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 25 ಲಕ್ಷ ರೂ.ಗಳಿಗಿಂತ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಕೈಗಾರಿಕೆಗಳು, ಕಂಪನಿಗಳು, ವಾಣಿಜ್ಯ ಸಂಕೀರ್ಣಗಳು, ಮಾಲ್ಗಳು, ಅಪಾರ್ಟ್ಮೆಂಟ್ಗಳು, ಕಲ್ಯಾಣ ಮಂಟಪಗಳು, ಶಾಲಾ – ಕಾಲೇಜುಗಳು ಹಾಗೂ ಇನ್ನಿತರೆ ವಾಣಿಜ್ಯ ಕಟ್ಟಡಗಳನ್ನು ಪಟ್ಟಿ ಮಾಡಲಾಗಿದೆ. ಈ ಸ್ವತ್ತುಗಳಿಂದ ಕೋಟ್ಯಂತರ ರೂ. ತೆರಿಗೆ ಬಾಕಿ ಬರಬೇಕಿದೆ.
ನಗರದಲ್ಲಿ 25 ಲಕ್ಷಕ್ಕಿಂತ ಹೆಚ್ಚು ಆಸ್ತಿಗಳಿದ್ದರೂ, ತೆರಿಗೆ ಜಾಲದಡಿ ಬಂದಿರುವುದು 18,52,802 ಸ್ವತ್ತುಗಳು ಮಾತ್ರ. ಈ ಎಲ್ಲ ಆಸ್ತಿಗಳಿಂದಲೂ ಸಮರ್ಪಕವಾಗಿ ತೆರಿಗೆ ಪಾವತಿಯಾಗುತ್ತಿಲ್ಲ. ಪ್ರತಿ ವರ್ಷ 13 ರಿಂದ 14 ಲಕ್ಷ ಸ್ವತ್ತುಗಳ ಮಾಲೀಕರಷ್ಟೇ ತೆರಿಗೆ ಕಟ್ಟುತ್ತಿದ್ದಾರೆ. ಹಾಗಾಗಿ, ಬಾಕಿ ಆಸ್ತಿ ತೆರಿಗೆಯ ಮೊತ್ತ ದೊಡ್ಡದಾಗುತ್ತಲೇ ಇದೆ.
ಬಿಬಿಎಂಪಿಯು ಪ್ರಸಕ್ತ ಸಾಲಿನಲ್ಲಿ 942.30 ಕೋಟಿ ರೂ. ಬಾಕಿ ಸೇರಿ ಒಟ್ಟು 4,000.53 ಕೋಟಿ ರೂ. ತೆರಿಗೆ ಸಂಗ್ರಹಿಸುವ ಗುರಿ ಹಾಕಿಕೊಂಡಿದೆ. ಇಲ್ಲಿಯವರೆಗೆ 565.47 ಕೋಟಿ ರೂ. ಬಾಕಿ ಸೇರಿ 2,745.21 ಕೋಟಿ ರೂ. ವಸೂಲು ಮಾಡಲಾಗಿದೆ. ಆರ್ಥಿಕ ವರ್ಷದ ಅಂತ್ಯಕ್ಕೆ ಇನ್ನು ಎರಡು ತಿಂಗಳಷ್ಟೇ ಬಾಕಿ ಇದ್ದು, 1,255.32 ಕೋಟಿ ರೂ. ತೆರಿಗೆ ಬರಬೇಕಿದೆ.
ಪಾಲಿಕೆಯ 8 ವಲಯಗಳಲ್ಲಿನ ಮಾಲ್ಗಳು, ಟೆಕ್ ಪಾರ್ಕ್ಗಳು, ಅಪಾರ್ಟ್ಮೆಂಟ್ಗಳು, ಕಲ್ಯಾಣ ಮಂಟಪಗಳು, ಶಾಲಾ – ಕಾಲೇಜುಗಳು ಮತ್ತು ವಾಣಿಜ್ಯ ಕಟ್ಟಡಗಳಿಂದ 328.03 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಬರಬೇಕಿದೆ. ಸಂಬಂಧಪಟ್ಟ ಮಾಲೀಕರು ಕಾರಣ ಕೇಳಿ ನೋಟಿಸ್ ಕೊಟ್ಟರೂ ಸ್ಪಂದಿಸಿಲ್ಲ. ಹೀಗಾಗಿಯೇ, ಜಪ್ತಿ ವಾರೆಂಟ್ ಜಾರಿ ಮಾಡಲಾಗುತ್ತಿದೆ. ಇಂಥ ಪ್ರಕರಣಗಳಲ್ಲಿ ಆಸ್ತಿ ತೆರಿಗೆ ಮೇಲೆ 2020-21ನೇ ಸಾಲಿನವರೆಗೆ ತಿಂಗಳಿಗೆ ಶೇ 2ರಷ್ಟು ಬಡ್ಡಿ ವಿಸಲಾಗುತ್ತಿತ್ತು. 2021-21ನೇ ಸಾಲಿನಿಂದ ಬಡ್ಡಿ ಮೊತ್ತವನ್ನು ಇಳಿಕೆ ಮಾಡಲಾಗಿದೆ. ವಾರ್ಷಿಕ ಶೇ 9ರಷ್ಟು ಬಡ್ಡಿ ವಸೂಲಾತಿ ಮಾಡಲಾಗುತ್ತಿದೆ.
ಬ್ಯಾಂಕ್ ಖಾತೆ ಮುಟ್ಟಗೋಲು..!
ಕೆಎಂಸಿ ಕಾಯಿದೆ ಅನ್ವಯ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾಲೀಕರ ಚರಾಸ್ತಿಯನ್ನಷ್ಟೇ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿತ್ತು. ಬಿಬಿಎಂಪಿ ಕಾಯಿದೆ – 2020ರಂತೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಲ್ಲಿ ಚರ, ಸ್ಥಿರ ಮತ್ತು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡು ತೆರಿಗೆ ವಸೂಲು ಮಾಡಲು ಅವಕಾಶ ಕಲ್ಪಿಸಲಾಗಿದೆ. ಹೊಸ ಕಾಯಿದೆಯಲ್ಲಿರುವ ಅಸ್ತ್ರಗಳನ್ನು ಬಳಸಿಕೊಂಡು ತೆರಿಗೆ ವಸೂಲು ಮಾಡಲು ಕ್ರಮ ವಹಿಸಲಾಗುತ್ತಿದೆ. ಜಪ್ತಿ ವಾರೆಂಟ್ ಜಾರಿ ಮಾಡಿದ ಬಳಿಕವೂ ತೆರಿಗೆ ಕಟ್ಟದಿದ್ದರೆ, ಸಂಬಂಧಪಟ್ಟವರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡು ತೆರಿಗೆ ಸಂಗ್ರಹಿಸಲು ತೀರ್ಮಾನಿಸಲಾಗಿದೆ.
ತಪ್ಪು ವಿಸ್ತೀರ್ಣ ಲೆಕ್ಕ – 627 ಕೋಟಿ ರೂ. ಬಾಕಿ
ಪಾಲಿಕೆ ವ್ಯಾಪ್ತಿಯಲ್ಲಿ ವಸತಿ ಹಾಗೂ ವಾಣಿಜ್ಯ ಕಟ್ಟಡಗಳ ಆಸ್ತಿ ತೆರಿಗೆಯನ್ನು ಮಾಲೀಕರೇ ಸ್ವಯಂ ಘೋಷಿಸಿ, ಪಾವತಿಸುವ ಪದ್ಧತಿ ಜಾರಿಯಲ್ಲಿದೆ. ತಮ್ಮ ಕಟ್ಟಡದ ವಿಸ್ತೀರ್ಣ ಎಷ್ಟು ಎಂಬುದನ್ನು ಘೋಷಿಸಿ, ಪಾಲಿಕೆಯು ನಿಗದಿಪಡಿಸಿದ ದರದಲ್ಲಿ ತೆರಿಗೆ ಲೆಕ್ಕಾಚಾರವನ್ನೂ ಮಾಡಿ ಪಾವತಿಸಬೇಕು. ಆದರೆ, ತಪ್ಪು ಮಾಹಿತಿ ನೀಡಿ ವಂಚಿಸಿರುವವರ ಸಂಖ್ಯೆಯೇ ಹೆಚ್ಚಿದೆ. ತೆರಿಗೆ ವಂಚಿಸುತ್ತಿದ್ದ ಟೆಕ್ ಪಾರ್ಕ್ಗಳು, ಮಾಲ್ಗಳು, ಐಷಾರಾಮಿ ಹೋಟೆಲ್ಗಳು, ವಾಣಿಜ್ಯ ಕಟ್ಟಡಗಳ ನಿಖರವಾದ ವಿಸ್ತೀರ್ಣವನ್ನು ಪತ್ತೆ ಹಚ್ಚಲು ಪಾಲಿಕೆಯು ಟೋಟಲ್ ಸ್ಟೇಷನ್ ಸರ್ವೆ ನಡೆಸಿತ್ತು.
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾಲೀಕರಿಗೆ ಜಪ್ತಿ ವಾರೆಂಟ್ ಜಾರಿ ಮಾಡಲಾಗುತ್ತಿದೆ. ಜಪ್ತಿ ವಾರೆಂಟ್ ನೀಡಿದ ನಂತರವೂ ತೆರಿಗೆ ಕಟ್ಟದವರ ವಿರುದ್ಧ ಬಿಬಿಎಂಪಿ ಕಾಯಿದೆ – 2020ರಲ್ಲಿನ ಅಸ್ತ್ರ ಬಳಸಿಕೊಂಡು ಸ್ಥಿರ, ಚರ ಮತ್ತು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡು ತೆರಿಗೆ ವಸೂಲಾತಿ ಕ್ರಮ ಕೈಗೊಳ್ಳಲಾಗುತ್ತಿದೆ. ಆಸ್ತಿ ತೆರಿಗೆಗೆ ಸಂಬಂಸಿದಂತೆ ವಲಯ ಜಂಟಿ ಆಯುಕ್ತರ ಮುಂದೆ ಸಲ್ಲಿಕೆಯಾಗಿರುವ ಮೇಲ್ಮನವಿಗಳನ್ನು ಆದಷ್ಟು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಆದೇಶಿಸಲಾಗಿದೆ.
ಡಾ. ಆರ್. ಎಲ್. ದೀಪಕ್, ವಿಶೇಷ ಆಯುಕ್ತ (ಕಂದಾಯ), ಬಿಬಿಎಂಪಿ
ಒಟ್ಟು 104 ಕಟ್ಟಡಗಳ ಸರ್ವೆ ಕಾರ್ಯ ಪೂರ್ಣಗೊಂಡಿದ್ದು, ಅದರ ವರದಿಯನ್ನು ಕೌನ್ಸಿಲ್ ಸಭೆಯಲ್ಲಿ ಮಂಡಿಸಲಾಯಿತು. 80 ಆಸ್ತಿಗಳ ಮಾಲೀಕರು ವಾಸ್ತವದ ವಿಸ್ತೀರ್ಣಕ್ಕಿಂತ ಕಡಿಮೆ ಲೆಕ್ಕ ತೋರಿಸಿರುವುದು ಸರ್ವೆಯಲ್ಲಿ ಕಂಡು ಬಂದಿತು. ಇದರಿಂದ 627 ಕೋಟಿ ತೆರಿಗೆ ವಸೂಲಾಗಬೇಕಿದೆ. ಕೇವಲ 80 ದೊಡ್ಡ ಕಟ್ಟಡಗಳ ವಿಸ್ತೀರ್ಣದ ಸುಳ್ಳು ಲೆಕ್ಕ ಬಯಲಿಗೆ ಬಂದಿದ್ದರಿಂದ ಬಿಬಿಎಂಪಿಗೆ ನೂರಾರು ಕೋಟಿ ರೂಪಾಯಿಯಷ್ಟು ವರಮಾನ ಸೋರಿಕೆಯಾಗಿರುವುದು ಬೆಳಕಿಗೆ ಬಂದಿದೆ. ಈ ಪೈಕಿ ಬಹುತೇಕ ಆಸ್ತಿ ಮಾಲೀಕರು ತೆರಿಗೆ ಕಟ್ಟದೆ, ಮೇಲ್ಮನವಿ ಸಲ್ಲಿಸಿದ್ದಾರೆ.
Read more
[wpas_products keywords=”deal of the day sale today offer all”]